ಕಂಪ್ಯೂಟರ್ ಆಪರೇಟರ್ ಎಡವಟ್ಟು: ಬೇರೆಯವರ ಪಾಲಾದ ಪಿಂಚಣಿ ಹಣ, ವೃದ್ಧ ದಂಪತಿ ಕಂಗಾಲು
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ವೃದ್ಧ ದಂಪತಿ ಅವರ ಪಿಂಚಣಿ ಹಣ ಬೇರೆ ಖಾತೆಗೆ ಜಮೆಯಾಗಿದೆ. ಕಂಪ್ಯೂಟರ್ ಆಪರೇಟರ್‌ನ ತಪ್ಪಿನಿಂದಾಗಿ, ದಂಪತಿಗೆ ಬರಬೇಕಾದ 1200 ರೂ. ಪಿಂಚಣಿ ಮತ್ತೊಬ್ಬರ ಖಾತೆಗೆ ಜಮೆಯಾಗುತ್ತಿದೆ. ನಾಲ್ಕು ತಿಂಗಳಿಂದ ಪಿಂಚಣಿ ಇಲ್ಲದೆ ದಂಪತಿ ಕಷ್ಟಪಡುತ್ತಾಗಿದೆ.
ರಾಯಚೂರು, ನವೆಂಬರ್ 21: ಅವರಿಬ್ಬರು ಜೀವನದ ವೃದ್ಧಾಪ್ಯದಲ್ಲಿರುವ ದಂಪತಿ. ಆ ಬಡ ದಂಪತಿ ಸರ್ಕಾರದ ತಿಂಗಳ ಪಿಂಚಣಿ (Pension) ಹಣ ನಂಬಿಕೊಂಡೇ ಜೀವನ ಮಾಡಬೇಕು. ಆದರೆ ಅಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಆ ವೃದ್ಧೆಗೆ ಬರಬೇಕಿದ್ದ ಪಿಂಚಣಿ ಹಣ ಬೇರೊಬ್ಬ ಮಹಿಳೆಗೆ ಜಮೆ ಆಗ್ತಿದ್ದು, ಆ ವೃದ್ಧೆ ಅಕ್ಷರಶಃ ಕಣ್ಣೀರಿಡ್ತಿದ್ದಾರೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ಘಟನೆ ನಡೆದಿದೆ.
ಏಕಾಏಕಿ ಪಿಂಚಣಿ ಹಣ ಕಟ್: ದಂಪತಿ ಕಣ್ಣೀರು
ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ನಿವಾಸಿಗಳಾದ ಪತಿ ಕರಿಯಪ್ಪ, ಪತ್ನಿ ಬಸಮ್ಮ. ಈ ದಂಪತಿಗೆ ಸುಮಾರು 80 ವರ್ಷ. ಮನೆಯಲ್ಲಿ ಕಡು ಬಡತನ. ವಯಸ್ಕರರಾಗಿದ್ದರೆ ಅದ್ಹೇಗೋ ದುಡಿದು ಜೀವನ ನಡೆಸುತ್ತಿದ್ದರು. ಆದರೆ ಇಳಿ ವಯಸ್ಸು. ಈ ಮಧ್ಯೆ ಹಿರಿಯ ವಯಸ್ಕರರಾಗಿರುವ ಹಿನ್ನೆಲೆ ಸರ್ಕಾರದ ಸಂಧ್ಯಾ ಸುರಕ್ಷಾ ಪಿಂಚಣಿಯಡಿ ಪ್ರತಿ ತಿಂಗಳು 1200 ರೂ. ಬರ್ತಿತ್ತು. ಹೀಗಾಗಿ ಅದೇ ಪಿಂಚಣಿ ಹಣದಲ್ಲಿ ಮನೆ ವಸ್ತುಗಳ ಖರೀದಿ, ರೇಷನ್, ಔಷಧಿ ಸೇರಿ ಇನ್ನಿತರ ಖರ್ಚಿಗೆ ಆ ಪಿಂಚಣಿ ಹಣವೇ ಸರಿ ಹೋಗ್ತಿತ್ತು. ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ಏಕಾಏಕಿ ಹಣ ಕಟ್ ಆಗಿದೆ. ಹಣವೇ ಬರ್ತಿಲ್ಲ. ಹೀಗಾಗಿ ವೃದ್ಧೆ ಬಸಮ್ಮ ಹಾಗೂ ಅವರ ಪತಿ ಕರಿಯಪ್ಪ ಕಣ್ಣೀರಿಡ್ತಿದ್ದಾರೆ.
ಇದನ್ನೂ ಓದಿ: ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಹೌದು. ಬಸಮ್ಮ ಅವರಿಗೆ ವರ್ಷಗಳಿಂದ ತಿಂಗಳಿಗೆ 1200 ರೂ. ಪಿಂಚಣಿ ಹಣ ಬರ್ತಿತ್ತು. ಅದರಲ್ಲೇ ಜೀವನ ನಡೆಸ್ತಿದ್ದ ಈ ಬಡ ಕುಟುಂಬಕ್ಕೀಗ ಏಕಾಏಕಿ ಪಿಂಚಣಿ ಹಣ ಬಂದ್ ಆಗಿದೆ. ತಿಂಗಳು ತಿಂಗಳು ಬರ್ತಿದ್ದ ಹಣ ಕಳೆದ ನಾಲ್ಕು ತಿಂಗಳಿನಿಂದ ಬಾರದಿರವುದರಿಂದ ಬಸಮ್ಮ ದಂಪತಿ ಕಂಗಾಲಾಗಿದ್ದಾರೆ. ತಿಂಗಳ ಪಿಂಚಣಿ ಬಾರದ ಹಿನ್ನೆಲೆ ಕಚೇರಿಗಳಿಂದ ಕಚೇರಿಗೆ ಹೋಗಿ ಕೇಳಿದ್ದಾರೆ.
ಕಂಪ್ಯೂಟರ್ ಆಪರೇಟರ್ ಎಡವಟ್ಟು
ಆಗ ಕಂಪ್ಯೂಟರ್ ಆಪರೇಟರ್ ಎಡವಟ್ಟು ಮಾಡಿರೋದು ಬೆಳಕಿಗೆ ಬಂದಿದೆ. ಬಸಮ್ಮಳ ಆಧಾರ್ ಕಾರ್ಡ್ ದಾಖಲೆ, ಹೆಸರಿನ ಪಿಂಚಣಿ ಖಾತೆಗೆ ಅದೇ ಕವಿತಾಳ ಗ್ರಾಮದ ಬಸಮ್ಮ ಎಂಬ ಮತ್ತೊಬ್ಬ ಮಹಿಳೆಯ ಅಕೌಂಟ್ ಖಾತೆ ಲಿಂಕ್ ಮಾಡಲಾಗಿದೆ. ಕಂಪ್ಯೂಟರ್ ಆಪರೇಟರ್ ಒಬ್ಬರು ಮಾಡಿದ ಎಡವಟ್ಟಿಗೆ ವೃದ್ಧ ಬಸಮ್ಮಗೆ ಬರಬೇಕಿದ್ದ ಪಿಂಚಣಿ ಹಣ ಇಬ್ನೊಬ್ಬ ಬಸಮ್ಮಳ ಖಾತೆಗೆ ಜಮೆ ಆಗ್ತಿದೆ. ಹೀಗಾಗಿ ಈ ವೃದ್ಧ ಬಸಮ್ಮ ಹಾಗೂ ಪತಿ ಕರಿಯಪ್ಪ ಈಗ ಅಕ್ಷರಶಃ ಕಂಗಾಲಾಗಿದ್ದಾರೆ. ಸದ್ಯ ನ್ಯಾಯಕ್ಕಾಗಿ ಈ ದಂಪತಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈಗಾಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ವೃದ್ಧ ಬಸಮ್ಮಗೆ ಅಧಿಕಾರಿಗಳು ನ್ಯಾಯ ಕೊಡಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.