ಊಟಿ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೆ ಈ ವಿಚಾರ ಗಮನಿಸಿ: ಏ 2ರಂದು ಹೋಗೋದು ಬೇಡವೇ ಬೇಡ
ಊಟಿ, ಇದು ಕರ್ನಾಟಕದ ಪ್ರವಾಸಿಗರ ನೆಚ್ಚಿನ ತಾಣ. ರಾಜ್ಯದಿಂದ ಅನೇಕ ಪ್ರವಾಸಿಗರು ಊಟಿಗೆ ಭೇಟಿ ನೀಡುತ್ತಿರುತ್ತಾರೆ. ಆದರೆ, ಇದೀಗ ಊಟಿ ಪ್ರವಾಸದ ಯೋಜನೆ ಮಾಡುತ್ತಿದ್ದರೆ ಕೆಲವೊಂದು ವಿಚಾರಗಳನ್ನು ಗಮನಿಸಿ ಮುಂದಡಿ ಇಡುವುದು ಒಳಿತು. ಅದರಲ್ಲೂ ಏಪ್ರಿಲ್ 2 ರಂದು ಊಟಿ ಪ್ರವಾಸಕ್ಕೆ ಪ್ಲಾನ್ ಮಾಡದಿರುವುದೇ ಒಳಿತು. ಇದಕ್ಕೆ ಕಾರಣವೇನು? ಊಟಿ ಪ್ರವಾಸಕ್ಕೆ ಪ್ಲಾನ್ ಮಾಡುವುದಿದ್ದರೆ ಏನೇನು ಮಾಡಬೇಕೆಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಮಾರ್ಚ್ 29: ಈ ವರ್ಷದ ಮಾರ್ಚ್ನಿಂದ ಜೂನ್ ವರೆಗೆ ತಮಿಳುನಾಡಿನ ನೀಲಗಿರಿ ವ್ಯಾಪ್ತಿಯ ಊಟಿ (Ooty) ಮತ್ತು ಕೊಡೈಕೆನಾಲ್ (Kodaikanal) ಗಿರಿಧಾಮಗಳಿಗೆ ಪ್ರವೇಶಿಸುವ ಪ್ರವಾಸಿ ವಾಹನಗಳ ಮೇಲೆ ಮಿತಿಯನ್ನು ನಿಗದಿಪಡಿಸಿ ಮದ್ರಾಸ್ ಹೈಕೋರ್ಟ್ (Madras High Court) ಇತ್ತೀಚೆಗೆ ಆದೇಶಿಸಿತ್ತು. ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟುವ ಮತ್ತು ಸ್ಥಳೀಯ ನಿವಾಸಿಗಳಿಗೆ ಆಗುವ ಸಮಸ್ಯೆಗಳನ್ನು ತಡೆಯುವ ಉದ್ದೇಶದೊಂದಿಗೆ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ತಡೆಗಟ್ಟುವುದಕ್ಕಾಗಿ ಹೈಕೋರ್ಟ್ ಈ ಆದೇಶ ಪ್ರಕಟಿಸಿತ್ತು. ಪರಿಣಾಮವಾಗಿ ಊಟಿ, ಕೊಡೈಕೆನಾಲ್ ಪ್ರವಾಸಿಗರು ಇ-ಪಾಸ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಪ್ರವಾಸಿಗರ ಮೇಲಿನ ನಿರ್ಬಂಧಕ್ಕೆ ಸ್ಥಳೀಯ ವ್ಯಾಪಾರಿಗಳು ಸೇರಿದಂತೆ ಪ್ರವಾಸೋದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇ-ಪಾಸ್ ನಿರ್ಬಂಧಗಳಿಂದ ಅಸಮಾಧಾನಗೊಂಡಿರುವ ಊಟಿಯ ವ್ಯಾಪಾರಿಗಳು, ಇದು ನಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇಂದು (ಮಾರ್ಚ್ 29 ರಂದು) ತಮ್ಮ ಅಂಗಡಿಗಳ ಮುಂದೆ ಮತ್ತು ವಾಹನಗಳ ಮೇಲೆ ಕಪ್ಪು ಬಾವುಟಗಳನ್ನು ಕಟ್ಟುವ ಮೂಲಕ ಅವರು ಪ್ರತಿಭಟಿಸುತ್ತಿದ್ದಾರೆ. ಇದಲ್ಲದೆ, ಏಪ್ರಿಲ್ 2 ರಂದು ನೀಲಗಿರಿಯಲ್ಲಿ ಬಂದ್ ಘೋಷಿಸಲಾಗಿದೆ.
ಊಟಿ, ಕೊಡೈಕೆನಾಲ್ಗೆ ವಾಹನ ನಿರ್ಬಂಧ ವಿವರ
ಏಪ್ರಿಲ್ 1 ರಿಂದ ಜೂನ್ 30 ರವರೆಗೆ ಊಟಿ, ಕೊಡೈಕೆನಾಲ್ ಪ್ರವಾಸಿ ವಾಹನಗಳ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ವಾರದ ದಿನಗಳಲ್ಲಿ 6000 ವಾಹನಗಳಿಗೆ ಮಾತ್ರ ನೀಲಗಿರಿ ಜಿಲ್ಲೆಗೆ ಪ್ರವೇಶಿಸಲು ಅವಕಾಶವಿರುತ್ತದೆ. ಆದರೆ ಶನಿವಾರ ಮತ್ತು ಭಾನುವಾರದಂದು 8000 ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ನೀಲಗಿರಿ ಜಿಲ್ಲೆಯಲ್ಲಿ ನೋಂದಾಯಿಸಲಾದ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ.
ಊಟಿ, ಕೊಡೈಕೆನಾಲ್ ಪ್ರವೇಶಿಸಲು ಇ-ಪಾಸ್ ಅಗತ್ಯ
ಕರ್ನಾಟಕದಿಂದ ಹೋಗುವರ ಪ್ರವಾಸಿಗರು, ಊಟಿ, ಕೊಡೈಕೆನಾಲ್ ಪ್ರವೇಶಿಸಲು ಇ-ಪಾಸ್ ಪಡೆಯುವುದು ಅಗತ್ಯವಾಗಿದೆ. ನೀಲಗಿರಿ ಜಿಲ್ಲೆ ಪ್ರವೇಶಿಸಲು ಪಾಸ್ ಪಡೆಯಬೇಕಿದೆ.
ಊಟಿ, ಕೊಡೈಕೆನಾಲ್ಗೆ ಇ-ಪಾಸ್ ಪಡೆಯುವುದು ಹೇಗೆ?
ಊಟಿಗೆ (ಉದಕಮಂಡಲಂ) ಹಾಗೂ ಕೊಡೈಕೆನಾಲ್ಗೆ ತೆರಳಲು ಇ-ಪಾಸ್ ಪಡೆಯಲು, ತಮಿಳುನಾಡು ಸರ್ಕಾರದ ಅಧಿಕೃತ ವೆಬ್‌ಸೈಟ್ epass.tnega.org ಗೆ ಭೇಟಿ ನೀಡಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಬಳಿಕ ಪ್ರಯಾಣಿಕರ ಸಂಖ್ಯೆ, ವಾಹನದ ಪ್ರಕಾರ, ಇಂಧನ ಪ್ರಕಾರ, ಪ್ರವೇಶ ಮತ್ತು ನಿರ್ಗಮನ ದಿನಾಂಕಗಳು ಮತ್ತು ಭೇಟಿಯ ಉದ್ದೇಶದಂತಹ ವಿವರಗಳನ್ನು ಒದಗಿಸಿ. ನಂತರ ಇ-ಪಾಸ್ ಜನರೇಟ್ ಆಗುತ್ತದೆ.
ಇದನ್ನೂ ಓದಿ: ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಭಾರತದ ಪ್ರಮುಖ ಆಧ್ಯಾತ್ಮಿಕ ತಾಣಗಳು
ಆದಾಗ್ಯೂ, ಪಾಸ್ ಮಾಡಿಸಿಕೊಂಡಿದ್ದಲ್ಲಿಯೂ ಏಪ್ರಿಲ್ 2 ರಂದು ಊಟಿಗೆ ತೆರಳಿದರೆ ಅಗತ್ಯ ವ್ಯವಸ್ಥೆಗಳಿಗೆ ತೊಂದರೆಯಾಗಬಹುದು. ಹೋಟೆಲ್‌ಗಳು, ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ಮುಚ್ಚಿರಬಹುದು. ಹೊರಗೆ ಊಟ ಮಾಡಲು, ಶಾಪಿಂಗ್ ಮಾಡಲು ಅಥವಾ ಅಂತಹ ಸೌಲಭ್ಯಗಳನ್ನು ಅನ್ವೇಷಿಸಲು ಯೋಜಿಸುತ್ತಿದ್ದರೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಬೇಕಾಗಬಹುದು. ಆಟೋ-ರಿಕ್ಷಾಗಳು ಮತ್ತು ಟ್ಯಾಕ್ಸಿಗಳಂತಹ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಆಯ್ಕೆಗಳ ಸೀಮಿತ ಲಭ್ಯತೆ ಇರುತ್ತದೆ. ಬಂದ್ ಬೆಂಬಲಿಗರು ರಸ್ತೆಗಳನ್ನು ನಿರ್ಬಂಧಿಸಿದರೆ, ಜನಪ್ರಿಯ ಸ್ಥಳಗಳಿಗಳ ವೀಕ್ಷಣೆ ಕಷ್ಟವಾಗಬಹುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Sat, 29 March 25