ಮೈಸೂರು ದಸರಾ 2024: ಇಂದು ವಿಶ್ವವಿಖ್ಯಾತ ಜಂಬೂಸವಾರಿ, ಸಿಎಂ ಸಿದ್ದರಾಮಯ್ಯ ಚಾಲನೆ
ನವರಾತ್ರಿ ಬಳಿಕ ಬರುವುದು ವಿಜಯದಶಮಿ. ಈ ದಿನ ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದೆ. 750ಕೆಜಿಯ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ರಾಜಗಾಂಭಿರ್ಯದಿಂದ ಸಾಗುತ್ತಾನೆ. ಜಂಬೂಸವಾರಿ ನಡೆಯುವ ಸಮಯ, ಇಂದು ಏನೆಲ್ಲ ಕಾರ್ಯಕ್ರಮಗಳು ನಡೆಯುತ್ತವೆ ಎಂಬ ಮಾಹಿತಿ ಇಲ್ಲಿದೆ.
ಮೈಸೂರು, ಅಕ್ಟೋಬರ್ 12: ಇಂದು (ಅ.12) ವಿಜಯದಶಮಿ (ದಸರಾ) (Dasara) ನಿಮಿತ್ತ ಅರಮನೆ ನಗರಿ ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದೆ. 750 ಕೆಜಿ ತೂಕದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು (Abhimanyu) ಆನೆ ರಾಜ ಗಾಂಭಿರ್ಯದಿಂದ ರಾಜಬೀದಿಗಳಲ್ಲಿ ಸಾಗುತ್ತಾನೆ (Jambu Savari).
ಬೆಳಗ್ಗೆ 8ಕ್ಕೆ ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಅರಮನೆಗೆ ಆಗಮಿಸುತ್ತದೆ. ನಂತರ 10.15ಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉತ್ತರ ಪೂಜೆ ಮಾಡಲಿದ್ದಾರೆ. ಈ ವೇಳೆ ಅರಮನೆಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಸವಾರಿ ತೊಟ್ಟಿಗೆ ಆಗಮಿಸಲಿವೆ. ಬಳಿಕ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ 10.45ರಿಂದ ಬೆಳಗ್ಗೆ 11ರೊಳಗೆ ಜಟ್ಟಿ ಕಾಳಗ ನಡೆಯುತ್ತದೆ.
ನಂತರ 11.20 ರಿಂದ 11.45ರವರೆಗೆ ಅರಮನೆ ಅಂಗಳದ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ ಸಾಗುತ್ತದೆ. ಇಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬನ್ನಿಪೂಜೆ ನೆರವೇರಿಸುತ್ತಾರೆ. ನಂತರ ಅರಮನೆಗೆ ಆಗಮಿಸಿ ಕಂಕಣ ವಿಸರ್ಜನೆ ಮಾಡುತ್ತಾರೆ.
ಮಧ್ಯಾಹ್ನ ಶುಭ ಮಕರ ಲಗ್ನದಲ್ಲಿ 1.41ರಿಂದ 2.10ರ ನಡುವೆ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಸಂಜೆ ಕುಂಭ ಲಗ್ನ 4 ರಿಂದ 4.30ರ ನಡುವೆ ಜಂಬೂಸವಾರಿಗೆ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಜಂಬೂಸವಾರಿ ವೀಕ್ಷಿಸಲು ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಜಗಮಗಿಸೋ ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಹೇಗಿರಲಿದೆ ನಂದಿ ಧ್ವಜ ಸ್ತಂಭ
ಮೈಸೂರಿನ ಮಹದೇವಪ್ಪ ಕುಟುಂಬದ ಐದು ತಲೆ ಮಾರುಗಳು ನಂದಿಧ್ವಜ ಸ್ತಂಭ ನಿರ್ವಹಣೆ ಮಾಡುತ್ತಿವೆ. 130 ಕೆಜಿ ತೂಕದ ನಂದಿಧ್ವಜ ಸ್ಥಂಭ ಒಟ್ಟು 33 ಅಡಿ ಇದೆ. ನಂದಿ ಧ್ವಜ ಸ್ತಂಭ ನಂದಿ ವಿಗ್ರಹ, ತಟ್ಟೆ, ಬಿರಡೆ, ಪಂಚ ಕಳಸ ಮತ್ತು ನಂದಿ ಧ್ವಜವನ್ನು ಒಳಗೊಂಡಿದೆ. ನಂದಿ ಧ್ವಜ ಸ್ತಂಭ ದಕ್ಷ ಬ್ರಹ್ಮನ ಕಥೆಯನ್ನು ಒಳಗೊಂಡಿದೆ. ಶಿವನ ಲಾಂಛನ ನಂದಿಗೆ ಪೂಜೆ ಮಾಡಲಾಗುತ್ತದೆ.
ಹೇಗಿದೆ ಅಂಬಾರಿ
ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅತ್ಯಂತ ಆಕರ್ಷಕವಾಗಿ ಕೆತ್ತಲಾಗಿದೆ. ಹಿಂದೆ ಅಂಬಾರಿಯಲ್ಲಿ ಮಹಾರಾಜರು ಕುಳಿತು ಸಾಗುತ್ತಿದ್ದರು. ಅಂಬಾರಿಯ ಒಳಗೆ ಇಬ್ಬರು ಕುಳಿತುಕೊಳ್ಳಲು ಅವಕಾಶವಿದೆ. ಅಂಬಾರಿಯಲ್ಲಿ ಕುಳಿತುಕೊಳ್ಳಲು ರತ್ನಗಂಬಳಿಯ ಮೆತ್ತನೆಯ ಹಾಸಿಗೆ ಇರುತ್ತದೆ. ಅಂಬಾರಿ ಮೇಲ್ಭಾಗದಲ್ಲಿ ಎರಡು ಪಂಚಕಳಸ, ಆಕರ್ಷಕ ಹೂವಿನ ಚಿತ್ತಾರವಿದೆ. ಅಂಬಾರಿ ಮೇಲೆ ಕೆಂಪು ಹಾಗೂ ಹಸಿರು ದೀಪ ಅಳವಡಿಸಲಾಗಿದೆ. ಅಂಬಾರಿಯಲ್ಲಿ ದರ್ಬಾರ್ ಹಾಲ್ ಮಾದರಿಯ 16 ಸ್ಥಂಭಗಳುಗಳಿವೆ.
ಕೆಳ ಭಾಗದಲ್ಲಿ ಸಿಂಹದ ಕಾಲು ಮತ್ತು ಮುಖ ಇದೆ. ರಾಜ ಆಳ್ವಿಕೆಯ ನಂತರ ಮೊದಲು ಅಂಬಾರಿಯಲ್ಲಿ ಕನ್ನಡಾಂಬೆ ಭುವನೇಶ್ವರಿ ಮೂರ್ತಿ ಮೆರವಣಿಗೆ ಮಾಡಲಾಯಿತು. ನಂತರ ನಾಡದೇವತೆ ತಾಯಿ ಚಾಮುಂಡೇಶ್ವರಿ ಮೂರ್ತಿ ಮೆರವಣಿಗೆ ಮಾಡಲಾಗುತ್ತಿದೆ.
ಪೊಲೀಸ್ ಬಿಗಿ ಬಂದೋಬಸ್ತ್
ಇಂದು ವಿಶ್ವವಿಖ್ಯತ ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ಬಾರಿಯ ದಸರಾ ಮಹೋತ್ಸವಕ್ಕೆ ಎರಡು ಹಂತದ ಭದ್ರತೆ ಮಾಡಲಾಗಿದೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ದಸರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ನಾಲ್ಕ ಸಾವಿರಕ್ಕೂ ಹೆಚ್ಚು ಪೊಲೀಸರು ಕಾವಲು ಇದ್ದಾರೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗ ಸೇರಿದಂತೆ ಆಯಕಟ್ಟಿನ ಜನನಿಬಿಡ ಸ್ಥಳದಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:41 am, Sat, 12 October 24