AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಬಿಜೆಪಿ, ಜೆಡಿಎಸ್ ಆಗ್ರಹ: ಕಾನೂನಿನಲ್ಲಿ ಏನೆಲ್ಲ ಆಯ್ಕೆಗಳಿವೆ?

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಜೆಡಿಎಸ್ ಮತ್ತು ಬಿಜೆಪಿ ಆಗ್ರಹಿಸಿವೆ. ಆದರೆ ರಾಜ್ಯ ಸರ್ಕಾರ ಈಗಾಗಲೇ ಎಸ್​​ಐಟಿ ರಚನೆ ಮಾಡಿರುವಿದರಿಂದ ಅದು ಅಷ್ಟು ಸುಲಭವಿಲ್ಲ. ಅಶ್ಲೀಲ ವಿಡಿಯೋ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕಿದ್ದರೆ ಕಾನೂನಿನಲ್ಲಿ ಏನೆಲ್ಲ ಆಯ್ಕೆಗಳಿವೆ ಎಂಬ ಮಾಹಿತಿ ಇಲ್ಲಿದೆ.

ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಬಿಜೆಪಿ, ಜೆಡಿಎಸ್ ಆಗ್ರಹ: ಕಾನೂನಿನಲ್ಲಿ ಏನೆಲ್ಲ ಆಯ್ಕೆಗಳಿವೆ?
ಪ್ರಜ್ವಲ್ ರೇವಣ್ಣ
Kiran HV
| Updated By: Ganapathi Sharma|

Updated on: May 08, 2024 | 10:30 AM

Share

ಬೆಂಗಳೂರು, ಮೇ 8: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ತನಿಖೆಯನ್ನು ಸಿಬಿಐಗೆ (CBI) ವಹಿಸಬೇಕೆಂದು ಜೆಡಿಎಸ್ ಮತ್ತು ಬಿಜೆಪಿ ಆಗ್ರಹಿಸಿವೆ. ರಾಜ್ಯ ಸರ್ಕಾರ ರಚಿಸಿರುವ ಎಸ್​ಐಟಿಯ (SIT) ಬಗ್ಗೆ ನಂಬಿಕೆ ಇಲ್ಲ ಎಂದು ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಹಾಸನದ ಬಿಜೆಪಿ ನಾಯಕ ದೇವರಾಜೇಗೌಡ ಹೇಳಿದ್ದಾರೆ. ಅಲ್ಲದೆ, ಅಗತ್ಯಬಿದ್ದಲ್ಲಿ ಕೋರ್ಟ್​ ಮೊರೆ ಹೋಗುತ್ತೇವೆ ಎಂದೂ ಹೇಳಿದ್ದಾರೆ. ಈ ಮಧ್ಯೆ, ಕುಮಾರಸ್ವಾಮಿ ದೆಹಲಿಗೆ ತೆರಳಿ ಹೋರಾಟ ನಡೆಸಲೂ ಮುಂದಾಗಿದ್ದಾರೆ.

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಕುಮಾರಸ್ವಾಮಿ, ಪೆನ್​​​ಡ್ರೈವ್ ಮೂಲಕ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕಾನೂನು ಹೋರಾಟಕ್ಕೆ ಯೋಜನೆ ರೂಪಿಸುತ್ತಿದ್ದಾರೆ. ದೆಹಲಿ ಮಟ್ಟದಲ್ಲಿ ಹೋರಾಟಕ್ಕೆ ಯೋಜನೆ ರೂಪಿಸಿತ್ತಿರುವ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಪೆನ್​​ಡ್ರೈವ್ ಪ್ರಕರಣದ ಹಿಂದೆ ಕಾಂಗ್ರೆಸ್ ಪ್ರಭಾವಿ ನಾಯಕರ ಕೈವಾಡದ ಬಗ್ಗೆ ಆರೋಪ ಮಾಡುತ್ತಿರುವ ಕುಮಾರಸ್ವಾಮಿ, ಈ ಬಗ್ಗೆ ಶೀಘ್ರದಲ್ಲೇ ದೆಹಲಿಗೆ ತೆರಳಿ ಸುದ್ದಿಗೋಷ್ಠಿ ಮಾಡುವ ಸಾಧ್ಯತೆ ಇದೆ.

ಕುಮಾರಸ್ವಾಮಿ ಈಗಾಗಲೇ ಪೆನ್ ಡ್ರೈವ್ ಪ್ರಕರಣದ ಹಿಂದಿರುವವರ ದಾಖಲೆಗಳು, ಆಡಿಯೋ ಮತ್ತು ವಿಡಿಯೋ ಸಂಗ್ರಹ ಮಾಡಿದ್ದಾರೆ. ಬಿಜೆಪಿ ಹೈ‌ಕಮಾಂಡ್ ನಾಯಕರ ಭೇಟಿಯಾಗಿ ಚರ್ಚೆ ನಡೆಸಿ ಮುಂದಿನ ಹೋರಾಟಕ್ಕೆ ತಂತ್ರ ರೂಪಿಸಲಿದ್ದಾರೆ. ಈ ಮೂಲಕ ಕಾಂಗ್ರೆಸ್​​ನ ಮಹಾನ್ ನಾಯಕನ ವಿರುದ್ಧ ದೆಹಲಿ ಮಟ್ಟದಲ್ಲಿ ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ.

ಪ್ರಜ್ವಲ್ ತಪ್ಪು ಮಾಡಿದ್ದರೆ ಖಂಡಿತ ಶಿಕ್ಷೆ ಆಗಲಿ. ಆದರೆ, ವಿಡಿಯೋ ವೈರಲ್ ಮಾಡಿವ ಮೂಲಕ ಹತ್ತಾರು ಮಹಿಳೆಯರ ಮಾನಹಾನಿ ಮಾಡಿದವರ ವಿರುದ್ಧ ಕ್ರಮ ಆಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸಿಬಿಐ ತನಿಖೆಗೆ ವಹಿಸಲು ಎರಡೇ ದಾರಿ

ಅಶ್ಲೀಲ ವಿಡಿಯೋ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕಿದ್ದರೆ ಸದ್ಯ ಎರಡೇ ಆಯ್ಕೆಗಳಿವೆ. ಒಂದೋ ರಾಜ್ಯ ಸರ್ಕಾರವೇ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು. ಇಲ್ಲವಾದಲ್ಲಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ ಸಿಬಿಐ ತನಿಖೆಗೆ ಆದೇಶ ನೀಡಬೇಕು. ಇದು ಬಿಟ್ಟರೆ ಸಿಬಿಐ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತನಿಖೆ ಮಾಡಲು ಅವಕಾಶವಿಲ್ಲ. ರಾಜ್ಯ ಸರ್ಕಾರ ಹೇಗೂ ಎಸ್​ಐಟಿ ರಚನೆ ಮಾಡಿರುವುದರಿಂದ ಸಿಬಿಐ ತನಿಖೆಗೆ ಆದೇಶ ನೀಡದು.

ಹೆಚ್​ಡಿ ರೇವಣ್ಣಗೆ ಜಾಮೀನಾ, ಎಸ್​ಐಟಿ ಕಸ್ಟಡಿಯಾ? ಇಂದೇ ನಿರ್ಣಾಯಕ ದಿನ

ಹೀಗಾಗಿ ಸದ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಮುಂದೆ ಈಗಿರುವುದು ಒಂದೇ ದಾರಿ. ಅದೆಂದರೆ ಹೈಕೋರ್ಟ್​​ಗೆ ರೀಟ್ ಅರ್ಜಿ ಸಲ್ಲಿಸಬೇಕು. ಎಸ್‌ಐಟಿಯಿಂದ ಸರಿಯಾದ ತನಿಖೆಯಾಗುತ್ತಿಲ್ಲ, ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದೇಶಿಸಬೇಕು ಎಂದು ಮನವಿ ಸಲ್ಲಿಸಬೇಕು. ಸದ್ಯ ಎಸ್​ಐಟಿಯಿಂದ ರಾಜಕೀಯ ಪ್ರೇರಿತವಾಗಿ ತನಿಖೆ ನಡೆಯುತ್ತಿದೆ, ಸರಿಯಾದ ರೀತಿಯಲ್ಲಿ ತನಿಖೆಯಾಗುತ್ತಿಲ್ಲ ಎಂದು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು. ಆಗ ಹೈಕೋರ್ಟ್ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ