ಪಾಕ್ ಪರ ಘೋಷಣೆ ಪ್ರಕರಣ: ವಿಚಲಿತವಾಗಿರುವ ಕಾಂಗ್ರೆಸ್ ಪಾಳೆಯ, ಸಿಎಂ ಸಿದ್ದರಾಮಯ್ಯ ದಿಢೀರ್ ಸಭೆ, ಡ್ಯಾಮೇಜ್ ಕಂಟ್ರೊಲ್ ಮೊರೆ
Pro Pakistan Slogan Case: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಲ್ಲಿ ಮೂವರನ್ನು ಬಂಧಿಸಿರುವುದು ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಸಮಸ್ಯೆ, ಸವಾಲು ತಂದೊಡ್ಡಿದೆ. ಇದನ್ನು ರಾಜಕೀಯವಾಗಿ ಹೇಗೆ ನಿರ್ವಹಿಸಬೇಕು ಎಂಬುದನ್ನು ಚರ್ಚಿಸಲು ಸಿಎಂ ಕಾವೇರಿ ನಿವಾಸದಲ್ಲಿ ಸೋಮವಾರ ರಾತ್ರಿ ಸಭೆ ನಡೆದಿದೆ.
ಬೆಂಗಳೂರು, ಮಾರ್ಚ್ 5: ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ (Pro Pakistan Slogan) ಕೂಗಿದ ಆರೋಪ ಕೇಳಿ ಬಂದಾಗಲೇ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ದೊಡ್ಡ ಮಾತಿನ ಸಮರ ನಡೆದಿತ್ತು. ಇದೀಗ, ಘೋಷಣೆ ಕೂಗಿದ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿಜೆಪಿ ಯವರು ಖಾಸಗಿ ಎಫ್‌ಎಸ್‌ಎಲ್ ರಿಪೋರ್ಟ್ ಬಿಡುಗಡೆ ಮಾಡಿದ್ದು, ಅದರಲ್ಲೂ ಪಾಕ್ ಪರ ಘೋಷಣೆ ಕೂಗಿದ್ದು ಪಕ್ಕಾ ಆಗಿತ್ತು. ಹೀಗಾಗಿ ಬಿಜೆಪಿಗೆ ಇದು ಈಗ ಮತ್ತಷ್ಟು ಬಲವಾದ ಅಸ್ತ್ರವಾಗಿ ಬದಲಾಗಿದೆ. ಹೀಗಾಗೇ ಸಿಎಂ ಸಿದ್ದರಾಮಯ್ಯ (Siddaramaiah) ಸಹ ಅಲರ್ಟ್ ಆಗಿದ್ದಾರೆ.
ಒಂದೆಡೆ ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳಿಗೆ ನ್ಯಾಯಾಂಗ ಬಂಧನವಾಗಿದ್ದರೆ, ಇತ್ತ ಇದೇ ಪಾಕ್ ಪರ ಘೋಷಣೆ ಆಡಳಿತಾರೂಢ ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿದೆ. ಮೂವರನ್ನು ಬಂಧಿಸಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಸೋಮವಾರ ಕಾವೇರಿ ನಿವಾಸದಲ್ಲಿ ದಿಢೀರ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಇದ್ದರು. ಆರೋಪಿಗಳ ಬಂಧನದಿಂದ ಆಗುವ ರಾಜಕೀಯ ಲಾಭ ನಷ್ಟ ಮತ್ತು ವಿಪಕ್ಷಗಳು ಇದನ್ನ ಯಾವ ರೀತಿ ಬಳಸಿಕೊಳ್ತಾರೆ ಅನ್ನೋ ಕುರಿತು ಮಾತುಕತೆ ನಡೆಯಿತು. ಸರ್ಕಾರಕ್ಕೆ ಡ್ಯಾಮೇಜ್ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಸಮಾಲೋಚನೆ ನಡೆಸಿದರು. ಇನ್ನು ದೆಹಲಿಗೆ ಹೊರಟಿದ್ದ ಸುರ್ಜೇವಾಲಾ ಸಹ ಪ್ರಯಾಣ ರದ್ದು ಮಾಡಿ ವಾಪಸ್ ಬಂದು ಸಿಎಂ, ಡಿಸಿಎಂ ಜೊತೆ ಮಾತುಕತೆ ನಡೆಸಿದರು.
ಈ ವಿದ್ಯಮಾನಗಳೇ ಈ ಪ್ರಕರಣದಿಂದ ಅದ್ಯಾವ ಪರಿ ಆಡಳಿತಾರೂಢ ನಾಯಕರು ವಿಚಲಿತರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅತ್ತ ವಿಪಕ್ಷ ನಾಯಕರಂತೂ ಕಾಂಗ್ರೆಸ್ ವಿರುದ್ಧ, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ವಿರುದ್ಧ ಮಾತು ಮಾತಿನಲ್ಲೇ ತಿವಿಯುತ್ತಿದ್ದಾರೆ.
ಇನ್ನು ವಿಜಯಪುರದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮೂವರನ್ನ ಬಂಧಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ತಾವೇನಾದ್ರೂ ಗೃಹಮಂತ್ರಿ ಆಗಿದ್ರೆ ಪಾಕ್ ಪರ ಘೋಷಣೆ ಕೂಗಿದವ್ರ ಎನ್ಕೌಂಟರ್ ಮಾಡುತ್ತಿದ್ದೆ ಎಂದಿದ್ದಾರೆ. ಒಂದು ವೇಳೆ ನನ್ನ ಕೈಯಲ್ಲಿ ಏನಾದ್ರೂ ಗೃಹ ಮಂತ್ರಿ ಸ್ಥಾನ ಇದ್ದಿದ್ರೆ, ಒಬ್ಬೊಬ್ಬ ಹಂದಿಗಳನ್ನು ಮನೆಗೆ ನುಗ್ಗಿ ಎನ್ಕೌಂಟರ್ ಮಾಡ್ತಾ ಇದ್ದೆ ಎಂದಿದ್ದಾರೆ.
ಬಿಜೆಪಿಯ ಖಾಸಗಿ ಎಫ್‌ಎಸ್‌ಎಲ್ ವರದಿಗೆ ‘ಕೈ’ ನಾಯಕರು ಕೆಂಡ
ಅಷ್ಟಕ್ಕೂ, ಸರ್ಕಾರದ ಎಫ್‌ಎಸ್‌ಎಲ್ ವರದಿ ಇನ್ನೂ ಬಹಿರಂಗವಾಗಿಲ್ಲ. ಈ ಮಧ್ಯೆ ಬಿಜೆಪಿ ಖಾಸಗಿ ಎಫ್‌ಎಸ್‌ಎಲ್ ವರದಿ ಬಿಡುಗಡೆ ಮಾಡಿ. ಪಾಕಿಸ್ತಾನ ಪರ ಘೋಷಣೆ ಕೂಗಿರೋದು ಸಾಬೀತಾಗಿದೆ ಅಂತಾ ಗಂಭೀರ ಆರೋಪ ಮಾಡಿತ್ತು. ಆದಕ್ಕೆ ಕಾಂಗ್ರೆಸ್ ನಾಯಕರೂ ಕೂಡ ಹರಿಹಾಯ್ದರು.
ಇನ್ನು ಖಾಸಗಿ ಲ್ಯಾಬ್ ವರದಿ ನೀಡಿರುವ ಖಾಸಗಿ ಫೋರೆನ್ಸಿಕ್ ಎಕ್ಸ್‌ಪರ್ಟ್ ಫಣೀಂದ್ರ, 46 ಗಂಟೆಗಳ ಕಾಲ ನಾವು ವೈಜ್ಞಾನಿಕವಾಗಿ ಪರೀಕ್ಷೆ ಮಾಡಿದ್ದೇವೆ. ಈ ಬಗ್ಗೆ ಸರ್ಕಾರ ಏನಾದರೂ ಮಾಹಿತಿ ಕೇಳಿದರೆ ಉತ್ತರಿಸಲು ತಯಾರಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಪಾಕ್ ಪರ ಘೋಷಣೆ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
ಒಟ್ಟಾರೆ, ಪಾಕ್ ಪರ ಘೋಷಣೆ ಕೂಗಿರೋ ಆರೋಪದಲ್ಲಿ ಮೂವರು ಬಂಧನವಾಗಿದ್ದಾರೆ. ತನಿಖೆ ಬಳಿಕ ಮತ್ತಷ್ಟು ಮಾಹಿತಿ ಹೊರಬೀಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ