
ಬೆಂಗಳೂರು, (ಅಕ್ಟೋಬರ್ 30): ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಎನ್ಡಿಯ ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆ್ಯಕ್ಟಿವ್ ಆಗಿದ್ದು, ಪುತ್ರ ವಿವೈ ವಿಜಯೇಂದ್ರನ ಮತ್ತಷ್ಟು ಬಲಪಡಿಸಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಯಡಿಯೂರಪ್ಪ ಅವರು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಹೌದು…ಇಂದು ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಇದೇ ವೇಳೆ ಪ್ರಸಕ್ತ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಚರ್ಚೆ ಮಾಡಿದ್ದಾರೆ.
ಸೈಲೆಂಟ್ ಆಗಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಯಾವಾಗ ಪರಿಷತ್ನ ನಾಲ್ಕು ಕ್ಷೇತ್ರಗಳಲ್ಲೂ ಎನ್ಡಿಎ ಗೆಲ್ಲುತ್ತಿದ್ದಂತೆಯೇ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ಬಿಎಸ್ವೈ ಪುಲ್ ಖುಷ್ ಆಗಿದ್ದು, ಇದೇ ಖುಷಿಯಲ್ಲಿ ಪುತ್ರನಿಗೆ ಮತ್ತಷ್ಟು ಬೂಸ್ಟ್ ನೀಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಿತ್ರ ಪಕ್ಷದ ಮುಖ್ಯಸ್ಥ ದೇವೇಗೌಡ ಅವರನ್ನು ಭೇಟಿ ಮಾಡಿ ರಾಜಕೀಯ ಆಗು ಹೋಗುಗಳ ಬಗ್ಗೆ ಚರ್ಚಿಸಿದ್ದಾರೆ.
ಬಿಜೆಪಿಯಲ್ಲೇ ಕೆಲವರು ವಿಜಯೇಂದ್ರ ಅವರನ್ನು ಮುಂದುವರಿಸಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಪಕ್ಷದಲ್ಲೇ ವಿಜಯೇಂದ್ರ ವಿರೋಧಿ ಬಣವೇ ಸೃಷ್ಟಿಯಾಗಿದೆ. ಇನ್ನೊಂದೆಡೆ ವಿಧಾನಸಭೆ ಚುನಾವಣೆಗೆ ಎರಡು ವರ್ಷ ಇದೆ. ಹೀಗಾಗಿ ಮುಂದೆ ಏನೆಲ್ಲಾ ಬದಲಾವಣೆ ಆಗುತ್ತೋ ಎನ್ನುವ ದೃಷ್ಟಿಯಿಂದ ಮುಂಜಾಗ್ರತಾವಾಗಿ ಈಗಿನಿಂದಲೇ ಮಿತ್ರ ಪಕ್ಷದ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವ ಪಯತ್ನ ಇದಾಗಿದೆ ಎನ್ನಬಹುದು.
ದೇವೇಗೌಡರ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ದೇವೇಗೌಡರ ಜೊತೆ ಪ್ರಚಲಿತ ರಾಜಕೀಯ ಬಗ್ಗೆ ಚರ್ಚೆ ಮಾಡಿದ್ದು, ಅವರು ಕೂಡಾ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ.ಒಂದು ಒಳ್ಳೆಯ ಬಿಜೆಪಿ-ಜೆಡಿಎಸ್ ಸರ್ಕಾರ ಬರಬೇಕು ಎಂಬ ಬಗ್ಗೆ ಎಲ್ಲರ ಅಭಿಪ್ರಾಯ ಇದೆ. ಕುಮಾರಸ್ವಾಮಿಯವರು ಹಾಗೂ ಇತರರ ಜೊತೆ ಚರ್ಚೆ ಬಳಿಕ ಮುಂಬರುವ ಚುನಾವಣೆಗಳಲ್ಲಿ ಕೂಡಾ ಹೋರಾಟ ಮಾಡುತ್ತೇವೆ. ಸುಮಾರು ಮೂವತ್ತು ನಿಮಿಷಗಳ ಕಾಲ ಚರ್ಚೆ ಮಾಡಿದ್ದೇವೆ. ನರೇಂದ್ರ ಮೋದಿ, ಅಮಿತ್ ಶಾ, ದೇವೇಗೌಡರು ಒಟ್ಟಾಗಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ. ಒಟ್ಟಾಗಿ ಹೋಗುತ್ತೇವೆ, ಹೋರಾಟ ಮಾಡುತ್ತೇವೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಗೊಂದಲ, ಬಡಿದಾಟ ನೋಡಿದರೆ, ಪದೇ ಪದೇ ದೆಹಲಿಗೆ ಹೋಗಿ ರಾಹುಲ್ ಗಾಂಧಿಯನ್ನು ಭೇಟಿ ಮಾಡುವುದನ್ನು ನೋಡಿದರೆ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ವಾತಾವರಣ ಇದೆ.
ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದು, ರಾಜ್ಯದಲ್ಲಿ ನಾವು ದುಸ್ಥಿತಿ ಎದುರಿಸುತ್ತಿದ್ದೇವೆ. ನಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರಿಗೂ ಅರಿವಾಗುತ್ತಿದೆ ಅನ್ನಿಸುತ್ತಿದೆ. ಜನ ಏನು ತೀರ್ಮಾನ ಮಾಡುತ್ತಾರೆ ಎಂದು ನೋಡೋಣ. ಬಸ್ ಗಳಿಗೆ ಡೀಸೆಲ್ ಹಾಕಲೂ ಆಗದ ಪರಿಸ್ಥಿತಿ ರಾಜ್ಯದಲ್ಲಿ ಇದೆ. ಸ್ಟಿಂಗ್ ಆಪರೇಷನ್ ವಿಚಾರ ಎಲ್ಲಾ ನೀವೇ ನೋಡುತ್ತಿದ್ದೀರಲ್ಲ ಎಂದರು.
Published On - 8:32 pm, Fri, 30 October 26