ದಕ್ಷಿಣ ಕಾಶಿ ನಂಜನಗೂಡು ದೇಗುಲದಲ್ಲಿ ಹಣದ ದುರುಪಯೋಗ ಆರೋಪ: ತನಿಖೆಗೆ ಆದೇಶ

ನಂಜನಗೂಡು ನಂಜುಂಡೇಶ್ವರ ದೇವಾಲಯದ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಭಾರೀ ಹಣಕಾಸಿನ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. 25.86 ಕೋಟಿ ರೂ. ಆದಾಯದ ಪೈಕಿ 25.68 ಕೋಟಿ ರೂ. ವೆಚ್ಚ ತೋರಿಸಲಾಗಿದೆ. ವಿವಿಧ ಖರ್ಚುಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಸಮಗ್ರ ತನಿಖೆಗೆ ವ್ಯವಸ್ಥಾಪನ ಸಮಿತಿ ಆದೇಶಿಸಿದೆ.

ದಕ್ಷಿಣ ಕಾಶಿ ನಂಜನಗೂಡು ದೇಗುಲದಲ್ಲಿ ಹಣದ ದುರುಪಯೋಗ ಆರೋಪ: ತನಿಖೆಗೆ ಆದೇಶ
ನಂಜನಗೂಡು ದೇಗುಲ
Image Credit source: tv9
Edited By:

Updated on: Aug 27, 2026 | 9:07 AM

ಮುಖ್ಯಾಂಶಗಳು

  • ನಂಜನಗೂಡು ದೇಗುಲದ ಲೆಕ್ಕದಲ್ಲಿ ಅಕ್ರಮ ಶಂಕೆ
  • ₹4 ಕೋಟಿಗೂ ಹೆಚ್ಚು ದುರುಪಯೋಗ ಆರೋಪ
  • ವ್ಯವಸ್ಥಾಪನ ಸಮಿತಿಯಿಂದ ತನಿಖೆಗೆ ಆದೇಶ

ಮೈಸೂರು, ಆಗಸ್ಟ್ 27: ಮೈಸೂರು (Mysuru) ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿರುವ ಪ್ರಸಿದ್ಧ ಶ್ರೀ ನಂಜುಂಡೇಶ್ವರ ದೇವಾಲಯದ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಹಣಕಾಸಿನ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನದ ಆದಾಯ-ವೆಚ್ಚದ ಲೆಕ್ಕದಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ದೇವಾಲಯದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಆದೇಶಿಸಲಾಗಿದೆ.

ದೇವಾಲಯದ 2024-25ನೇ ಸಾಲಿನಲ್ಲಿ ಒಟ್ಟು ₹25.86 ಕೋಟಿ ಆದಾಯ ಬಂದಿದ್ದು, ₹25.68 ಕೋಟಿ ವೆಚ್ಚವಾಗಿದೆ ಎಂದು ಲೆಕ್ಕದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಕೇವಲ ₹17.84 ಲಕ್ಷ ಉಳಿತಾಯ ಉಳಿದಿದೆ. ಈ ಲೆಕ್ಕದ ಬಗ್ಗೆ ಸ್ಥಳೀಯರು ಹಾಗೂ ರೈತ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದು, ಈ ಹಿಂದಿನ ವರ್ಷಗಳಲ್ಲಿ ಸುಮಾರು ₹4 ಕೋಟಿಗೂ ಹೆಚ್ಚು ಉಳಿತಾಯವಾಗುತ್ತಿದ್ದ ಸಂದರ್ಭದಲ್ಲಿ 2024-25ರಲ್ಲಿ ಮಾತ್ರ ಉಳಿತಾಯ ಇಷ್ಟು ಕಡಿಮೆಯಾಗಿರುವುದೇಕೆ ಎಂಬ ಪ್ರಶ್ನೆ ಎತ್ತಿದ್ದಾರೆ.

ಪ್ರಸಾದ, ಲಾಡು ತಯಾರಿಕೆ ಸೇರಿದಂತೆ ಹಲವು ವೆಚ್ಚಗಳ ಬಗ್ಗೆ ಅನುಮಾನ

ದೇವಾಲಯದ ವಿವಿಧ ಖರ್ಚುಗಳ ಬಗ್ಗೆಯೂ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ. ಒಂದೇ ಹೊತ್ತು ಪ್ರಸಾದ ವಿತರಣೆ ನಡೆದ ವರ್ಷದಲ್ಲಿ ಸುಮಾರು ₹73 ಲಕ್ಷ ವೆಚ್ಚವಾಗಿದ್ದರೆ, ಮೂರು ಹೊತ್ತು ಪ್ರಸಾದ ವಿತರಿಸಿದ ವರ್ಷದಲ್ಲಿ ಕೇವಲ ₹46 ಲಕ್ಷ ವೆಚ್ಚವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಅದೇ ರೀತಿ, ಭಕ್ತರಿಂದ ಹಾಲು ಮತ್ತು ಮೊಸರು ಕೊಡುಗೆಯಾಗಿ ಬರುತ್ತಿದ್ದರೂ ₹3.18 ಲಕ್ಷ ಮೌಲ್ಯದ ಹಾಲು-ಮೊಸರು ಖರೀದಿ ಮಾಡಿರುವ ಲೆಕ್ಕದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಲಾಡು ತಯಾರಿಕೆಗೆ ₹3.50 ಕೋಟಿ, ಬಾಳೆಹಣ್ಣಿಗೆ ₹6.55 ಲಕ್ಷ, ಶಾಮಿಯಾನಕ್ಕೆ ₹17.84 ಲಕ್ಷ, ಪಾರ್ಕಿಂಗ್‌ಗೆ ₹37.88 ಲಕ್ಷ ಹಾಗೂ ಸಿಸಿ ಕ್ಯಾಮೆರಾ ದುರಸ್ತಿಗೆ ₹29.89 ಲಕ್ಷ ವೆಚ್ಚ ತೋರಿಸಿರುವುದನ್ನೂ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.

ಕಳಲೆ ದೇವಸ್ಥಾನದ ಲೆಕ್ಕದ ಮೇಲೂ ಪ್ರಶ್ನೆ

ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎನ್ನಲಾಗುತ್ತಿರುವ ಕಳಲೆ ದೇವಸ್ಥಾನಕ್ಕೂ ₹18 ಲಕ್ಷ ವೆಚ್ಚದ ಲೆಕ್ಕ ತೋರಿಸಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದರಲ್ಲಿ ₹14 ಲಕ್ಷ ಕಾಮಗಾರಿಗೆ ಹಾಗೂ ₹4 ಲಕ್ಷ ಜಾತ್ರೆ ಖರ್ಚಿಗೆ ಸಂಬಂಧಿಸಿದೆ ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಮೈಸೂರು ದಸರಾ ಗಜಪಯಣಕ್ಕೆ ಅದ್ಧೂರಿ ಚಾಲನೆ: ಅಭಿಮನ್ಯುಗೆ ಭಾವುಕ ಬೀಳ್ಕೊಡುಗೆಯ ಕ್ಷಣಗಳು

ಒಟ್ಟಾರೆ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ಸುಮಾರು ₹4ರಿಂದ ₹5 ಕೋಟಿ ದುರುಪಯೋಗವಾಗಿರುವ ಶಂಕೆ ಇದೆ ಎಂದು ರೈತ ಮುಖಂಡರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ನಂಜುಂಡೇಶ್ವರ ದೇವಾಲಯದ ಆದಾಯ-ವೆಚ್ಚದ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಿ, ತಪ್ಪು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ತನಿಖೆಗೆ ಆದೇಶಿಸಿರುವುದು ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us