ಬೆಂಗಳೂರು, ಮಾರ್ಚ್ 4: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಎಫ್ಎಸ್ಎಲ್(FSL) ವರದಿ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ವರದಿ ಬಹಿರಂಗಪಡಿಸಬೇಕು. ವಿಳಂಬವೇಕೆ ಎಂದು ಬಿಜೆಪಿ ಪ್ರಶ್ನಿಸಿದೆ. ಈ ವಿಚಾರವಾಗಿ ಬಿಜೆಪಿ ಶಾಸಕರ ನಿಯೋಗದಿಂದ ಡಿಜಿ&ಐಜಿಪಿ ಕಚೇರಿಗೆ ಭೇಟಿ ನೀಡಲಾಗಿದೆ. ಮೊದಲು FSL ಕಚೇರಿಗೆ ತೆರಳಲು ನಿರ್ಧರಿಸಿದ್ದ ಬಿಜೆಪಿ ನಿಯೋಗ ನಂತರ ಡಿಜಿ&ಐಜಿಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದೆ. ಬಿಜೆಪಿ ಶಾಸಕರಾದ ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಸಿ.ಕೆ.ರಾಮಮೂರ್ತಿ, ಧೀರಜ್ ಮುನಿರಾಜುರಿಂದ ಬೆಂಗಳೂರಿನ ನೃಪತುಂಗರಸ್ತೆಯಲ್ಲಿರುವ ಡಿಜಿ&ಐಜಿಪಿ ಕಚೇರಿ ಭೇಟಿ ನೀಡಿ ಶೀಘ್ರದಲ್ಲೇ FSL ವರದಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಪ್ರತಿಕ್ರಿಯಿಸಿದ್ದು, 8 ದಿನ ಕಳೆದರೂ ಸರ್ಕಾರ ಎಫ್ಎಸ್ಎಲ್ ವರದಿ ಬಹಿರಂಗಪಡಿಸಿಲ್ಲ. ಎಫ್ಎಸ್ಎಲ್ ವರದಿ ಬಂದರೂ ಸರ್ಕಾರ ಮುಚ್ಚಿಡಲು ಪ್ರಯತ್ನಿಸುತ್ತಿದೆ. ಹೀಗಾಗಿ ಬಿಜೆಪಿ ನಿಯೋಗದಿಂದ ಡಿಜಿ&ಐಜಿಪಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ಎಫ್ಎಸ್ಎಲ್ ವರದಿಯಲ್ಲಿ ದೃಢ: ಬಿಜೆಪಿ
ಇದು ದೇಶದ ಭದ್ರತೆ, ವಿಧಾನಸೌಧದ ಭದ್ರತೆ ವಿಚಾರವಾಗಿದೆ. ಮನಸಾಕ್ಷಿ ಇರುವ ಸರ್ಕಾರವಾಗಿದ್ದರೆ 24 ಗಂಟೆಯಲ್ಲಿ ಕ್ರಮ ಆಗಿರುತ್ತಿತ್ತು. 2-3 ದಿನದಲ್ಲಿ ವರದಿ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟವಾಗಿದೆ. ಯಾವುದು ನಿಜ ಎಂದು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದಿದ್ದಾರೆ.
ಫೆಬ್ರವರಿ 27 ರಂದು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವಿನ ಸಂಭ್ರಮದ ವೇಳೆ ಪಾಕ್ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ಆರೋಪ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ನಿನ್ನೆವರೆಗೂ ಎಫ್ಎಸ್ಎಲ್ ವರದಿ ಬಂದಿಲ್ಲ, ಬಂದಿದೆ ಅನ್ನೋ ವಿಚಾರವಾಗಿ ನಡೀತಿದ್ದ ಮಾತಿನ ಕದನಕ್ಕೆ ಇವತ್ತು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಎಫ್ಎಸ್ಎಲ್ ವರದಿ ಬಿಡುಗಡೆಗೆ ಆಗ್ರಹಿಸಿದ್ದ ಬಿಜೆಪಿ, ಖಾಸಗಿ ಎಫ್‌ಎಸ್‌ಎಲ್ ವರದಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ದೇಶದ್ರೋಹ ಕ್ಯಾನ್ಸರ್ ಇದ್ದ ಹಾಗೆ, ಆಪರೇಷನ್ ಮಾಡದಿದ್ದರೆ ದೇಶದ ತುಂಬ ಹರಡುತ್ತದೆ: ಪ್ರಮೋದ್ ಮುತಾಲಿಕ್
ಖಾಸಗಿ ಸಂಸ್ಥೆಯ ಎಫ್ಎಸ್ಎಲ್ ತಜ್ಞ ಫಣೀಂದ್ರ ತಯಾರಿಸಿರುವ ವರದಿಯನ್ನು ರಾಜ್ಯ ಬಿಜೆಪಿ ಘಟಕ ಟ್ವಿಟರ್ನಲ್ಲಿ ಹಂಚಿಕೊಂಡಿದೆ. Clue4 Evidence Forensic Investigation pvt. Ltd ಖಾಸಗಿ ಸಂಸ್ಥೆಯಲ್ಲಿ ಈ ವರದಿ ತಯಾರಿಸಲಾಗಿದೆ. ಖಾಸಗಿ ಎಫ್ಎಸ್ಎಲ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಸಾಬೀತಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.