ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ಬೆದರಿಕೆ ಹಾಕುತ್ತಿರುವ ಕುಮಾರಸ್ವಾಮಿ: ಎಸ್ಐಟಿಗೆ ಕಾಂಗ್ರೆಸ್ ದೂರು
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಮತ್ತು ಮಾಜಿ ಸಚಿವ ರೇವಣ್ಣ ವಿರುದ್ಧದ ಕಿಡ್ನಾಪ್ ಪ್ರಕರಣದಲ್ಲಿ ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಗೂ ಸಂಕಷ್ಟ ಉಂಟಾಗಲಿದೆಯೇ? ಹೀಗೊಂದು ಪ್ರಶ್ನೆ ಇದೀಗ ಎದುರಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ವಿರುದ್ಧ ಎಸ್ಐಟಿಗೆ ದೂರು ನೀಡಿರುವುದು. ದೂರಿನಲ್ಲಿ ಏನಿದೆ? ಇದು ಕುಮಾರಸ್ವಾಮಿಗೆ ಸಂಕಷ್ಟ ತಂದೊಡ್ಡಲಿದೆಯಾ? ಇತ್ಯಾದಿ ವಿವರಗಳು ಇಲ್ಲಿವೆ.
ಬೆಂಗಳೂರು, ಮೇ 10: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ (Prajwal Revanna Video Case) ಪ್ರಕರಣದಲ್ಲಿ ಸಂತ್ರಸ್ತರಿಗೆ ಬೆದರಿಕೆ ಹಾಕಿ ತನಿಖೆಯನ್ನು ದಿಕ್ಕು ತಪ್ಪಿಸಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಕಾಂಗ್ರೆಸ್ (Congress) ಮುಖಂಡರು ಗುರುವಾರ ವಿಶೇಷ ತನಿಖಾ ತಂಡಕ್ಕೆ ದೂರು ಸಲ್ಲಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹಲವು ಮಹಿಳೆಯರು ಸಂತ್ರಸ್ತೆಯರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣಗಳ ತನಿಖೆಗೆ ಸರ್ಕಾರ ಎಸ್‌ಐಟಿ ರಚಿಸಿದೆ. ಹೀಗಿರುವಾಗ, ಕುಮಾರಸ್ವಾಮಿ ಸಂತ್ರಸ್ತೆಯರ ಸ್ಥಳವನ್ನು ಬಹಿರಂಗಪಡಿಸುತ್ತಿದ್ದಾರೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಜನರನ್ನು ಪರೋಕ್ಷವಾಗಿ ರಕ್ಷಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣಕ್ಕಾಗಿಯೇ ಸಂತ್ರಸ್ತೆಯರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಆರೋಪಿಸಲಾಗಿದೆ.
ಕುಮಾರಸ್ವಾಮಿಯ ವಿಚಾರಣೆಗೆ ಒಳಪಡಿಸಲು ಒತ್ತಾಯ
ಈ ಪ್ರಕರಣದ ಕುರಿತು ಹೆಚ್ಚಿನ ವಿವರಗಳು ಕುಮಾರಸ್ವಾಮಿಯವರ ಬಳಿ ಇವೆ ಎಂದಿರುವ ಕಾಂಗ್ರೆಸ್ ನಾಯಕರು, ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಎಸ್ಐಟಿಯನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಮುಖಂಡ ದೇವರಾಜೇಗೌಡ ಅವರು ತಮ್ಮ ಪಕ್ಷದ ನಾಯಕರಿಗೆ ವಿವರಗಳನ್ನು ರವಾನಿಸಿದ್ದಾರೆ. ಆದರೆ, ಅವರು ಪೊಲೀಸರನ್ನು ಏಕೆ ಸಂಪರ್ಕಿಸಲಿಲ್ಲ? ಗೌಡ ಅವರು ವಕೀಲರಾಗಿದ್ದು, ಅವರು ಕರ್ನಾಟಕ ಮಹಿಳಾ ಆಯೋಗವನ್ನೂ ಸಂಪರ್ಕಿಸಬಹುದಿತ್ತು ಎಂದು ಕಾಂಗ್ರೆಸ್ ನಾಯಕರು ದೂರಿನಲ್ಲಿ ಹೇಳಿದ್ದಾರೆ.
ವೀಡಿಯೋಗಳನ್ನು ಹರಿಬಿಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಮತ್ತು ದೇವರಾಜೇಗೌಡ ಒತ್ತಾಯಿಸುತ್ತಿರುವುದನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕರು, ನಿಜವಾಗಿ ಶಾಮೀಲಾಗಿರುವವರ ವಿರುದ್ಧ ಅವರ ಹೋರಾಟ ಅಲ್ಲ. ಇಬ್ಬರೂ ಸಂತ್ರಸ್ತ ಮಹಿಳೆಯರಿಗಾಗಿ ಧ್ವನಿ ಎತ್ತುತ್ತಿಲ್ಲ, ಆದರೆ ಪೆನ್ ಡ್ರೈವ್ ಅನ್ನು ಪ್ರಸಾರ ಮಾಡುವವರತ್ತ ಗಮನ ಹರಿಸುವ ಮೂಲಕ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.
ಸಿಬಿಐಗೆ ವಹಿಸಿದರೆ ಅಪರಾಧಿಗಳ ರಕ್ಷಣೆ; ಕೃಷ್ಣ ಬೈರೇಗೌಡ
ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ಅಪರಾಧದಲ್ಲಿ ಭಾಗಿಯಾದವರನ್ನು ರಕ್ಷಿಸುವುದಕ್ಕಷ್ಟೇ ಹೊರತು ಬೇರೇನೂ ಅಲ್ಲ. ಸಿಬಿಐ ಮತ್ತು ಇ.ಡಿ. ವೈಟ್‌ವಾಶ್ ಮಾಡಲು ಅಥವಾ ತೊಳೆಯುವ ಯಂತ್ರವಾಗಿ ಬಳಸುವುದಕ್ಕೆ ಹೆಸರುವಾಸಿಯಾಗಿದೆ. ಲಲಿತ್ ಮೋದಿ, ವಿಜಯ್ ಮಲ್ಯ ಮತ್ತು ಇತರ ದೇಶಗಳಲ್ಲಿ ಸುರಕ್ಷಿತವಾಗಿದ್ದ ಇತರರಿಗೆ ಏನಾಯಿತು? ಈ ಏಜೆನ್ಸಿಗಳ ಮೂಲಕ ಬಿಜೆಪಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಸಚಿವ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣಕ್ಕೆ ಸ್ಫೋಟಕ ತಿರುವು: ಸಂತ್ರಸ್ತೆಗೆ ಬೆದರಿಕೆ, ಮಹಿಳಾ ಆಯೋಗದಿಂದ ಬಹಿರಂಗ
ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ಕರ್ನಾಟಕ ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:32 am, Fri, 10 May 24