AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಕ್ಸೋ ಕೇಸ್​ನಲ್ಲಿ ಬಿಎಸ್ ಯಡಿಯೂರಪ್ಪಗೆ ಟೆನ್ಷನ್: ಆದೇಶ ಕಾಯ್ದಿರಿಸಿದ ಹೈಕೋರ್ಟ್, ವಾದ-ಪ್ರತಿವಾದ ವಿವರ ಇಲ್ಲಿದೆ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್ ಕಾಯ್ದಿರಿಸಿದೆ. ಯಡಿಯೂರಪ್ಪ ಪರ ವಕೀಲರು, ‘ಸಂತ್ರಸ್ತೆಯ ಹೇಳಿಕೆ ಹೊರತುಪಡಿಸಿ ಇತರೆ ಸಾಕ್ಷ್ಯಗಳನ್ನು ಪರಿಗಣಿಸಿಲ್ಲ’ ಎಂದು ವಾದಿಸಿದರೆ, ಸರ್ಕಾರಿ ವಕೀಲರು ‘ಸಂತ್ರಸ್ತೆಯ ಹೇಳಿಕೆಯೇ ಮುಖ್ಯ, ಮೊಬೈಲ್ ವಿಡಿಯೋ ಡಿಲೀಟ್ ಮಾಡಲಾಗಿದೆ’ ಎಂದು ಪ್ರತಿವಾದಿಸಿದರು.

ಪೋಕ್ಸೋ ಕೇಸ್​ನಲ್ಲಿ ಬಿಎಸ್ ಯಡಿಯೂರಪ್ಪಗೆ ಟೆನ್ಷನ್: ಆದೇಶ ಕಾಯ್ದಿರಿಸಿದ ಹೈಕೋರ್ಟ್, ವಾದ-ಪ್ರತಿವಾದ ವಿವರ ಇಲ್ಲಿದೆ
ಪೋಕ್ಸೋ ಕೇಸ್​ನಲ್ಲಿ ಬಿಎಸ್ ಯಡಿಯೂರಪ್ಪಗೆ ಟೆನ್ಷನ್
Ramesha M
| Updated By: Ganapathi Sharma|

Updated on: Oct 23, 2025 | 4:55 PM

Share

ಬೆಂಗಳೂರು, ಅಕ್ಟೋಬರ್ 23: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧದ ಪೋಕ್ಸೋ ಕೇಸ್ ರದ್ಧತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka High Court) ಪೀಠ ಆದೇಶವನ್ನು ಕಾಯ್ದಿರಿಸಿದೆ. ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಎಂಐ ಅರುಣ್ ಅವರಿಂದ ಪೀಠ ವಿಚಾರಣೆ ನಡೆಸಿ, ಆದೇಶವನ್ನು ಕಾಯ್ದಿರಿಸಿದೆ.

ಯಡಿಯೂರಪ್ಪ ಪರ ವಕೀಲರ ವಾದವೇನು?

ಹೊಸದಾಗಿ ಪ್ರಕರಣವನ್ನು ಪರಿಗಣಿಸಲು ಹೈಕೋರ್ಟ್ ಸೂಚಿಸಿತ್ತು. ತನಿಖೆಯ ಎಲ್ಲಾ ಅಂಶಗಳನ್ನೂ ಪರಿಶೀಲಿಸಿ ಕಾಗ್ನಿಜೆನ್ಸ್ ಪಡೆಯಬೇಕಿತ್ತು. ಸಂತ್ರಸ್ತೆಯ ಹೇಳಿಕೆ ಬಿಟ್ಟು ಉಳಿದ ಸಾಕ್ಷ್ಯಗಳನ್ನು ಕೋರ್ಟ್ ಪರಿಗಣಿಸಿಲ್ಲ. ಯಡಿಯೂರಪ್ಪ ಮನೆಯಲ್ಲಿದ್ದ ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಿಲ್ಲ. ಆಡಿಯೋ ರೆಕಾರ್ಡಿಂಗ್ ಅನ್ನೂ ನ್ಯಾಯಾಲಯ ಪರಿಗಣಿಸಿಲ್ಲ. ಹೊಸದಾಗಿ ಕಾಗ್ನಿಜೆನ್ಸ್ ಪಡೆದಿರುವ ಆದೇಶ ಸರಿಯಿಲ್ಲವೆಂದು ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು.

ಹೈಕೋರ್ಟ್ ಪೀಠ ಹೇಳಿದ್ದೇನು?

ಇದು ರದ್ದುಪಡಿಸಬೇಕಾದ ಪ್ರಕರಣವೆಂದು ಮನವರಿಕೆಯಾಗಿಲ್ಲ. ಆದರೆ ಕಾಗ್ನಿಜೆನ್ಸ್ ಪಡೆದ ವಿಧಾನದ ಬಗ್ಗೆ ಪ್ರಶ್ನೆಗಳಿವೆ ಎಂದು ಹೈಕೋರ್ಟ್ ಹೇಳಿದೆ.

ರಾಜ್ಯ ಸರ್ಕಾರದ ಪರ ವಕೀಲರ ವಾದವೇನು?

ರಾಜ್ಯ ಸರ್ಕಾರದ ಪರ ಎಸ್‌ಪಿಪಿ ಪ್ರೊ.ರವಿವರ್ಮ ಕುಮಾರ್ ವಾದ ಮಂಡನೆ ಮಾಡಿ, ಕೊಠಡಿಯಲ್ಲಿ ಲಾಕ್ ಮಾಡಿಕೊಂಡಿದ್ದರಿಂದ ಸಂತ್ರಸ್ತೆ ಹೇಳಿಕೆಯೇ ಮುಖ್ಯ. ಯಡಿಯೂರಪ್ಪ ಸೂಚನೆ ಮೇರೆಗೆ ಮೊಬೈಲ್​ನಲ್ಲಿದ್ದ ವಿಡಿಯೋ ಡಿಲೀಟ್ ಮಾಡಲಾಗಿದೆ. ಮೊಬೈಲ್ ರೆಕಾರ್ಡಿಂಗ್​ನಲ್ಲಿರುವುದು ಯಡಿಯೂರಪ್ಪ ಧ್ವನಿ ಎಂಬ ಬಗ್ಗೆ ಎಫ್​​ಎಸ್​ಎಲ್ ವರದಿಯಿದೆ. ಫಿರ್ಯಾದಿ ಮಹಿಳೆಗೆ ಬ್ಯಾಗ್​ನಲ್ಲಿ 2 ಲಕ್ಷ ರೂಪಾಯಿ ಹಣ ನೀಡಲಾಗಿದೆ. ನಡೆದ ಘಟನೆಯನ್ನು ಬಾಲಕಿಯೇ ವಿವರಿಸಿದ್ದಾಳೆಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅಂತಿಮವಾಗಿ ಆದೇಶ ಕಾಯ್ದಿರಿಸಿದೆ.

ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ಏನಿದು ಪ್ರಕರಣ?

ಯಡಿಯೂರಪ್ಪ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ 2024 ರ ಮಾರ್ಚ್​ನಲ್ಲಿ ಕೇಳಿಬಂದಿತ್ತು. ಸಂತ್ರಸ್ತೆಯ ತಾಯಿ ಈ ಆರೋಪ ಮಾಡಿದ್ದರು. ಬಳಿಕ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿತ್ತು. ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ನೀಡಿದ್ದರು. ಈ ನಡುವೆ, ಪ್ರಕರಣದ ರದ್ದು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಪೋಕ್ಸೋ ಕೇಸ್​: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್

ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ಈಗಾಗಲೇ ಸಿಕ್ಕಿದೆ. ಪ್ರಕರಣದ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ಇದೀಗ ಮುಕ್ತಾಯಗೊಂಡಿದ್ದು, ಆದೇಶ ಪ್ರಕಟವಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ