ರೇಬಿಸ್: ಕರ್ನಾಟಕದಲ್ಲಿ ಎರಡೇ ತಿಂಗಳಲ್ಲಿ 8 ಸಾವು, ಬೆಂಗಳೂರಿನಲ್ಲೇ ಹೆಚ್ಚು
ಕರ್ನಾಟಕದಲ್ಲಿ ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಕಳೆದ ಎರಡು ತಿಂಗಳಲ್ಲಿ 8 ಜನರು ರೇಬೀಸ್‌ನಿಂದ ಮೃತಪಟ್ಟಿದ್ದಾರೆ, ಅದರಲ್ಲಿ 3 ಪ್ರಕರಣಗಳು ಬೆಂಗಳೂರಿನಲ್ಲಿ ಸಂಭವಿಸಿವೆ. 2025ರ ಫೆಬ್ರವರಿ ಅಂತ್ಯದ ವೇಳೆಗೆ 66,489 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರು, ಮಾರ್ಚ್ 3: ಕರ್ನಾಟಕದಲ್ಲಿ ನಾಯಿ ಕಡಿತ (ಹುಚ್ಚು ನಾಯಿ ಕಡಿತ ಸೇರಿದಂತೆ) ಹಾಗೂ ರೇಬಿಸ್ ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದ್ದು, ಕಳೆದ ಎರಡು ತಿಂಗಳುಗಳಲ್ಲಿ ರೇಬಿಸ್ ಸೋಂಕಿನಿಂದ ಎಂಟು ಮಂದಿ ಮೃತಪಟ್ಟಿದ್ದಾರೆ. ರೇಬಿಸ್ ಸೋಂಕಿನಿಂದ ಮೃತಪಟ್ಟ ನಾಲ್ಕು ಪ್ರಕರಣಗಳ ಪೈಕಿ ಮೂರು ಬೆಂಗಳೂರಿನಲ್ಲಿ ಸಂಭವಿಸಿದೆ.
ಹರಿಯಾಣ, ಚಿತ್ರದುರ್ಗ ಹಾಗೂ ತುಮಕೂರು ಮೂಲದ ವ್ಯಕ್ತಿಗಳು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದ ಸಮೀಪದ ಆಸ್ಪತ್ರೆಯೊಂದರಲ್ಲಿ (ಶಂಕಿತ ಲೇಬಿಸ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ನಿಗದಿಪಡಿಸಿರುವ ಆಸ್ಪತ್ರೆ) ಈ ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನೊಂದು ಸಾವು ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಆಸ್ಪತ್ರೆಯಲ್ಲಿ ಸಂಭವಿಸಿದೆ. ಅಲ್ಲಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ. 2025ರ ಫೆಬ್ರವರಿ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಒಟ್ಟು 66489 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ವಿಜಯಪುರದಲ್ಲಿ 4,552 ಮತ್ತು ಬೆಂಗಳೂರಿನಲ್ಲಿ 4072, ಹಾಸನದಲ್ಲಿ 3688 ಪ್ರಕರಣಗಳು ವರದಿಯಾಗಿವೆ.
ನಾಯಿ ಕಡಿತ, ಸಾವು ಕಳೆದ ವರ್ಷಕ್ಕಿಂತ ಹೆಚ್ಚು
ನಾಯಿ ಕಡಿತ ಮತ್ತು ರೇಬಿಸ್ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 47ರಷ್ಟು ಹೆಚ್ಚಾದಂತಾಗಿದೆ. 2024ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಕರ್ನಾಟಕದಲ್ಲಿ 3,61,522 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದರೆ, 42 ಮಂದಿ ಮೃತಪಟ್ಟಿದ್ದರು.
ರೇಬಿಸ್ ತಡೆಗೆ ವೈದ್ಯರು ನೀಡಿದ ಸಲಹೆಯೇನು?
ಪ್ರತಿಯೊಂದು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ನಾಯಿ ಕಡಿತ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುತ್ತವೆ. ಎಲ್ಲಾ ನಾಯಿ ಕಡಿತ ಪ್ರಕರಣಗಳು ರೇಬೀಸ್ ಪ್ರಕರಣಗಳಾಗಿರುವುದಿಲ್ಲ. ಆದರೂ, ನಾಯಿ ಕಚ್ಚಿದ ಸಂದರ್ಭದಲ್ಲಿ ಗಾಯವನ್ನು ನೀರು ಮತ್ತು ಸಾಬೂನಿನಿಂದ ತೊಳೆದು ಶುಚಿಗೊಳಿಸವುದು ಮುಖ್ಯವಾಗಿದೆ. ಇದು ಸೋಂಕಿನ ಹರಡುವಿಕೆ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂ ಯೋಜನಾ ನಿರ್ದೇಶಕ ಡಾ. ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಕ್ಕಿ ಜ್ವರ: ಕರ್ನಾಟಕದಾದ್ಯಂತ ಹೈ ಅಲರ್ಟ್, ಗಡಿ ಭಾಗದಲ್ಲಿ ಕೋಳಿ ಉತ್ಪನ್ನ ಸಾಗಾಣಿಕೆಗೆ ನಿಷೇಧ
ಪ್ರಾಣಿಗಳ ವ್ಯಾಕ್ಸಿನೇಷನ್ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಇನ್ನಷ್ಟು ಮಾಡಬೇಕಾಗಿದೆ ಎಂದು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ರೇಬೀಸ್ ಹರಡುವಿಕೆಯು ಬೀದಿ ನಾಯಿಗಳಿಗೆ ಸೀಮಿತವಾಗಿಲ್ಲ ಮತ್ತು ಅರಣ್ಯ ಪ್ರದೇಶಗಳಲ್ಲಿನ ಕೋತಿಗಳು, ಬಾವಲಿಗಳು ಮತ್ತು ಇತರ ಪ್ರಾಣಿಗಳ ಸಂಪರ್ಕದಿಂದಲೂ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.