
ರಾಯಚೂರು, ಸೆಪ್ಟೆಂಬರ್ 20: ನಗರದಲ್ಲಿ ರಾತ್ರಿ ವೇಳೆ ಅತಿಯಾದ ಡಿಜೆ (DJ) ಸೌಂಡ್‌ನಿಂದ 3 ವರ್ಷದ ಮಗಳು ಅಸ್ವಸ್ಥಗೊಂಡಿದ್ದಾಳೆ ಎಂದು ಆರೋಪಿಸಿ ತಂದೆ ಜಿಲ್ಲಾಧಿಕಾರಿ ನಿವಾಸದ ಎದುರು ಪ್ರತಿಭಟನೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಬೆನ್ನಲ್ಲೇ, ರಾಯಚೂರಿನಲ್ಲಿ ಹೊಸ ವಿವಾದ ಸಿಡಿದಿದೆ. ಘಟನೆಯ ತರುವಾಯ ರಾಯಚೂರು ಜಿಲ್ಲಾಧಿಕಾರಿ ಎನ್.ಎಂ. ಪೂವಿತಾ ಅವರು ಸ್ಥಳೀಯ ಪೊಲೀಸರ ವೈಫಲ್ಯವನ್ನು ಉಲ್ಲೇಖಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಪತ್ರ ಬರೆದಿದ್ದು, ಇದಕ್ಕೆ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸೆಪ್ಟೆಂಬರ್ 18ರ ತಡರಾತ್ರಿ ರಾಯಚೂರಿನ ಗೋಲ್ ಮಾರ್ಕೆಟ್ ಬಡಾವಣೆಯ ನಿವಾಸಿ ಹಾಗೂ ಬಿಎಸ್ಪಿ ಜಿಲ್ಲಾಧ್ಯಕ್ಷ ಜೈಭೀಮ್ ವಲ್ಲಭ ಎಂಬುವವರು ತಮ್ಮ 3 ವರ್ಷದ ಪುತ್ರಿಯನ್ನು ಎತ್ತಿಕೊಂಡು ಜಿಲ್ಲಾಧಿಕಾರಿಗಳ ನಿವಾಸದ ಮುಂದೆ ಏಕಾಏಕಿ ಧರಣಿ ಕುಳಿತಿದ್ದರು. ಅತಿಯಾದ ಡಿಜೆ ಶಬ್ದದಿಂದಾಗಿ ಮಗಳು ಅಸ್ವಸ್ಥಳಾಗಿದ್ದಾಳೆ. ನಿಯಮ ಮೀರಿ ಡಿಜೆ ಬಳಸುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ವಲ್ಲಭ ಧರಣಿ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಮತ್ತು ವಲ್ಲಭ ನಡುವೆ ತೀವ್ರ ವಾಗ್ವಾದ ನಡೆದಿತ್ತು. ನಮ್ಮ ಮಕ್ಕಳ ಆರೋಗ್ಯಕ್ಕಿಂತ ಜಿಲ್ಲಾಧಿಕಾರಿಗಳಿಗೆ ನಿದ್ರೆಯೇ ಮುಖ್ಯವೇ? ಎಂದು ವಲ್ಲಭ ಪ್ರಶ್ನಿಸಿದ್ದು, ಈ ವಿಡಿಯೋ ವೈರಲ್ ಆಗಿತ್ತು.
ವಿಡಿಯೋ ವೈರಲ್ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಜಿಲ್ಲಾಧಿಕಾರಿ ಪೂವಿತಾ, ಸ್ಥಳೀಯ ಪೊಲೀಸರ ವೈಫಲ್ಯವೇ ಇದಕ್ಕೆ ಕಾರಣ ಎಂದು ಉಲ್ಲೇಖಿಸಿ ರಾಯಚೂರು ಎಸ್‌ಪಿಗೆ ಪತ್ರ ಬರೆದಿದ್ದಾರೆ. ಜಿಲ್ಲೆಯಲ್ಲಿ ತಕ್ಷಣವೇ ನಿಯಮಬಾಹಿರ ಡಿಜೆ ಬಳಕೆಯನ್ನು ಬಂದ್ ಮಾಡಿಸಿ ಸೂಕ್ತ ಕ್ರಮ ಜರುಗಿಸಬೇಕು. ಇನ್ಮುಂದೆ ಡಿಜೆ ಸೌಂಡ್‌ನಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ, ಸಂಬಂಧಪಟ್ಟ ಠಾಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಈ ಪತ್ರಕ್ಕೆ ಪೊಲೀಸ್ ಸಿಬ್ಬಂದಿ ವಲಯದಲ್ಲಿ ತೀವ್ರ ಬೇಸರ ವ್ಯಕ್ತವಾಗಿದೆ. ಆರಂಭದಲ್ಲೇ ಸೂಕ್ತ ನಿರ್ದೇಶನ ಹಾಗೂ ಮಾರ್ಗಸೂಚಿಗಳನ್ನು ನೀಡಿದ್ದರೆ ಈ ರೀತಿಯ ಪರಿಸ್ಥಿತಿ ಬಂದೊದಗುತ್ತಿರಲಿಲ್ಲ. ಈಗ ಏಕಾಏಕಿ ಪೊಲೀಸರನ್ನೇ ಹೊಣೆಗಾರರನ್ನಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಇನ್ನೊಂದೆಡೆ, ಜಿಲ್ಲಾಧಿಕಾರಿಗಳ ಈ ನಡೆಯ ವಿರುದ್ಧ ಶಿವಸೇನೆ ಉಗ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಿವಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ, ಜಿಲ್ಲಾಡಳಿತದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ವರ್ಷದ 365 ದಿನಗಳೂ ಶಬ್ದ ಮಾಲಿನ್ಯ ಮತ್ತು ಡೆಸಿಬಲ್ ನಿಯಮಗಳು ಉಲ್ಲಂಘನೆಯಾಗುತ್ತಲೇ ಇರುತ್ತವೆ. ಆಗ ಜಿಲ್ಲಾಧಿಕಾರಿಗಳಿಗೆ ಕಿವಿ ಕೇಳಿಸುವುದಿಲ್ಲವೇ? ವರ್ಷಪೂರ್ತಿ ಯಾವುದೇ ಕ್ರಮ ಕೈಗೊಳ್ಳದೆ, ಗಣೇಶ ಹಬ್ಬ ಬಂದಾಗ ಮಾತ್ರ ಬೇಕಂತಲೇ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಏಕೆ ಬಲಿಪಶು ಮಾಡುತ್ತಿದ್ದೀರಿ? ಪೋಲಿಸರನ್ನು ಟಾರ್ಗೆಟ್ ಮಾಡುವುದನ್ನು ನಾವು ಸಹಿಸುವುದಿಲ್ಲ. ಇಡೀ ಊರಿನಲ್ಲಿ ಎಲ್ಲೆಲ್ಲಿ ಡೆಸಿಬಲ್ ನಿಯಮ ಉಲ್ಲಂಘನೆಯಾಗುತ್ತಿದೆ ಎಂಬುದನ್ನು ತೋರಿಸಿ ಎಂದು ಗಂಗಾಧರ್ ಕುಲಕರ್ಣಿ ಸವಾಲು ಹಾಕಿದ್ದಾರೆ.
ಗಣೇಶೋತ್ಸವ ಎಂಬುದು ಯಾವುದೇ ಒಂದು ರಾಜಕೀಯ ಪಕ್ಷದ ಹಬ್ಬವಲ್ಲ, ಇದು ಇಡೀ ಸಮಾಜದ ಹಬ್ಬ. ಹಬ್ಬವನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳುವುದು ಅಕ್ಷಮ್ಯ. 365 ದಿನಗಳ ಕಾಲವೂ ಈ ನಿಯಮವನ್ನು ಯಥಾವತ್ತಾಗಿ ಜಾರಿಗೆ ತರುವುದಾದರೆ ನಾವು ಒಪ್ಪುತ್ತೇವೆ, ಬರೀ ಗಣೇಶನ ಹಬ್ಬಕ್ಕಷ್ಟೇ ಸೀಮಿತಗೊಳಿಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ