ಸಂವಿಧಾನ ಬದಲಿಸಬೇಕೆಂದು ಹೇಳಿಯೇ ಇಲ್ಲ, ಸಿದ್ದರಾಮಯ್ಯ ಪರಿಶೀಲಿಸಿ ಮಾತನಾಡಬೇಕಿತ್ತು: ಪೇಜಾವರ ಶ್ರೀ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಸಂವಿಧಾನದ ಕುರಿತು ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂವಿಧಾನ ಬದಲಾವಣೆಗೆ ಆಗ್ರಹಿಸಿಲ್ಲ ಎಂದು ಹೇಳಿ, ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಟೀಕಿಸಿದ್ದಾರೆ. ಹಿಂದೂ ಸಮಾಜದ ಹಿತಾಸಕ್ತಿ ರಕ್ಷಣೆಗೆ ಒತ್ತಾಯಿಸಿದ್ದರ ಜತೆಗೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ತುಷ್ಟೀಕರಣದ ಆರೋಪಗಳನ್ನು ಮಾಡಿದ್ದಾರೆ.
ಉಡುಪಿ, ಡಿಸೆಂಬರ್ 2: ಸಂವಿಧಾನದ ಕುರಿತ ತಮ್ಮ ಅಭಿಪ್ರಾಯ ವಿವಾದಕ್ಕೀಡಾಗುತ್ತಿದ್ದಂತೆಯೇ ಆ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಪ್ರತಿಕ್ರಿಯೆ ಹಾಗೂ ಸ್ಪಷ್ಟನೆ ನೀಡಿದ್ದಾರೆ. ಸಂವಿಧಾನ ಬದಲಿಸಬೇಕೆಂದು ಹೇಳಿಯೇ ಇಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ ಪರಿಶೀಲಿಸಿ ಮಾತನಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂತ ಸಮಾವೇಶ ನಡೆದಿತ್ತು. ಸಂತರು ಸೇರಿ ಲಿಖಿತ ರೂಪದ ನಿರ್ಣಯ ಕೈಗೊಂಡಿದ್ದೆವು. ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲಿ ಸಂವಿಧಾನ ಕುರಿತ ಯಾವುದೇ ಮಾತು ಉಲ್ಲೇಖ ಇಲ್ಲ. ಆಡದೇ ಇರುವ ಮಾತಿಗೆ ಸಮಾಜದಲ್ಲಿ ಜನ ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ. ಸುಳ್ಳು ಆರೋಪ ಹೊರಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮನ್ನು ಪ್ರತಿಭಟಿಸುವ ಮತ್ತು ಖಂಡಿಸುವ ಕೆಲಸವಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಹೇಳಿಕೆಯಿಂದ ಇಷ್ಟೆಲ್ಲ ಆಗಿದೆ. ನಿರಾಧಾರ ಆರೋಪ ಯುಕ್ತವಲ್ಲ. ಆ ಕುರಿತ ವಿಡಿಯೋ ಕ್ಲಿಪ್ಪಿಂಗ್ ಹಾಗೂ ಲಿಖಿತ ರೂಪದ ಪತ್ರವನ್ನು ಪರಿಶೀಲಿಸಬಹುದು. ಸಿಎಂ ಸಿದ್ದರಾಮಯ್ಯ ಈ ಕುರಿತು ಪರಿಶೀಲಿಸಿ ಮಾತನಾಡಬೇಕಿತ್ತು ಎಂದು ಅವರು ಹೇಳಿದರು.
ಆಡದೇ ಇರುವ ಮಾತಿಗೆ ಗುರಿಯಾಗಿಸುತ್ತಿದ್ದಾರೆ: ಸ್ವಾಮೀಜಿ
ವರದಿಗಾರರಿಗೆ ನಾನು ಆಡದೇ ಇರುವ ಮಾತು ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಸಮಾಜ ಒಡೆಯುವ ಮತ್ತು ಕಲಹ ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು ಎಂದು ಮಾಧ್ಯಮಗಳ ವಿರುದ್ಧವೂ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತೇನೆ. ಈವರೆಗೆ ಯಾವುದೇ ಸಂವಿಧಾನ ವಿರೋಧಿ ಕೃತ್ಯ ಮಾಡಿಲ್ಲ. ಸಮಾಜದ ಎಲ್ಲಾ ವರ್ಗದ ಜೊತೆ ಪ್ರೀತಿ ಸಹಬಾಳ್ವೆಯಿಂದ ಇದ್ದೇನೆ. ಸಮಾಜದಲ್ಲಿ ದುರ್ಬಲರ ಸೇವೆಯನ್ನು ನಿರಂತರ ಮಾಡುತ್ತಿದ್ದೇವೆ. ದಲಿತ ಕೇರಿ ಭೇಟಿ, ದುರ್ಬಲರಿಗೆ ಮನೆ ಕಟ್ಟಿಸಿ ಕೊಡುವುದು ಮಾಡುತ್ತಿದ್ದೇವೆ. ಪೇಜಾವರ ಮಠ ಮತ್ತು ಸಂಘ ಸಂಸ್ಥೆಗಳು ದಾನಿಗಳ ಮೂಲಕ ನಿರಂತರ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ಮಾತಿನಿಂದ ಪ್ರೇರಣೆಗೊಂಡು ಅನೇಕ ಮಂದಿ ದುರ್ಬಲರಿಗೆ ಸೂರು ಕಟ್ಟಿಸಿ ಕೊಡುತ್ತಿದ್ದಾರೆ. ಇತ್ತೀಚಿಗೆ 16 ಲಕ್ಷ ರೂ. ವೆಚ್ಚದ 14 ಮನೆಗಳನ್ನು ಉದ್ಯಮಿಯೊಬ್ಬರ ಮೂಲಕ ಕೊರಗ ಜನಾಂಗದವರಿಗೆ ಕಟ್ಟಿಸಿಕೊಡಲಾಗಿದೆ. ಒಟ್ಟು ನೂರು ಮನೆಗಳನ್ನು ಕಟ್ಟಿಸಿ ಕೊಡುವುದಾಗಿ ಅವರು ಹೇಳಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ನನ್ನನ್ನು ಯಾಕೆ ಗರಿಯಾಗಿಸುತ್ತಿದ್ದಾರೆ ಎಂಬುದಾಗಿ ಅವರನ್ನೇ ಕೇಳಬೇಕು. ನನ್ನನ್ನು ಹಣಿದರೆ ಹಿಂದೂ ಸಮಾಜಕ್ಕೆ ಮುಖವಾಣಿ ಇಲ್ಲ ಎಂದು ಭಾವಿಸಿರಬಹುದು. ಹಿಂದೂ ಸಮಾಜಕ್ಕೆ ಹಲವು ಮುಖಗಳಿವೆ. ಹಿಂದೂ ಸಮಾಜವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಆಡಿದ ಮಾತಿಗೆ ವಿರೋಧಿಸಿ, ಅದು ಬಿಟ್ಟು ಆಡದೇ ಇರುವ ಮಾತಿಗೆ ವಿರೋಧ ಯಾಕೆ? ನಾನು ಕಾನೂನು ಹೋರಾಟ ಮಾಡಬಹುದು. ಕಾನೂನು ಹೋರಾಟದ ಹೊರತಾಗಿ ನನಗೆ ಮಾಡಲು ಬೇರೆ ಸಾಕಷ್ಟು ಕೆಲಸಗಳಿವೆ. ದೇವರೇ ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಡಲಿ ಎಂದು ಅವರು ಹೇಳಿದರು.
ಒಂದು ಮತೀಯರ ಅತಿಯಾದ ಓಲೈಕೆಯಾಗುತ್ತಿದೆ: ಸ್ವಾಮೀಜಿ
ಜನಗಣತಿ ಹೇಳುವ ಪ್ರಕಾರ ಇದು ಹಿಂದುಸ್ತಾನ. ಭಾರತ, ಇಂಡಿಯಾ ಎಂದರೆ ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಹಿಂದುಗಳ ಭಾವನೆಗೆ ಬೆಲೆ ಕೊಡುವ ಸರಕಾರ ಅಧಿಕಾರಕ್ಕೆ ತರಬೇಕು ಎಂದು ಹೇಳಿದ್ದು ಹೌದು. ಸಂವಿಧಾನ ಬದಲಿಸಿ ಅಥವಾ ತಿದ್ದುಪಡಿ ಮಾಡಿ ಎಂದು ನಾನು ಯಾವತ್ತೂ ಹೇಳಿಲ್ಲ. ಸಂವಿಧಾನ ಎಂಬ ಶಬ್ದವನ್ನೇ ಬಳಸಿಲ್ಲ. ಚುನಾಯಿತ ಸರ್ಕಾರಗಳು ಸರ್ವರ ಸರ್ಕಾರ ಆಗಬೇಕು. ಎಲ್ಲಾ ಪ್ರಜೆಗಳನ್ನು ಏಕರೂಪವಾಗಿ ಕಾಣಬೇಕು. ಏಕಮತೀಯರನ್ನು ಓಲೈಸುವ ಪ್ರವೃತ್ತಿ ನೋಡುತ್ತಿದ್ದೇವೆ. ಈ ಪ್ರವೃತ್ತಿ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಸರ್ಕಾರದ ದ್ವಿಮುಖ ನೀತಿ ವಿರುದ್ಧ ಕಿಡಿ
10 ಲಕ್ಷ ರೂ. ಅನುದಾನ ಇರುವ ದೇವಾಲಯಗಳಿಗೆ ಶೇ 5 ತೆರಿಗೆ. ಒಂದು ಕೋಟಿ ರೂ. ಆದಾಯ ಇರುವ ದೇಗುಲಗಳಿಗೆ ಶೇ 10 ರ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಸಹಿಗಾಗಿ ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿತ್ತು. ಅದನ್ನು ವಾಪಸು ಕಳುಹಿಸಿರುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಇತರ ಮತೀಯರ ಶ್ರದ್ಧಾ ಕೇಂದ್ರಗಳನ್ನು ಸ್ವತಂತ್ರವಾಗಿ ಬಿಡಲಾಗಿದೆ. ಹಿಂದುಗಳ ಶ್ರದ್ಧಾ ಕೇಂದ್ರವನ್ನು ಮುಷ್ಟಿಯಲ್ಲಿ ಇರಿಸುವ ಪ್ರಯತ್ನ ನಡೆಯುತ್ತಿದೆ. ಜೀರ್ಣ ಸ್ಥಿತಿಯಲ್ಲಿರುವ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಲು ಹುಂಡಿಯ ಹಣ ಬಳಸಲು ಸಾಧ್ಯವಾಗುತ್ತಿಲ್ಲ. ಅರ್ಚಕರಿಗೆ ಸರಿಯಾದ ವೇತನ ನೀಡುವುದಿಲ್ಲ. ರಾಜ ಮಹಾರಾಜರ ಕಾಲದ ಭೂಮಿಯನ್ನು ಇನ್ನೂ ಖಾತಾ ಮಾಡಿ ಕೊಟ್ಟಿಲ್ಲ. ದೇಗುಲದ ಭೂಮಿ ಸರಕಾರದ ಭೂಮಿ ಎಂದು ಪರಿಗಣಿಸಿ ನಾನಾ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇಂತಹಾ ದ್ವಿಮುಖ ನೀತಿ ಯಾಕೆ? ಯಾವುದೇ ಪಕ್ಷ ಮುಖ್ಯವಲ್ಲ ಹಿಂದುಗಳ ಭಾವನೆಗೆ ಗೌರವ ಕೊಡುವ ಸರ್ಕಾರ ಮುಖ್ಯ ಎಂದು ಪೇಜಾವರ ಶ್ರೀ ಹೇಳಿದರು.
ಇದನ್ನೂ ಓದಿ: ಸಿಎಂ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಎನ್ಡಿಎ ಶಾಸಕರು ಈಗ ಸನ್ಮಾನ ಮಾಡಲು ಸಜ್ಜು!
ಪೇಜಾವರ ಶ್ರೀಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ ಎಂಬ ಊಹೋಪೋಹಗಳಿಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪೇಜೇವರ ಶ್ರೀ ಮನುಸ್ಮೃತಿಯನ್ನು ಪ್ರತಿಪಾದಕರು. ನಮ್ಮ ಸರ್ಕಾರ ಸಂವಿಧಾನವನ್ನು ರಕ್ಷಿಸುತ್ತಿದೆ ಎಂದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ