ಬೀದರ್ : ವಾಹನ ದಟ್ಟನೆ ಕಡಿಮೆ ಮಾಡುವ ಉದ್ದೇಶದಿಂದ ಬೀದರ್ ಜಿಲ್ಲೆಯಲ್ಲಿ ರಿಂಗ್ ರಸ್ತೆ ನಿರ್ಮಿಸಲಾಯಿತು. ಆದರೆ ಕಳೆದ ಎಂಟು ವರ್ಷದಿಂದ ರಸ್ತೆಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಬಿಡಲಾಗಿದೆ. ಇದರಿಂದಾಗಿ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ಅಲ್ಲದೆ ಈ ರಸ್ತೆಯ ಪಕ್ಕದಲ್ಲಿ ಜಮೀನು ಹೊಂದಿರುವ ರೈತರು ಕೂಡಾ ಸಮಸ್ಯೆಗೆ ಸಿಲುಕಿದ್ದಾರೆ. ಬೆಳೆದ ಬೆಳೆ ಮೇಲೆ ದೂಳು ಕೂರುತ್ತಿದ್ದು, ಬೆಳೆ ಹಾನಿಯಾಗುತ್ತಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಮತ್ತು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬೀದರ್ ನಗರದಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಬೇಕೆನ್ನುವ ಉದ್ದೇಶದಿಂದ 2013-14 ನೇ ಸಾಲಿನಲ್ಲಿ ಸುಮಾರು 47.76 ಕೋಟಿ ರೂಪಾಯಿ ವೆಚ್ಚದಲ್ಲಿ 16.77 ಕಿಲೋ ಮೀಟರ್ ಉದ್ದದ ರಿಂಗ್ ರಸ್ತೆಯ ಕಾಮಗಾರಿಯನ್ನು ಆರಂಭಸಲಾಯಿತು. ಆದರೆ ಪೂರ್ಣ ಪ್ರಮಾಣದ ರಿಂಗ್ ರಸ್ತೆಯನ್ನು ಮಾಡದೆ ಸುಮಾರು 5 ಕಿಲೋ ಮೀಟರ್ ನಷ್ಟೂ ರಸ್ತೆಯನ್ನು ಹಾಗೆ ಬಿಡಲಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಓಡಾಡುವ ಭಾರಿ ವಾಹನಗಳು (ಲೋಡ್ ತುಂಬಿದ ವಾಹನ) ನಡು ರಸ್ತೆಯಲ್ಲಿಯೇ ಸಿಲುಕಿ ಹಾಕಿಕೊಳ್ಳುತ್ತಿದ್ದು, ಕೊನೆಗೆ ಬೇರೆ ವಾಹನಕ್ಕೆ ವಸ್ತುಗಳನ್ನು ವರ್ಗಾಯಿಸಬೇಕಾದ ಅನಿವಾರ್ಯತೆ ಕಾಡುತ್ತಿದೆ.
ಪ್ರತಿ ದಿನ ಈ ರಸ್ತೆಯಲ್ಲಿ ಏನಿಲ್ಲವೆಂದರು ಎರಡು ಸಾವಿರಕ್ಕೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತವೆ. ಅದರಲ್ಲೂ ಮಳೆಗಾಲದಲ್ಲಿ ವಾಹನಗಳು ಹೀಗೆ ರಸ್ತೆ ಮಧ್ಯದಲ್ಲಿ ಸಿಲುಕಿಕೊಂಡರೆ ಇತರ ವಾಹನಗಳ ಓಡಾಟಕ್ಕೂ ತೊಂದರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಬಸವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ರಿಂಗ್ ರಸ್ತೆಯ ಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು, ಲೋಡ್ ತುಂಬಿದ ಲಾರಿಗಳು ಹೈದರಾಬಾದ್, ಲಾತೂರ್, ಮಹಾರಾಷ್ಟ್ರ ಸೇರಿದಂತೆ ಹತ್ತಾರು ಗ್ರಾಮಗಳಿಗೆ, ಪಟ್ಟಣಕ್ಕೆ ಹೋಗಬೇಕಾಗುತ್ತದೆ . ಆದರೆ ಈ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸಾಕಷ್ಟೂ ಸಮಸ್ಯೆಯಾಗುತ್ತಿದೆ. ಕಳೆದ ಎಂಟು ವರ್ಷದಿಂದ ಅರ್ಧಕ್ಕೆ ಬಿಟ್ಟಿರುವ ರಸ್ತೆಯನ್ನು ಪೂರ್ಣ ಮಾಡಬೇಕು ಎನ್ನುವ ಯೋಚನೆಯನ್ನು ಕೂಡಾ ಇಲ್ಲಿನ ಅಧಿಕಾರಿಗಳಾಗಲಿ, ಶಾಸಕರಾಗಲಿ, ಮಂತ್ರಿಯಾಗಲಿ ಮಾಡಿಲ್ಲ. ಹೀಗಾಗಿ ಇದರಿಂದ ವಾಹನ ಸವಾರರು ನಿತ್ಯ ತಗ್ಗು, ದಿನ್ನೆಯಿಂದ ಕೂಡಿದ ರಸ್ತೆಯಲ್ಲಿ ವಾಹನ ನಡೆಸಬೇಕಾಗಿದೆ.
ಈ ರಿಂಗ್ ರಸ್ತೆಯ ಸುತ್ತಮುತ್ತಲೂ ನೂರಾರು ಎಕರೆಯಷ್ಟು ಫಲವತ್ತಾದ ಜಮೀನಿದ್ದು, ಮಳೆಗಾಲ, ಬೆಸಿಗೆಕಾಲದಲ್ಲಿ ತಮ್ಮ ಹೊಲದಲ್ಲಿ ಬಿತ್ತನೆ ಮಾಡುತ್ತಾರೆ. ಮಳೆಗಾಲದಲ್ಲಿ ಈ ರೈತರಿಗೆ ಏನೂ ಸಮಸ್ಯೆಯಾಗುವುದಿಲ್ಲ. ಆದರೆ ಬೆಸಿಗೆಯಲ್ಲಿ ರೈತರು ಬೆಳೆ ಬೆಳೆಯಲಾಗದೆ ಸಂಕಷ್ಟ ಅನುಭವಿಸುವಂತಾಗುತ್ತದೆ. ರಸ್ತೆ ಉದ್ದಕ್ಕೂ 25 ಕ್ಕೂ ಹೆಚ್ಚು ರೈತರ 200 ಎಕರೆಗೂ ಅಧಿಕ ಜಮೀನಿದೆ. ಈ ಜಮೀನಿನಲ್ಲಿ ಮಾವು, ಜೋಳ, ಕಡಲೆ, ಕರಿಬೇವು, ತೊಗರಿ ಸೇರಿದಂತೆ ನಾನಾ ಬಗೆಯ ಬೆಳೆಯನ್ನು ಬೆಳೆಯಲಾಗುತ್ತದೆ. ಈ ಬೆಳೆಗಳ ಮೆಲೆ ಧೂಳು ಬಿದ್ದು, ರೈತರು ನಷ್ಟ ಅನುಭವಿಸುವಂತಾಗುತ್ತದೆ. ರಸ್ತೆಯಲ್ಲಿ ಪ್ರತಿನಿತ್ಯವೂ ನೂರಾರು ಲೋಡ್ ತುಂಬಿದ ಭಾರೀ ವಾಹನಗಳು ಓಡಾಡುತ್ತವೆ ವಾಹನಗಳು ಹೋಗುವ ವೇಗಕ್ಕೆ ರಸ್ತೆ ತುಂಬೆಲ್ಲ ಧೂಳು ತುಂಬಿಕೊಂಡು ಸರಿ ಸುಮಾರು 300 ಮೀಟರ್ ವರೆಗೂ ರಸ್ತೆಯ ಅಕ್ಕಪಕ್ಕದಲ್ಲಿನ ಬೆಳೆಗಳ ಮೇಲೆ ಧೂಳು ಬಿಳುತ್ತದೆ ಇದರಿಂದ ರೈತರು ಹತ್ತಾರು ಸಮಸ್ಯೆ ಎದುರಿಸುವಂತಾಗಿದೆ.
ಒಂದು ಕಾಮಗಾರಿಗೆ ಬಂದಿದ್ದ ಅನುದಾನವನ್ನು ಇನ್ನೊಂದು ಕಾಮಗಾರಿಗೆ ಬಳಕೆ ಮಾಡಿದ್ದು, ಸಾರ್ವಜನಿಕರು ಮತ್ತು ರೈತರು ಇದರಿಂದ ಸಂಕಷ್ಟ ಎದುರಿಸುವಂತಾಗಿದೆ. ಇನ್ನಾದರೂ ಈ ಭಾಗದ ಅಧಿಕಾರಿಗಳು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ, ರೈತರು ಮತ್ತು ಸಾರ್ವಜನಿಕರ ಸಂಕಷ್ಟವನ್ನು ದೂರ ಮಾಡಬೇಕಿದೆ.
24 ಗಂಟೆಯಲ್ಲಿ 2.5 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣ; ಭಾರತದ ವಿಶ್ವದಾಖಲೆ ಇದು ಎಂದ ಸಚಿವ ನಿತಿನ್ ಗಡ್ಕರಿ