AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಪ್ರತಿಭಟನೆ: ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಅಮೆರಿಕಾದಲ್ಲಿ ಮೀಸಲಾತಿ ರದ್ದು ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಹುಲ್​ ಗಾಂಧಿ ಹೇಳಿಕೆ ಖಂಡಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಕರೆ ನೀಡಿತ್ತು. ಸದ್ಯ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದು, ಪ್ರಾಣಿ ಹಿಂಸೆ ವಿರುದ್ಧ ಕಟುಕರು ಪ್ರತಿಭಟನೆ ಮಾಡಿದಂತೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಪ್ರತಿಭಟನೆ: ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಪ್ರತಿಭಟನೆ: ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಗಂಗಾಧರ​ ಬ. ಸಾಬೋಜಿ
|

Updated on: Sep 12, 2024 | 5:25 PM

Share

ಬೆಂಗಳೂರು, ಸೆಪ್ಟೆಂಬರ್​​ 12: ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ (Rahul Gandhi) ಅವರು ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ರಾಜ್ಯ ಬಿಜೆಪಿ ನಾಯಕರು ಮಾಡುತ್ತಿರುವ ಪ್ರತಿಭಟನೆ,  ಪ್ರಾಣಿ ಹಿಂಸೆ ವಿರುದ್ಧ ಕಟುಕರು ಪ್ರತಿಭಟನೆ ಮಾಡಿದಂತೆ ಎಂದು ಬಿಜೆಪಿ ನಾಯಕರ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ಮಾಡಿದ್ದಾರೆ.

ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ?

ಈ ಬಗ್ಗೆ ಟ್ವೀಟ್​ ಮಾಡಿರು ಸಿದ್ದರಾಮಯ್ಯ, ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರಿಗೆ, ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಇಂತಹ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ. ಮೀಸಲಾತಿ ವಿರೋಧವನ್ನು ರಕ್ತಗತವಾಗಿಸಿಕೊಂಡಿರುವ ಬಿಜೆಪಿ ನಾಯಕರಿಗೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಅರ್ಥಮಾಡಿಕೊಳ್ಳುವ ಜ್ಞಾನವಾಗಲಿ, ವ್ಯವಧಾನವಾಗಲಿ ಇಲ್ಲದಿರುವುದು ಆಶ್ಚರ್ಯವೇನಲ್ಲ ಎಂದಿದ್ದಾರೆ.

ವಿದ್ಯೆ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸರ್ವರಿಗೂ ಸಮಾನ ಪಾಲನ್ನು ನೀಡುವುದೇ ಮೀಸಲಾತಿಯ ಮೂಲ ಉದ್ದೇಶ. ಆ ಉದ್ದೇಶ ಸಾಧನೆಯಾದ ನಂತರ ಮೀಸಲಾತಿ ಯಾಕೆ ಬೇಕು? ಇದನ್ನು ರಾಹುಲ್ ಗಾಂಧಿಯವರು ಮಾತ್ರ ಅಲ್ಲ ನಾನೂ ಹೇಳುತ್ತೇನೆ. ಇದು ಹೇಗೆ ಮೀಸಲಾತಿ ವಿರೋಧಿ ಹೇಳಿಕೆ ಆಗುತ್ತದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೀಸಲಾತಿ ಕುರಿತು ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಬಿಜೆಪಿ

ಸರ್ವರಿಗೂ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸಮಾನ ಪಾಲು ಸಿಗಬೇಕೆಂಬ ಉದ್ದೇಶದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಆದರೆ ಮೀಸಲಾತಿಯ ಹೊರತಾಗಿಯೂ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಇನ್ನೂ ಸಿಕ್ಕಿಲ್ಲ, ಸಾಮಾಜಿಕ ಅಸಮಾನತೆ ಕಡಿಮೆಯಾಗಿಲ್ಲ. ಇದಕ್ಕೆ ಬಿಜೆಪಿ ನಾಯಕರಂತಹ ಜಾತಿ ಪಟ್ಟಭದ್ರರು ಕಾರಣ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟ ಎಂದಿದ್ದಾರೆ.

ಬಿಜೆಪಿಯ ಮಾತೃ ಸಂಸ್ಥೆಯಾದ ಆರ್​ಎಸ್​ಎಸ್ ಹುಟ್ಟಿನಿಂದಲೆ ವರ್ಣವ್ಯವಸ್ಥೆಯನ್ನು ಸಮರ್ಥಿಸಿಕೊಂಡು ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಸಾಮಾಜಿಕ ನ್ಯಾಯದಾನದ ಅವಕಾಶಗಳು ತೆರೆದುಕೊಂಡಾಗೆಲ್ಲ ಅದರ ವಿರುದ್ಧ ಹೋರಾಟ ನಡೆಸಿರುವುದು ಬಿಜೆಪಿ. ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ವಿರೋಧಿಸಿ ದಿವಂಗತ ನ್ಯಾ.ರಾಮ ಜೋಯಿಸ್‌ರಿಂದ ಸುಪ್ರೀಂ ಕೋರ್ಟ್​ಗೆ ಕಟ್ಲೆ ಹಾಕಿಸಿದ್ದ ಬಿಜೆಪಿ ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಮೀಸಲಾತಿಯನ್ನು ವಿರೋಧಿಸಿ ಚಳುವಳಿ ನಡೆಸಿದೆ.

ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರು ಮಂಡಲ್ ವರದಿ ಜಾರಿಗೊಳಿಸಿದ್ದಾಗ ಅಮಾಯಕ ವಿದ್ಯಾರ್ಥಿಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರಕ್ಕೆ ಪ್ರಚೋದಿಸಿದ್ದ ಬಿಜೆಪಿ, ಮಂಡಲ್ ವರದಿಗೆ ವಿರುದ್ಧವಾಗಿ ಕಮಂಡಲ ಚಳವಳಿಗೆ ಚಾಲನೆ ನೀಡಿ ಜನರ ತಲೆಯಲ್ಲಿ ಧರ್ಮದ ಅಫೀಮು ತುಂಬುವ ಪ್ರಯತ್ನ ಮಾಡಿತ್ತು. ಕೋಮುವಾದದ ಗುರಿ ಕೇವಲ ಅಲ್ಪಸಂಖ್ಯಾತರಲ್ಲ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಶವೂ ಅದರ ಗುರಿಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಮೀಸಲಾತಿ ಫಲಾನುಭವಿಗಳಲ್ಲಿನ್ನ ಜಾಗೃತಿಯಿಂದಾಗಿ ಮೀಸಲಾತಿಯನ್ನು ನೇರವಾಗಿ ವಿರೋಧಿಸುವ ದಮ್ಮ-ತಾಕತ್ತು ಇಂದಿನ ಬಿಜೆಪಿ ನಾಯಕರಿಗೆ ಇಲ್ಲ. ಇದಕ್ಕಾಗಿ ಒಂದೆಡೆ ಮೀಸಲಾತಿಗೆ ಕಾನೂನಿನ ರಕ್ಷಣೆ ನೀಡಿರುವ ಸಂವಿಧಾನವನ್ನೇ ಬದಲಾಯಿಸುವ ಪ್ರಯತ್ನ ಮಾಡಿದರೆ ಇನ್ನೊಂದೆಡೆ ಮೀಸಲಾತಿ ಫಲಾನುಭವಿಗಳ ನಡುವೆಯೆ ಅಂತಃಕಲಹ ಏರ್ಪಡಿಸಿ ಸಾಮಾಜಿಕ ನ್ಯಾಯದ ಅಸ್ತ್ರವನ್ನು ಮೊಂಡಾಗಿಸುವ ಪ್ರಯತ್ನ ಮಾಡುತ್ತಿದೆ.

ಇದನ್ನೂ ಓದಿ: ಸಿಎಂ ಆಗುವ ಉದ್ದೇಶದಿಂದಲೇ ರಾಹುಲ್ ಗಾಂಧಿಯನ್ನು ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ: ಪ್ರಲ್ಹಾದ್​ ಜೋಶಿ

ಮೀಸಲಾತಿಯ ಫಲಾನುಭವಿಗಳಾದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯ ಇಂದು ಜಾಗೃತವಾಗಿದೆ. ಯಾರು ತಮ್ಮ ಶತ್ರುಗಳು ಮತ್ತು ಮಿತ್ರರು ಎನ್ನುವುದನ್ನು ಅವರು ಅರಿತುಕೊಂಡಿದ್ದಾರೆ. ಮೀಸಲಾತಿ ವಿರೋಧವನ್ನು ಅಂತರ್ಯದಲ್ಲಿ ಅಡಗಿಸಿಕೊಂಡು ಬಹಿರಂಗವಾಗಿ ಮೀಸಲಾತಿ ಪರ ಘೋಷಣೆ ಕೂಗಿದರೆ ನಂಬುವಷ್ಟು ನಮ್ಮ ಜನ ದಡ್ಡರಲ್ಲ. ಮೀಸಲಾತಿಯೂ ಸೇರಿದಂತೆ ಸಾಮಾಜಿಕ ನ್ಯಾಯದಾನದ ಅವಕಾಶಗಳನ್ನು ಕಾಲಕಾಲಕ್ಕೆ ಹೇಗೆ ಬಿಜೆಪಿ ಮತ್ತು ಸಂಘ ಪರಿವಾರ ಚಿವುಟಿಹಾಕಿದೆ ಎನ್ನುವುದನ್ನು ನಮ್ಮ ಜನ ನೋಡಿ, ಅನುಭವಿಸಿ ತಿಳಿದುಕೊಂಡಿದ್ದಾರೆ. ನಿಮ್ಮ ಹುಸಿ ಸಾಮಾಜಿಕ ನ್ಯಾಯದ ಘೋಷಣೆಗೆ ಅವರು ಮರುಳಾಗುವವರಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.