ಕೇರಳಕ್ಕೆ ಉಪಕಾರಿ, ಕರ್ನಾಟಕಕ್ಕೆ ಮಾರಿ: ಸಿಎಂ ವಿರುದ್ಧ ಅಶೋಕ್ ಆಕ್ರೋಶಗೊಂಡಿದ್ಯಾಕೆ?
ನೆರೆ ರಾಜ್ಯ ಕೇರಳ ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುವ ವಿಚಾರವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ವಿಚಾರಕ್ಕೆ ಬಿಜೆಪಿ ನಾಕರು ಕಿಡಿಕಾರಿದ್ದಾರೆ. ಅದೇ ರೀತಿಯಾಗಿ ಸಿದ್ದರಾಮಯ್ಯ ವಿರುದ್ದ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಕೇರಳಕ್ಕೆ ಉಪಕಾರಿ, ಕರ್ನಾಟಕಕ್ಕೆ ಮಾರಿ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು, ಡಿಸೆಂಬರ್ 11: ವಯನಾಡು ಪುನರ್ವಸತಿ ಯೋಜನೆಯ ಭಾಗವಾಗಿ 100 ಮನೆಗಳನ್ನು ಕಟ್ಟಿಸಿಕೊಡುವುದಾಗಿ ಕರ್ನಾಟಕ ಸರ್ಕಾರ ತಿಳಿಸಿತ್ತು. ಆದರೆ ಕೇರಳ ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಇದೀಗ ಮತ್ತೊಮ್ಮೆ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಪತ್ರ ಬರೆದಿದ್ದಾರೆ. ಸದ್ಯ ಈ ವಿಚಾರವಾಗಿ ವಿರೋಧ ವ್ಯಕ್ತವಾಗಿದ್ದು, ಕೇರಳಕ್ಕೆ ಉಪಕಾರಿ; ಕರ್ನಾಟಕಕ್ಕೆ ಮಾರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗೆ ಟ್ವೀಟ್ ಮಾಡಿರುವ ಆರ್. ಅಶೋಕ್, ಕೇರಳಕ್ಕೆ ಉಪಕಾರಿ; ಕರ್ನಾಟಕಕ್ಕೆ ಮಾರಿ. ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡು, ಭಂಡತನದಿಂದ ಖುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಿಎಂ ಸಿದ್ದರಾಮಯ್ಯ ನವರ ಸರ್ಕಾರ, ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಆರ್. ಅಶೋಕ್ ಟ್ವೀಟ್
ಕೇರಳಕ್ಕೆ ಉಪಕಾರಿ; ಕರ್ನಾಟಕಕ್ಕೆ ಮಾರಿ
ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡು, ಭಂಡತನದಿಂದ ಖುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಿಎಂ @siddaramaiah ನವರ ಸರ್ಕಾರ, ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ.
ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತತರಿಗೆ ಪರಿಹಾರ… pic.twitter.com/6ac53suDKf
— R. Ashoka (@RAshokaBJP) December 11, 2024
ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತತರಿಗೆ ಪರಿಹಾರ ಕೊಡಲು ಹಣವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿಯಿಂದ ಸಾವನ್ನಪ್ಪಿರುವ ಬಾಣಂತಿ ಮಹಿಳೆಯರ ಕುಟುಂಬಗಳಿಗೆ ಪರಿಹಾರ ಕೊಟ್ಟಿಲ್ಲ. ಬೆಂಗಳೂರಿನ ಉದ್ದಗಲಕ್ಕೂ ಬಾಯ್ತೆರೆದಿರುವ ರಸ್ತೆಗುಂಡಿ ಮುಚ್ಚಲು ಹಣವಿಲ್ಲ. ಆದರೆ ಹೈಕಮಾಂಡ್ ನಾಯಕರನ್ನು ಓಲೈಸಲು ಕೇರಳದಲ್ಲಿ ಮನೆ ನಿರ್ಮಿಸಿಕೊಡಲು ಹೊರಟಿದೆ ಈ ಕಾಂಗ್ರೆಸ್ ಸರ್ಕಾರ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಬರೆದ ಪತ್ರದಲ್ಲೇನಿದೆ?
ಭೂಕುಸಿತದ ಘಟನೆಯ ನಂತರ ನಾನು ವಯನಾಡಿಗೆ ಭೇಟಿ ನೀಡಿದಾಗ, ಸಂತ್ರಸ್ತ ಕುಟುಂಬಗಳಿಗೆ 100 ಮನೆಗಳನ್ನು ಕಟ್ಟಿಸಿಕೊಡುವುದಾಗಿ ನಮ್ಮ ಸರ್ಕಾರದ ಬದ್ಧತೆಯನ್ನು ನಾನು ಘೋಷಿಸಿದ್ದೇನೆ ಎಂದು ದಯವಿಟ್ಟು ನೆನಪಿಸಿಕೊಳ್ಳಿ. ಈ ಉಪಕ್ರಮವು ತಮ್ಮ ಮನೆಗಳು, ಜೀವನೋಪಾಯಗಳು ಮತ್ತು ಆತ್ಮೀಯರನ್ನು ಕಳೆದುಕೊಂಡವರಿಗೆ ಸುರಕ್ಷಿತ ಹಾಗೂ ಸ್ಥಿರವಾದ ವಾತಾವರಣವನ್ನು ಒದಗಿಸುವ ಉದ್ದೇಶವಾಗಿದೆ.
ಇದನ್ನೂ ಓದಿ: ಕೇರಳ ನೆರೆ ಸಂತ್ರಸ್ತರಿಗೆ ಮನೆ: ಸಿಎಂ ಸಿದ್ದರಾಮಯ್ಯ ವಯನಾಡು ಕಳಕಳಿ ಗುಲಾಮಗಿರಿಯ ಸಂಕೇತವೆಂದ ಸಿಟಿ ರವಿ
ಈ ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯವಾದ ಮಾರ್ಗಸೂಚಿಗಳು ಅಥವಾ ನಿರ್ದೇಶನಗಳ ಬಗ್ಗೆ ಕೇರಳ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಉಪಕ್ರಮವನ್ನು ಸುಲಭಗೊಳಿಸಲು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಒದಗಿಸುವಲ್ಲಿ ತ್ವರಿತ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು, ಮನೆಗಳನ್ನು ನಿರ್ಮಿಸಲು ಅಗತ್ಯವಿರುವ ಭೂಮಿಯನ್ನು ಖರೀದಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಲು ಬಯಸುವುದಾಗಿ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.