
ಬೆಂಗಳೂರು, (ಜೂನ್ 19): ಕರ್ನಾಟಕ ವಿಧಾನಪರಿಷತ್ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ (Karnataka Assembly Council Elections) ಕಾಂಗ್ರೆಸ್ನ (Congress) ಐವರು, ಬಿಜೆಪಿಯ (BJP)ಇಬ್ಬರು ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.ಈ ಫಲಿತಾಂಶ ರಾಜ್ಯ ರಾಜಕಾರಣದ ನಿರೀಕ್ಷೆಯಂತೆಯೇ ಆಗಿದೆ. ಆದ್ರೆ ಅಚ್ಚರಿ ಎಂಬಂತೆ, ರಾಜ್ಯ ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕಿದ್ದ ಬಿಜೆಪಿ, ಜೆಡಿಎಸ್ ಶಾಸಕರು ಪಕ್ಷಕ್ಕೆ ಕೈಕೊಟ್ಟಿದ್ದು, 11 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಹಾಕಿದ್ದಾರೆ. ಇದು, ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ಇದೆ ಅಂತಾ ಸದಾ ದಾಳ ಉರುಳುತ್ತಿದ್ದ ದೋಸ್ತಿಗಳಿಗೆ ಮುಖಭಂಗವಾಗುವಂತೆ ಮಾಡಿದೆ. ಅಲ್ಲದೇ ಇದೀಗ ದೋಸ್ತಿಗಳ ನಡುವೆ ಅಡ್ಡಮತದಾನದ (Cross Voting) ಸಂಖ್ಯೆಯ ಗೊಂದಲ ಸೃಷ್ಟಿಯಾಗಿದೆ. ಇನ್ನೊಂದೆಡೆ ಅಡ್ಡಮತದಾನವನ್ನು ಗಂಭಿರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಬುಲಾವ್ ನೀಡಿದೆ.
11 ಎನ್ಡಿಎ ಶಾಸಕರು ಅಡ್ಡಮತದಾನವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ನಾಯಕರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಅಡ್ಡಮತದಾನದಿಂದ ಅಸಮಾಧಾನಗೊಂಡಿರುವ ಹೈಕಮಾಂಡ್ ಈ ಬಗ್ಗೆ ಚರ್ಚಿಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ಕೊಟ್ಟಿದೆ.
ಹೌದು…ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿಗಳ ನಡುವೆ ಅಡ್ಡಮತದಾನದ ಸಂಖ್ಯೆಯ ಗೊಂದಲ ಸೃಷ್ಟಿಯಾಗಿದೆ. ಒಟ್ಟು 11 ಶಾಸಕರು ಅಡ್ಡಮತದಾನ ಮಾಡಿದ್ದಾರೆ ಅನ್ನೋದು ಅಧಿಕೃತ ಮಾಹಿತಿ. ಆದ್ರೆ ಈ ಸಂಖ್ಯೆಯಲ್ಲಿ ಬಿಜೆಪಿಯವರು ಎಷ್ಟು? ಜೆಡಿಎಸ್ ಶಾಸಕರು ಇನ್ನೆಷ್ಟು ಎನ್ನುವ ಪ್ರಶ್ನೆ ಎದ್ದಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಪಕ್ಷದ ನಾಲ್ವರು ಶಾಸಕರು ಅಡ್ಡಮತದಾನ ಮಾಡಿರೋದಾಗಿ ಹೇಳ್ತಿದ್ದಾರೆ. ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಳ ಪಡೆಯ ಆರೇಳು ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದಾರೆ ಅಂತಿದ್ದಾರೆ. ಹೀಗಾಗಿ ಮೈತ್ರಿ ನಾಯಕರ ನಡುವೆ ಅಂಕಿ ಸಂಖ್ಯೆಯ ಗೊಂದಲ ಇರುವುದು ಇಲ್ಲಿ ಗೆದ್ದು ಕಾಣುತ್ತಿದೆ.
ರಾಜ್ಯ ರಾಜಕಾರಣದಲ್ಲಿ ಬದಲಾಗುತ್ತಿರುವ ರಾಜಕೀಯ ಸಮೀಕರಣಗಳ ಪ್ರಭಾವ ಅಡ್ಡಮತದಾನದ ಮೇಲೆ ಬಿದ್ದಿದೆ ಅನ್ನೋದು ರಾಜಕೀಯ ವಿಶ್ಲೇಷಣೆ. ಕಾಂಗ್ರೆಸ್ ಬೆಂಬಲಿಸಿದವರಿಗೆ ಮುಂದಿನ ಚುನಾವಣೆಗೆ ಟಿಕೆಟ್, ಬಿಜೆಪಿ-ಜೆಡಿಎಸ್ ಶಾಸಕರ ಅಭಿವೃದ್ಧಿಗೆ ಅನುದಾನದ ಭರವಸೆ ಕೊಟ್ಟಿರೋ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ. ಕೇಸರಿ-ದಳ ಶಾಸಕರಿಗೆ ಸಕಲ ರೀತಿಯಲ್ಲಿ ಸಹಾಯ ಹಸ್ತ ಭರವಸೆ ಕಾರಣಕ್ಕೆ ಕ್ರಾಸ್ ವೋಟಿಂಗ್ ಆಗಿರೋದಾಗಿ ತಿಳಿದುಬಂದಿದೆ.
ಇನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು ಸಂಖ್ಯಾಬಲ ಇದ್ದದಿದ್ರೂ ಜೆಡಿಎಸ್ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದರು. ಹೀಗೆ ತಮ್ಮದೇ ಪಕ್ಷದ ಶಾಸಕರ ನಿಷ್ಠೆಯನ್ನ ಸತ್ವಪರೀಕ್ಷೆಗೆ ಒಳಪಡಿಸಿದ್ದರು. ಆದ್ರೆ ಒಂದಿಬ್ಬರು ಶಾಸಕರು ಅಡ್ಡಮತದಾನ ಮಾಡೋ ಬಗ್ಗೆ ಹೆಚ್ಡಿಕೆಗೆ ನಿರೀಕ್ಷೆ ಇತ್ತಂತೆ. ಆದ್ರೆ ಮೂಲಗಳ ಮಾಹಿತಿ ಪ್ರಕಾರ ನಾಲ್ಕೈದು ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಡ್ಡಮತದಾನ ಮಾಡಿದ್ದಾರೆ. ಈ ಬೆಳವಣಿಗೆ ಹೆಚ್ಡಿಕೆಗೆ ಬೇಸರ ತರಿಸಿದೆ. ಹೀಗಾಗಿ ಕುಮಾರಸ್ವಾಮಿ ಅಡ್ಡಮತದಾನವನ್ನ ನಂಬಿಕೆ ದ್ರೋಹ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಪರಿಷತ್ ಪ್ರತಿಷ್ಠೆಯ ಕದನದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ರಾಜ್ಯ ಕಾಂಗ್ರೆಸ್ನೊಳಗೆ ಆತಂರಿಕ ಕಲಹ ಅಂತಿದ್ದ ವಿಪಕ್ಷಗಳಲ್ಲೇ ದೊಡ್ಡ ಬಿರುಕು ಇರೋದು ಬಟಾಬಯಲಾಗಿದೆ. ಮೈತ್ರಿಯೊಳಗಿನ ಅಸಮಾಧಾನ, ಗೊಂದಲ ಹಾಗೂ ಪಕ್ಷದ ಮೇಲಿನ ಬೇಸರದ ಬಗ್ಗೆ ಸದ್ಯ ರಾಜಕೀಯ ವಿಶ್ಲೇಷಣೆ ನಡೀತಿದೆ.
ಒಂದಿಬ್ಬರು ಶಾಸಕರು ಅಡ್ಡಮತದಾನ ಮಾಡಬಹುದು ಎಂದು ಕುಮಾರಸ್ವಾಮಿ ಅವರು ಮೊದಲೇ ನಿರೀಕ್ಷೆ ಮಾಡಿದ್ದರು. ಆದ್ರೆ, ನಿರೀಕ್ಷೆಗಿಂತ ಹೆಚ್ಚಿನ ಶಾಸಕರು ಅಡ್ಡಮತದಾನ ಮಾಡಿರುವುದು ಕುಮಾರಸ್ವಾಮಿಯ ಆಕ್ರೋಶ, ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರು JDS ಶಾಸಕಾಂಗ ಸಭೆ ಕರೆದಿದ್ದಾರೆ. ಇಂದು (ಜೂನ್ 19) ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಶಾಸಕಾಂಗ ಸಭೆ ನಡೆಯಲಿದೆ. ಈ ಮೂಲಕ ಅಡ್ಡ ಮತದಾನ ಮಾಡಿದವರ ಪತ್ತೆ ಕೆಲಸ ನಡೆದಿದೆ. ಅಲ್ಲದೇ ಅಡ್ಡ ಮತದಾನ ಮಾಡಿದವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಕೆಲ ಶಾಸಕರ ತಲೆದಂಡವಾಗುವ ಸಾಧ್ಯತೆಗಳಿವೆ.
ಅಡ್ಡಮತದಾನ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲ ಶಾಸಕರು, ತಮ್ಮ ನಾಯಕರುಗಳನ್ನ ಭೇಟಿ ಮಾಡುತ್ತಿದ್ದಾರೆ. ಬೈರತಿ ಬಸವರಾಜ್, ಚಂದ್ರು ಲಮಾಣಿ ಹಾಗೂ ಕೃಷ್ಣಾ ನಾಯ್ಕ್ ವಿರುದ್ಧ ಅಡ್ಡಮತದಾನ ಆರೋಪ ಕೇಳಿಬಂದಿದೆ. ಹೀಗಾಗಿ ಈ ಎಲ್ಲಾ ಶಾಸಕರು ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ನಾವು ನಿಗದಿ ಮಾಡಿದ್ದ ನಾಲ್ಕ ಮತಗಳು ಜೆಡಿಎಸ್ ಗೆ ಹೋಗಿವೆ. ದುರ್ಯೋಧನ ಐಹೊಳೆ, ಚಂದ್ರು ಲಮಾಣಿ, ಕೃಷ್ಣಾ ನಾಯ್ಕ್ ಮತ್ತು ಯತ್ನಾಳ್ ಹೆಸರು ಮಾಧ್ಯಮದಲ್ಲಿ ಕೆಲವು ಬರುತ್ತಿರುವ ಕಾರಣ ಕೃಷ್ಣಾ ನಾಯ್ಕ್ ಮತ್ತು ಚಂದ್ರು ಲಮಾಣಿ ಬೇಸರಗೊಂಡಿದ್ದಾರೆ. ನಮ್ಮ ವರದಿ ಬರುವವರೆಗೂ ಯಾರ ಮೇಲೂ ಅನುಮಾನ ವ್ಯಕ್ತಪಡಿಸುವುದಿಲ್ಲ. ಯಾರ ಮೇಲೂ ಅನುಮಾನ ಪಡುವುದು ಬೇಡ. ವರದಿ ಬಂದ ಮೇಲೆ ನಾವೇ ಅಡ್ಡ ಮತದಾನ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ದೋಸ್ತಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ನಲ್ಲಿ ಮಹತ್ವ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಅಂತಿಮವಾಗಿ ಅಡ್ಡಮತದಾನ ಮಾಡಿದವರನ್ನು ಪತ್ತೆ ಮಾಡಿ ಯಾವ ಕ್ರಮಕೈಗೊಳ್ಳುತ್ತವೆ ಎಂದು ಕಾದುನೋಡಬೇಕಿದೆ.
Published On - 3:57 pm, Fri, 19 June 26