ಉದಯಗಿರಿ ಗಲಭೆ: ಮೈಸೂರು ಚಲೋಗೆ ಅನುಮತಿ ನಿರಾಕರಣೆ, ಕೋರ್ಟ್ ಮೊರೆ ಹೋದ ಬಿಜೆಪಿ
ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆಯನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಮೈಸೂರು ಚಲೋ ಬೃಹತ್ ಜನಜಾಗೃತಿ ಸಭೆಗೆ ಅನುಮತಿ ನಿರಾಕರಿಸಲಾಗಿದೆ. ಪೊಲೀಸರ ನಿಷೇಧಾಜ್ಞೆಯನ್ನು ವಿರೋಧಿಸಿ ಬಿಜೆಪಿ ಹೈಕೋರ್ಟ್ ಮೊರೆ ಹೋಗಿದೆ. ಗಲಭೆ ಆರೋಪಿಗಳ ಮೇಲೆ UAPA ಅನ್ವಯಿಸಬೇಕು ಮತ್ತು NIA ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

ಮೈಸೂರು, ಫೆಬ್ರವರಿ 23: ಮೈಸೂರಿನ ಉದಯಗಿರಿಯಲ್ಲಿ (Udayagiri) ನಡೆದ ಗಲಭೆಯನ್ನು ಖಂಡಿಸಿ ಬಿಜೆಪಿ ಮೈಸೂರು ಚಲೋ ಬೃಹತ್ ಜನಜಾಗೃತಿ ಸಭೆಗೆ ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ. ಇನ್ನು ಸಭೆಗೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಹೈಕೋರ್ಟ್ ಮೊರೆ ಹೋಗಿದೆ. ಒಂದು ವೇಳೆ ಅನುಮತಿ ಸಿಕ್ಕರೆ ಬಿಜೆಪಿ ಮತ್ತೊಮ್ಮೆ ಮೈಸೂರು ಚಲೋ ನಡೆಸಲಿದೆ.
ಸಮಿತಿಯ ಸಂಚಾಲಕ ಮಹೇಶ್ ಕಡಗದಾಳು ಹೇಳಿದ್ದಿಷ್ಟು
ಈ ವಿಚಾರವಾಗಿ ಟಿವಿ9ಗೆ ಸಮಿತಿಯ ಸಂಚಾಲಕ ಮಹೇಶ್ ಕಡಗದಾಳು ಮಾಹಿತಿ ನೀಡಿದ್ದು, ಬಂಧಿತ ಆರೋಪಿಗಳ ಮೇಲೆ ಯುಎಪಿಎ (UAPA) ಕಾಯ್ದೆಯಡಿ ಪ್ರಕಣ ದಾಖಲಿಸಬೇಕು. ಸಮಗ್ರ ತನಿಖೆಯನ್ನು NIA ಮೂಲಕ ನಡೆಸಬೇಕು. ಈ ಹಿನ್ನೆಲೆ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯಿಂದ ಮೈಸೂರು ಚಲೋ ಬೃಹತ್ ಜನಜಾಗೃತಿ ಸಭೆ ಮಾಡಲಾಗುತ್ತಿತ್ತು. ಆದರೆ ಸಭೆಗೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೂ ನಿಶ್ಚಿತ ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದಯಗಿರಿ ಗಲಭೆ: ಪೊಲೀಸರ ಸಾಹಸಮಯ ಕಾರ್ಯದ ವಿಡಿಯೋ ವೈರಲ್
ಕಾರ್ಯಕ್ರಮಕ್ಕೆ ಮೈಸೂರು ಪೊಲೀಸರು ಅನುಮತಿ ನೀಡಿಲ್ಲ. ಹಾಗಾಗಿ ಈ ಸಂಬಂಧ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದೇವೆ. ನ್ಯಾಯಾಲಯದ ಮೂಲಕ ಅನುಮತಿ ಸಿಗುವ ಭರವಸೆ ಇದೆ ಎಂದಿದ್ದಾರೆ. ಇನ್ನು ನಾಳೆಯ ಮೈಸೂರಿನಲ್ಲಿ ಜನಾಂದೋಲನ ರ‍್ಯಾಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾಗಿಯಾಗಲಿದ್ದಾರೆ.
ಗಲಾಟೆಗೆ ಬಿಜೆಪಿ, RSS ಕಾರಣವೆಂದು ಆರೋಪಿಸಿ ಕೆಲ ಸಂಘಟನೆಗಳಿಂದ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪದಡಿ ಎರಡೂ ಕಾರ್ಯಕ್ರಮಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: ಮೈಸೂರು ಉದಯಗಿರಿ ಗಲಭೆಗೆ ಅಸಲಿ ಕಾರಣವೇನು? ಏನೇನಾಯ್ತು? ಇಲ್ಲಿದೆ ಸಮಗ್ರ ಮಾಹಿತಿ
ಇನ್ನು ಕೇಸ್ಗೆ ಸಂಬಂಧಿಸಿದಂತೆ ಮೌಲ್ವಿ ಮುಫ್ತಿ ಮುಸ್ತಾಕ್ ಮಕ್ಬೋಲಿಯನ್ನ ಗಲಭೆ ನಡೆದ 11 ದಿನಗಳ ಬಳಿಕ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಮೈಸೂರಿನ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.