ಖಾಸಗಿ ಸಾರಿಗೆಯವರ ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ನಾವು ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿ ತಂದಿದ್ದೇವೆ. ಅದರಿಂದ ಖಾಸಗಿ ಬಸ್ನವರಿಗೆ ನಷ್ಟ ಆಗಿದೆ ಎನ್ನುತ್ತಿದ್ದಾರೆ. ಖಾಸಗಿ ಸಾರಿಗೆಯವರು ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಸಾರಿಗೆಯವರ ಈ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ಸೆ.11: ಖಾಸಗಿ ಸಾರಿಗೆ ಒಕ್ಕೂಟ (Private Vehicle Association) ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಈಡೇರಿಸುವಂತೆ ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರು ಬಂದ್ಗೆ ಕರೆ ನೀಡಿವೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ಮಾತನಾಡಿದ ಅವರು ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರ, ಬಂದ್ ಮಾಡಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ನಾವು ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿ ತಂದಿದ್ದೇವೆ. ಅದರಿಂದ ಖಾಸಗಿ ಬಸ್ನವರಿಗೆ ನಷ್ಟ ಆಗಿದೆ ಎನ್ನುತ್ತಿದ್ದಾರೆ. ಖಾಸಗಿ ಸಾರಿಗೆಯವರು ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಸಾರಿಗೆಯವರ ಈ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಖಾಸಗಿ ಸಾರಿಗೆಯವರು ವಾಸ್ತವಕ್ಕೆ ದೂರವಾದ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಖಾಸಗಿ ಬಸ್‌ನವರು ಶಕ್ತಿ ಯೋಜನೆಯಿಂದ ನಮಗೆ ನಷ್ಟ ಆಗುತ್ತಿದೆ, ಹಣ ಕೊಡಿ ಅಂತ ಕೇಳುತ್ತಿದ್ದಾರೆ, ಅದೆಲ್ಲ ಸಾಧ್ಯವೇ? ಬಂದ್ ಹತ್ತಿಕ್ಕಲು ಅವಕಾಶ ಇಲ್ಲ. ಕಾನೂನಿಗೆ ತೊಂದರೆ ಆಗದ ರೀತಿಯಲ್ಲಿ ಬಂದ್ ಮಾಡಲಿ. ಬೇಡಿಕೆಗಳ ಬಗ್ಗೆ ಸಚಿವ ರಾಮಲಿಂಗರೆಡ್ಡಿ ಗಮನ ಹರಿಸುತ್ತಾರೆ ಎಂದರು.
ಇನ್ನು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರವಾಗಿ ಮಾತನಾಡಿದ ಅವರು ನಾವೇನು ಖುಷಿಯಿಂದ ನೀರು ಬಿಡುತ್ತಿಲ್ಲ. ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ ಆದೇಶದಂತೆ ನೀರು ಬಿಡುತ್ತಿದ್ದೇವೆ. ಸೆ.21ರಂದು ಸುಪ್ರೀಂಕೋರ್ಟ್ನಲ್ಲಿ ಕಾವೇರಿ ನದಿ ನೀರಿನ ವಿಚಾರಣೆ ಇದೆ. ನಮ್ಮ ವಕೀಲರು ರಾಜ್ಯದ ವಸ್ತುಸ್ಥಿತಿ ಬಗ್ಗೆ ಮನವರಿಕೆ ಮಾಡುತ್ತಾರೆ. ರಾಜ್ಯದ ರೈತರ ಹಿತದೃಷ್ಟಿ ಕಾಪಾಡುವುದು ನಮಗೆ ಮುಖ್ಯ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಮುಷ್ಕರ: ಇದನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಹಣ ವಸೂಲಿಗೆ ಇಳಿದ ವೈಟ್ ಬೋರ್ಡ್ ಕಾರುಗಳು
ಉಬರ್ ವಾಹನದವರ ಮುಷ್ಕರ ರಾಜಕೀಯ ಪ್ರೇರಿತ
ಖಾಸಗಿ ವಾಹನದವರು ಬಂದ್, ಹೋರಾಟ ಮಾಡುವ ಅಗತ್ಯವಿಲ್ಲ. ಖಾಸಗಿ ಬಸ್ ಚಾಲಕರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಆಟೋ, ಉಬರ್ ವಾಹನದವರ ಮುಷ್ಕರ ರಾಜಕೀಯ ಪ್ರೇರಿತ. ಪ್ರಯಾಣಿಕರಿಗೆ ತೊಂದರೆ ಕೊಡುವುದು ಒಳ್ಳೆಯದಲ್ಲ. ಖಾಸಗಿ ಸಾರಿಗೆ ಒಕ್ಕೂಟದ ಬಗ್ಗೆ ನನಗೆ ಸಿಂಪತಿ ಇದೆ. ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೇರೆ ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸುವ ಕೆಲಸ ಮಾಡುತ್ತೇವೆ. ಪ್ರಯಾಣಿಕರಿಗೆ ತೊಂದರೆ ಮಾಡೋದು ಸರಿಯಲ್ಲ ಅಂದುಕೊಂಡಿದ್ದೇನೆ. ನಾವು ಯಾವ ರೀತಿ ನಿರ್ಧಾರ ಕೈಗೊಳ್ಳಬಹುದು ಎಂಬ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ