ಸಂಪೂರ್ಣ ಅಧ್ಯಯನ ಬಳಿಕ ಮುಂದಿನ ಸಂಪುಟದಲ್ಲಿ ಬರ ತಾಲೂಕು ಘೋಷಣೆ: ಸಿಎಂ ಸಿದ್ದರಾಮಯ್ಯ
61 ತಾಲೂಕುಗಳು ಬರದ ಪಟ್ಟಿಗೆ ಸೇರಿವೆ. ಇನ್ನೂ 136 ತಾಲೂಕುಗಳ ಬರ ಅಧ್ಯಯನ ನಡೆಯುತ್ತಿದೆ. ಈ ಅಧ್ಯಯನದ ವರದಿ ಸೇರಿಸಿ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ಸೆ.11: ರಾಜ್ಯದಲ್ಲಿ ಬರ ಘೋಷಣೆ ಸಂಬಂಧಿಸಿದಂತೆ ಮುಂದಿನ ಸಂಪುಟದಲ್ಲಿ ಬರ ತಾಲೂಕು (Drought Taluku) ಘೋಷಣೆ ಮಾಡುತ್ತೇವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸದ್ಯಕ್ಕೆ 61 ತಾಲೂಕುಗಳು ಬರದ ಪಟ್ಟಿಗೆ ಸೇರಿವೆ. ಇನ್ನೂ 136 ತಾಲೂಕುಗಳ ಬರ ಅಧ್ಯಯನ ನಡೆಯುತ್ತಿದೆ. ಈ ಅಧ್ಯಯನದ ವರದಿ ಸೇರಿಸಿ ತೀರ್ಮಾನ ಮಾಡುತ್ತೇವೆ ಎಂದರು. ಇನ್ನು ಒಂದು ದೇಶ ಒಂದು ಚುನಾವಣೆ ವಿಚಾರವಾಗಿ ಮಾತನಾಡಿ ಇದು ಅಸಾಧ್ಯವಾದ ಮಾತು. ಈ ಯೋಚನೆ ಅವೈಜ್ಞಾನಿಕವಾಗಿದೆ ಎಂದರು.
ಒಂದೇ ಚುನಾವಣೆ ಹೇಗೆ ಸಾಧ್ಯ. ಕೆಲವೊಂದು ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಇರುತ್ತೆ. ಕೆಲವು ಕಡ ಅರ್ಧ ಸರ್ಕಾರ ನಡೆದಿರುತ್ತದೆ. ಇದು ಆಗದ ಕ್ರಮ. ಕರ್ನಾಟಕದ ಚುನಾವಣೆ ಫಲಿತಾಂಶದಿಂದ ಬಿಜೆಪಿ ಅವರು ದೃತಿಗೆಟ್ಟಿದ್ದಾರೆ. ಪ್ರಧಾನಿ ಮೋದಿ ಅವರು ಪ್ರಚಾರ ಮಾಡಿದ ಕಡೆ ಕಾಂಗ್ರೆಸ್ ಗೆದ್ದಿದೆ. ಅವರು ಬಂದು ಗಲ್ಲಿಗಲ್ಲಿಯಲ್ಲಿ ಪ್ರಚಾರ ಮಾಡಿದರು ನಮಗೆ 135 ಸ್ಥಾನ ಬಂದಿದೆ. ಇದೇ ಒತ್ತಡದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಿಂದೆ ಸಿದ್ದರಾಮಯ್ಯ ಬಿಜೆಪಿಗೆ ಸೇರಲು ಯತ್ನಿಸಿದ್ದರು ಎಂಬ ಹೆಚ್ಡಿ ಕುಮಾರಸ್ಚಾಮಿ ಆರೋಪ ವಿಚಾರವಾಗಿ ಮಾತನಾಡಿದ ಅವರು ನನ್ನ ಹೆಣವು ಕೂಡ ಬಿಜೆಪಿಗೆ ಹೋಗಲ್ಲ. ಕೋಮುವಾದಿಗಳ ವಿರುದ್ಧ ನನ್ನ ಹೋರಾಟ ನಿರಂತರವಾಗಿ ಇರುತ್ತೆ. ಕೋಮುವಾದಿಗಳ ಜೊತೆ ನಾನು ಎಂದಿಗೂ ರಾಜಿಯಾಗುವುದಿಲ್ಲ. ನಾನು ಬಿಜೆಪಿಗೆ ಹೋಗುತ್ತೇನೆ ಅಂದರೇ ಯಾರಾದರೂ ನಂಬುತ್ತಾರಾ? ಯಾರನ್ನೋ ಯಾವುದೋ ಸಂದರ್ಭದಲ್ಲಿ ಭೇಟಿ ಮಾಡಿರುತ್ತೇವೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದೆ, ಈ ಹಿಂದೆ ಯಾವುದೊ ಸಂದರ್ಭದಲ್ಲಿ ಎಲ್ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿದ್ದೆ. ಅದಕ್ಕೆಲ್ಲಾ ಈ ಅರ್ಥ ಕಟ್ಟುವುದಕ್ಕೆ ಆಗುತ್ತಾ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಖಾಸಗಿ ಸಾರಿಗೆಯವರ ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಖಾಸಗಿ ಸಾರಿಗೆಯವರು ವಾಸ್ತವಕ್ಕೆ ದೂರವಾದ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಖಾಸಗಿ ಬಸ್‌ನವರು ಶಕ್ತಿ ಯೋಜನೆಯಿಂದ ನಮಗೆ ನಷ್ಟ ಆಗುತ್ತಿದೆ, ಹಣ ಕೊಡಿ ಅಂತ ಕೇಳುತ್ತಿದ್ದಾರೆ, ಅದೆಲ್ಲ ಸಾಧ್ಯವೇ? ಬಂದ್ ಹತ್ತಿಕ್ಕಲು ಅವಕಾಶ ಇಲ್ಲ. ಕಾನೂನಿಗೆ ತೊಂದರೆ ಆಗದ ರೀತಿಯಲ್ಲಿ ಬಂದ್ ಮಾಡಲಿ. ಬೇಡಿಕೆಗಳ ಬಗ್ಗೆ ಸಚಿವ ರಾಮಲಿಂಗರೆಡ್ಡಿ ಗಮನ ಹರಿಸುತ್ತಾರೆ ಎಂದರು.
ಇನ್ನು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರವಾಗಿ ಮಾತನಾಡಿದ ಅವರು ನಾವೇನು ಖುಷಿಯಿಂದ ನೀರು ಬಿಡುತ್ತಿಲ್ಲ. ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ ಆದೇಶದಂತೆ ನೀರು ಬಿಡುತ್ತಿದ್ದೇವೆ. ಸೆ.21ರಂದು ಸುಪ್ರೀಂಕೋರ್ಟ್ನಲ್ಲಿ ಕಾವೇರಿ ನದಿ ನೀರಿನ ವಿಚಾರಣೆ ಇದೆ. ನಮ್ಮ ವಕೀಲರು ರಾಜ್ಯದ ವಸ್ತುಸ್ಥಿತಿ ಬಗ್ಗೆ ಮನವರಿಕೆ ಮಾಡುತ್ತಾರೆ. ರಾಜ್ಯದ ರೈತರ ಹಿತದೃಷ್ಟಿ ಕಾಪಾಡುವುದು ನಮಗೆ ಮುಖ್ಯ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ