
ಬೆಂಗಳೂರು, ನವೆಂಬರ್ 1: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಬಹುಚರ್ಚಿತ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆ ಮತ್ತು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೀಡಿದ್ದ ಹೇಳಿಕೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಈ ಸರ್ಕಾರದ ಆಡಳಿತ ಯಂತ್ರ ಹಾಗೂ ಅಧಿಕಾರಿಗಳು ಈ ಕುಮಾರಸ್ವಾಮಿಯನ್ನು ಅಷ್ಟು ಸುಲಭವಾಗಿ ಎದುರಿಸಲು ಅಥವಾ ಟಚ್ ಮಾಡಲು ಸಾಧ್ಯವಿಲ್ಲ’ ಎಂದು ನೇರ ಸವಾಲು ಒಡ್ಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ಅಪ್ಲೋಡ್ ಮಾಡಲು ಬಳಸಲಾದ ಮೊಬೈಲ್ ಫೋನ್ ದೆಹಲಿಯಲ್ಲಿರುವ ಹೆಚ್‌ಡಿಕೆ ನಿವಾಸದ ಬಳಿ ವಿನಿಮಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೀಡಿದ್ದ ಹೇಳಿಕೆಯನ್ನು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು. ‘ಯಾರೀ ಅದು ಕಮಿಷನರ್? ಅವರು ಪೊಲೀಸ್ ಕಮಿಷನರಾ ಅಥವಾ ಹೆಡ್ ಕ್ಲರ್ಕಾ? ಕರ್ಕ್ ತರ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಹುದ್ದೆ ಮತ್ತು ಜಾಗವನ್ನು ಉಳಿಸಿಕೊಳ್ಳಲು ಯಾರ ಹಂಗಿನಲ್ಲೋ ಈ ರೀತಿ ಜವಾಬ್ದಾರಿರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ಜಾಗ ಉಳಿಸಿಕೊಳ್ಳಲು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ನನಗೂ ಚೆನ್ನಾಗಿ ಗೊತ್ತಿದೆ’ ಎಂದು ಕಿಡಿಕಾರಿದರು.

ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ‘ಟ್ರೇಲರ್ ಅಷ್ಟೇ ಮುಗಿದಿದೆ, ಪಿಕ್ಚರ್ ಅಭೀ ಬಾಕಿ ಹೈ’ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ‘ನಾನು ಮೂಲತಃ ಸಿನಿಮಾ ನಿರ್ಮಾಣ ಮಾಡಿದವನು, ಇವರಿಂದ ಸಿನಿಮಾ ಕಲಿಯುವ ಅಗತ್ಯವಿಲ್ಲ. ಇವರು ಈಗ ಸಿನಿಮಾ ಮಾಡಲು ಹೊರಟಿದ್ದಾರೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ನಿಜವಾದ ಪಿಕ್ಚರ್ ತೋರಿಸುತ್ತೇನೆ. ಈ ಸ್ಟಿಂಗ್ ಆಪರೇಷನ್ ಪ್ರಕರಣ ಯಾರಿಗೆ ತಿರುಗುಬಾಣ ಆಗಲಿದೆ, ಸರ್ಕಾರ ಯಾರನ್ನೆಲ್ಲ ರಕ್ಷಣೆ ಮಾಡುತ್ತಿದೆ ಮತ್ತು ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ದಾಖಲೆ ಸಮೇತ ವಿವರಿಸುತ್ತೇನೆ’ ಎಂದರು.
ಇದನ್ನೂ ಓದಿ: ಸ್ಟಿಂಗ್ ಪ್ರಕರಣ: ರೋಚಕ ಕಹಾನಿಯನ್ನು ಸಿಸಿಬಿ ಪೊಲೀಸರು ಬೇಧಿಸಿದ್ಹೇಗೆ, ಹೆಚ್‌ಡಿಕೆ ಲಿಂಕ್ ಏನು? ಇಲ್ಲಿದೆ ಅಚ್ಚರಿಯ ಮಾಹಿತಿ
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದು ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ತಮ್ಮ ಬೆಂಬಲಿಗರು ಅಥವಾ ಕಾರ್ಯಕರ್ತರು ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:39 pm, Sun, 1 November 26