ಕೊವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ 60 ಸಾವಿರ ಬೇಡಿಕೆ ಇಟ್ಟಿದ್ದ ಆ್ಯಂಬುಲೆನ್ಸ್ ಸಿಬ್ಬಂದಿ ಬಂಧನ
ಜೈ ಹನುಮಾನ್ ಆ್ಯಂಬುಲೆನ್ಸ್ ಮಾಲೀಕ/ಚಾಲಕ ಹನುಮಂತಪ್ಪ ಮತ್ತು ನಂದನ್ ಇಂಟರ್‌ನ್ಯಾಷನಲ್ ಆ್ಯಂಬುಲೆನ್ಸ್ ಮಾಲೀಕ ಹರೀಶ್ ಅವರುಗಳೇ ಬಂಧಿತರಾಗಿದ್ದು, ಐಪಿಸಿ ಸೆಕ್ಷನ್ 384, 269, 270 ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಬಂಧಿಸಲಾಗಿದೆ.

ಬೆಂಗಳೂರು: ಕೊವಿಡ್ ಸೋಂಕಿನಿಂದ ಮೃತಪಟ್ಟ ಮೃತದೇಹ ಇಟ್ಟುಕೊಳ್ಳಲು ಮತ್ತು ಅಂತ್ಯಕ್ರಿಯೆ ನಡೆಸಲು 60 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಜೈ ಹನುಮಾನ್ ಆ್ಯಂಬುಲೆನ್ಸ್ ಮಾಲೀಕ/ಚಾಲಕ ಹನುಮಂತಪ್ಪ ಮತ್ತು ನಂದನ್ ಇಂಟರ್‌ನ್ಯಾಷನಲ್ ಆ್ಯಂಬುಲೆನ್ಸ್ ಮಾಲೀಕ ಹರೀಶ್ ಅವರುಗಳೇ ಬಂಧಿತರಾಗಿದ್ದು, ಐಪಿಸಿ ಸೆಕ್ಷನ್ 384, 269, 270 ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಬಂಧಿಸಲಾಗಿದೆ. ತಂದೆಯ ಅಂತ್ಯ ಸಂಸ್ಕಾರಕ್ಕೆ 60 ಸಾವಿರ ಹಣ ಹೊಂದಿಸಲು ಮಾಂಗಲ್ಯ ಸರ ಮಾರಲು ಮುಂದಾಗಿದ್ದ ಮಗಳ ನೋವನ್ನು ಟಿವಿ9 ನಡೆಸಿದ್ದ ರಹಸ್ಯ ಕಾರ್ಯಾಚರಣೆ ಬೆಳಕಿಗೆ ತಂದಿತ್ತು.ಮಾಂಗಲ್ಯ ಸರ ಮಾರಾಟ ಮಾಡದಂತೆ ಮೃತ ವ್ಯಕ್ತಿಯ ಮಗಳನ್ನು ರಕ್ಷಿಸಿತ್ತು.
ಏಪ್ರಿಲ್ 20ರಂದು ರಾತ್ರಿ ಮತ್ತಿಕೆರೆಯಲ್ಲಿ ಸೋಂಕಿತ ವ್ಯಕ್ತಿಯೋರ್ವರು ಮೃತಪಟ್ಟಿದ್ದರು. ಆದರೆ, ಅವರು ಬದುಕಿರಬಹುದೆಂದು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಸೋಂಕಿತ ವ್ಯಕ್ತಿ ಮೃತಪಟ್ಟ ಬಗ್ಗೆ ಆಸ್ಪತ್ರೆಯಲ್ಲಿ ವೈದ್ಯರು ದೃಢಪಡಿಸಿದ ನಂತರ ಅದೇ ಆ್ಯಂಬುಲೆನ್ಸ್ನಲ್ಲಿ ಹೆಬ್ಬಾಳಕ್ಕೆ ಮೃತದೇಹವನ್ನು ತರಲಾಗಿತ್ತು. ಕುಮಾರ್ ಆ್ಯಂಬುಲೆನ್ಸ್ ಮಾಲೀಕತ್ವದ ಹೆಬ್ಬಾಳದ ನಂದನ್ ಆ್ಯಂಬುಲೆನ್ಸ್ ಸರ್ವಿಸ್ ಮೂಲಕ ಕರೆತರಲಾಗಿತ್ತು. ಅಲ್ಲೇ ಇದ್ದ ಖಾಸಗಿ ಶವಾಗಾರದಲ್ಲಿ ಮೃತದೇಹವನ್ನು ಇರಿಸಲಾಗಿತ್ತು. ಈ ವೇಳೆ ಮೃತದೇಹ ಇಡಲು ಮತ್ತು ಅಂತ್ಯಕ್ರಿಯೆಗೆ 60 ಸಾವಿರ ನೀಡುವಂತೆ ಬೇಡಿಕೆ ಇಡಲಾಗಿತ್ತು.
ಒಂದು ದಿನದ ಸೇವಾ ದರ 3,500 ರೂಪಾಯಿ ಬದಲು 60 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಈ ಬಂಧಿತರು, ಬಳಿಕ 40 ಸಾವಿರ ನೀಡಿದರೆ ಮಾತ್ರ ಶವ ಕೊಡುವುದಾಗಿ ತಿಳಿಸಿದ್ದರು. ಬೇಡಿಕೆ ಇಟ್ಟಷ್ಟು ಹಣ ನೀಡದಿದ್ದರೆ ಹೆಬ್ಬಾಳ ಫ್ಲೈಓವರ್ ಕೆಳಗೆ ಮೃತದೇಹವನ್ನು ಬಿಟ್ಟು ಹೋಗುವುದಾಗಿ ಹೇಳಿದ್ದರು.ಈ ಕುರಿತು ಟಿವಿ9 ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರದ ನಂತರ ಮೃತ ವ್ಯಕ್ತಿಯ ಪುತ್ರಿ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
Covid-19 Karnataka Update: ಕರ್ನಾಟಕದಲ್ಲಿ ಇಂದು 25,795 ಮಂದಿಯಲ್ಲಿ ಕೊರೊನಾ ಸೋಂಕು, 123 ಸಾವು
Published On - 10:21 pm, Thu, 22 April 21



