ಜಿಎಸ್​ಬಿ ಸಮಾಜದ ಪರ್ತಗಾಳಿ ಮಠದ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ವಿಧಿವಶ

Partagali Sree Vidhyadhi Raja Swamiji Death: ಸುಮಾರು 48 ವರ್ಷಗಳ ಕಾಲ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳೀ ಮಠಾಧೀಶರಾಗಿ ಜಿಎಸ್‌ಬಿ ಸಮಾಜವನ್ನು ಅವರು ಮುನ್ನಡೆಸಿದ್ದರು.

ಜಿಎಸ್​ಬಿ ಸಮಾಜದ ಪರ್ತಗಾಳಿ ಮಠದ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ವಿಧಿವಶ
ಪರ್ತಗಾಳಿ ಶ್ರೀಗಳು

ಪಣಜಿ: ಗೋವಾದ ಪರ್ತಗಾಳಿಯ ಸ್ವಮಠದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ (ಜಿಎಸ್‌ಬಿ) ಪರ್ತಗಾಳಿ ಮಠಾಧೀಶ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಸೋಮವಾರ ಮುಂಜಾನೆ ಹರಿಪಾದ ಸೇರಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. 1945ರ ಅಗಸ್ಟ್ 22ರಂದು ಸೇನಾಪುರ ಲಕ್ಷ್ಮೀ ನಾರಾಯಣ ಆಚಾರ್ಯ ಹಾಗೂ ಶ್ರೀಮತಿ ಆಚಾರ್ಯ ದಂಪತಿಯ ಎರಡನೇ ಮಗನಾಗಿ ಕುಂದಾಪುರ ತಾಲೂಕಿನ ನಾಯ್ಕನಕಟ್ಟೆಯಲ್ಲಿ ಜನಿಸಿದ್ದ ಶ್ರೀಗಳು ಪೂರ್ವಾಶ್ರಮದಲ್ಲಿ ರಾಘವೇಂದ್ರ ಆಚಾರ್ಯ ಎಂಬ ಅಭಿದಾನ ಹೊಂದಿದ್ದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣವನ್ನೂ, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನೂ ಪಡೆದು ಪ್ರಾಪ್ತ ವಯಸ್ಕರಾದಾಗ ಅಂದಿನ ಪರ್ತಗಾಳಿ ಮಠದ ಯತಿವರ್ಯರಾಗಿದ್ದ ದ್ವಾರಕಾನಾಥ ತೀರ್ಥ ಸ್ವಾಮೀಜಿಯವರ ಅನುಗ್ರಹ ಪಡೆದು 1967ರ ಫೆ.26ರಂದು ಮುಂಬೈನ ವಡಾಲಾ ಮಠದಲ್ಲಿ ನಡೆದ ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಪರ್ತಗಾಳಿ ಮಠದ 23ನೇ ಯತಿವರ್ಯರಾಗಿ ವಿದ್ಯುಕ್ತವಾಗಿ ನಿಯೋಜನೆಗೊಂಡಿದ್ದರು.

1973ರ ಮಾ.24ಂದು ಗುರುಗಳಾಗಿದ್ದ ದ್ವಾರಕಾನಾಥ ತೀರ್ಥರು ಪರಂಧಾಮ ಸೇರಿದಾಗ 1973ರ ಎಪ್ರಿಲ್ 5ರಂದು ಪರ್ತಗಾಳಿ ಮಠದಲ್ಲಿ ನಡೆದ ಪೀಠಾರೋಹಣ ಸಮಾರಂಭದಲ್ಲಿ ಶ್ರೀಮಠದ 23ನೇ ಪೀಠಾಧೀಶರಾಗಿ ಅಧಿಕಾರ ವಹಿಸಿಕೊಂಡರು. ಅಲ್ಲಿಂದ ಈವರೆಗೆ ಸುಮಾರು 48 ವರ್ಷಗಳ ಕಾಲ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳೀ ಮಠಾಧೀಶರಾಗಿ ಜಿಎಸ್‌ಬಿ ಸಮಾಜವನ್ನು ಅವರು ಮುನ್ನಡೆಸಿದ್ದರು.

ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರು ಕಾಲಕೀರ್ದಿಯಲ್ಲಿ ಶ್ರೀಮಠದ ಅಭಿವೃದ್ಧಿಯಲ್ಲಿ ಅನೇಕ ಕಾರ್ಯಗಳಾಗಿವೆ. ಪರ್ತಗಾಳಿಯಲ್ಲಿರುವ ಮೂಲಮಠದ ಸಂಪೂರ್ಣ ನವೀಕರಣದ ಜತೆಗೆ 1977ರಲ್ಲಿ ಅದರ ಪಂಚಶತಾಬ್ಧಿ ಮಹೋತ್ಸವವನ್ನು 3 ದಿನಗಳ ಕಾಲ ಅಭೂತಪೂರ್ವವಾಗಿ ಆಚರಿಸಿದ್ದರು. ಆಗ ಜಿಎಸ್‌ಬಿ ಸಮಾಜದ ಇತರ ಮೂರೂ ಮಠಗಳ ಪೀಠಾಧೀಶರು ಭಾಗವಹಿಸಿದ್ದು ವಿಶೇಷವಾಗಿತ್ತು. ಶಾಖಾ ಮಠಗಳಾಗಿದ್ದ ಕಾಶಿಯ ಪಂಚಗಾಘಾಟದಲ್ಲಿರುವ ಮಠ, ರೇವಣ ಮಠ, ಯಲ್ಲಾಪುರದ ಮಠ, ವಡಾಲಾಮಠ, ಅಂಕೋಲಾ ಮಠ, ಭಟ್ಕಳದ ವಡೇರ್ ಮಠ ಮುಂತಾದ ಶಾಖಾಮಠಗಳ ಜೀರ್ಣೋದ್ಧಾರ ಹುಬ್ಬಳ್ಳಿಯ ನವನಗರದಲ್ಲಿ ನವೀನ ಮಠವಾಸ್ತು ನಿರ್ಮಾಣ ಮುಂತಾದ ಅಭಿವೃದ್ಧಿಕಾರ್ಯಗಳಾಗಿವೆ. ಸಾಮಾನ್ಯರಿಗೆ ಅಸಾಧ್ಯವೆನ್ನಿಸಿದ ಕಠಿಣ ಪರಿಶ್ರಮದ ಗಂಡಕೀ ಯಾತ್ರೆಯನ್ನು ಪೂರೈಸಿದ್ದರು. ಉತ್ತರಕನ್ನಡ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ ಶ್ರೀಗಳು ಪ್ರತಿವರ್ಷ ಎಲ್ಲ ತಾಲೂಕುಗಳಲ್ಲಿರುವ ಮಠಗಳಿಗೆ ಭೇಟಿ ನೀಡಿ ಸಮಾಜದ ಜನರಿಗೆ ಮಾರ್ಗದರ್ಶನ ನೀಡಿದ್ದರು.

Partagali Muth Shri

                                                                                  ವಿದ್ಯಾಧಿರಾಜ ತೀರ್ಥ ಸ್ವಾಮೀಜಿ

ಶಿರಸಿಯ ಮೇಲೆ ಹೆಚ್ಚಿನ ಒಲವು
ಶಿರಸಿ ಊರಿನ ಬಗ್ಗೆ ವಿಶೇಷ ಒಲವು ಹೊಂದಿದ್ದ ಶ್ರೀಗಳು, ಪ್ರತಿವರ್ಷ ಎಂಬಂತೆ ಶ್ರೀಮಹಾವಿಷ್ಣು ದೇವರ ವರ್ಧಂತಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. 1983ರಲ್ಲಿ ಶ್ರಿ ಮಹಾವಿಷ್ಣು ದೇವಾಲಯದ ನವೀಕರಣವಾದಾಗ ಅದೇ ವರ್ಷ ನವೆಂಬರ್ 26ರಂದು ಅದನ್ನು ಉದ್ಘಾಟಿಸಿದ್ದರು. 1986ರಲ್ಲಿ ಶ್ರೀಮಹಾವಿಷ್ಣು ಸಭಾಗ್ರಹದ ಉದ್ಘಾಟನೆ, 1990ರಲ್ಲಿ ನಡೆದ ಶ್ರೀಮಹಾವಿಷ್ಣು ದೇವರ ಅಷ್ಟಬಂಧ, 1991ರಲ್ಲಿ ಶ್ರೀಗೋಪಾಲಕೃಷ್ಣ ದೇವಳದ ಶತಮಾನೋತ್ಸವ ಸಮಾರಂಭ, 1993ರಲ್ಲಿ ಶ್ರೀಹನುಮಂತ ದೇವಸ್ಥಾನದ ಪುನಃಪ್ರತಿಷ್ಠಾ ಸಮಾರಂಭ, 2002ರಲ್ಲಿ ಶ್ರೀವಿದ್ಯಾಧಿರಾಜ ಕಲಾಕ್ಷೇತ್ರದ ಉದ್ಘಾಟನೆ, 2007ರಲ್ಲಿ ನಡೆದ ಶ್ರೀವೆಂಕಟರಮಣ ದೇವಾಲಯದ ನೂತನ ಕಟ್ಟಡದ ಶಿಲಾನ್ಯಾಸ ಹಾಗೂ 2013ರ ಮೇ 12ರಂದು ನಡೆದ ಪುನಃಪ್ರತಿಷ್ಠಾ ಸಮಾರಂಭವನ್ನು ನೆರವೇರಿಸಿ ಕೊಟ್ಟಿದ್ದರು. 1990ರ ಡಿ.25ರಂದು ಶ್ರೀಮಹಾವಿಷ್ಣು ದೇವರ ಸನ್ನಿಧಿಯಲ್ಲಿ ಡಾ.ವಿ.ಎಸ್.ಸೋಂದೆಯವರಿಗೆ ವಿದ್ಯಾಧಿರಾಜ ಪುರಸ್ಕಾರ ನೀಡಿ ಆಶೀರ್ವದಿಸಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ 1996ರ ಜು.31ರಿಂದ ನ.31ರವರೆಗೆ 123 ದಿನಗಳ ಚಾತುರ್ಮಾಸ್ಯ ವೃತವನ್ನು ಶಿರಸಿಯಲ್ಲಿ ನೆರವೇರಿಸಿ ಜಿಲ್ಲೆಯ ಸಮಾಜಬಾಂಧವರಿಗೆ ಆತ್ಮೀಯ ಅನುಗ್ರಹ ನೀಡಿದ್ದರು.

ಹಲವು ಗಣ್ಯರ ಸಂತಾಪ
ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ಅಗಲಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಸಮಾಜದ ಒಳಿತಿಗಾಗಿ, ಸನಾತನ ಹಿಂದು ಧರ್ಮದ ರಕ್ಷಣೆ ಹಾಗೂ ಯುವ ಪೀಳಿಗೆಯಲ್ಲಿ ಹಿಂದೂ ಧರ್ಮದ ಜಾಗೃತೆಗಾಗಿ ಹಲವಾರು ದಶಕಗಳ ಕಾಲ ಶ್ರಮಿಸಿದ ಪೂಜ್ಯರು ಜಾತಿ, ಧರ್ಮ, ಮತ ಭೇದ ಮಾಡದೇ ನೊಂದು ಬಂದ ಭಕ್ತಾದಿಗಳ ಸಂಕಷ್ಟಗಳನ್ನು  ಪರಿಹರಿಸುತ್ತಿದ್ದರು. ಶ್ರೀಗಳ ಅಗಲಿಕೆಯಿಂದಾಗಿ ಸಮಾಜಕ್ಕೆ ಭರಿಸಲಾಗದ ನಷ್ಟವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಆರ್. ವಿ.ದೇಶಪಾಂಡೆ ಪ್ರತಿಕ್ರಿಯಿಸಿ, ವಿದ್ಯಾಧಿರಾಜತೀರ್ಥ ಒಡೆಯರ್ ಬ್ರಹ್ಮೈಕ್ಯರಾಗಿರುವುದು ನಂಬಲಾಗುತ್ತಿಲ್ಲ. ಇವರ ಅಗಲಿಕೆ ಅಪಾರ ಭಕ್ತವೃಂದವನ್ನು ದುಃಖತಪ್ತರನ್ನಾಗಿಸಿದೆ. ಇವರ ಚೈತನ್ಯ ನಮ್ಮನ್ನು ಸನ್ಮಾರ್ಗಕ್ಕೆ ದಾರಿ ತೋರಿಸಲೆಂದೆ ನಮ್ಮ ಪ್ರಾರ್ಥನೆ ಎಂದು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಸೃಷ್ಟಿಶೀಲ, ಸೃಜನಶೀಲ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ: ಲಕ್ಷ್ಮೀಶ ತೋಳ್ಪಾಡಿ

ಸೃಷ್ಟಿಶೀಲ, ಸೃಜನಶೀಲ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ: ಲಕ್ಷ್ಮೀಶ ತೋಳ್ಪಾಡಿ

(Partagali jeevottam mutt Gokarna sree Vidhyadhi Raja swamiji died)