ರಾಯಚೂರು: ನೆಹರು ವಿಮಾನ ತುರ್ತು ಭೂಸ್ಪರ್ಶವಾಗಿದ್ದ ಸ್ಥಳದಲ್ಲೇ ಹೊಸ ಏರ್‌ಪೋರ್ಟ್; ಭರದಿಂದ ಸಾಗಿದ ಕಾಮಗಾರಿ
ಗಡಿ ಜಿಲ್ಲೆ ರಾಯಚೂರು ಭಾಗದ ಜನರ ಕನಸು ಸದ್ಯದಲ್ಲೇ ನನಸಾಗುವ ಲಕ್ಷಣಗಳು ಕಾಣಿಸುತ್ತಿವೆ. ನಗರದ ಯರಮರಸ್ ಮೀಸಲು ಪ್ರದೇಶದಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣದ ಕಾರ್ಯ ಭರದಿಂದ ಸಾಗಿದೆ. 343 ಎಕರೆ ಪ್ರದೇಶದಲ್ಲಿ 218 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆದಿದೆ.

ರಾಯಚೂರು, ಡಿಸೆಂಬರ್ 15: 1951ರಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು (Jawaharlal Nehru) ಅವರು ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷ ಹಿನ್ನಲೆ ತುರ್ತು ಭೂಸ್ಪರ್ಶವಾಗಿದ್ದ ಜಾಗದಲ್ಲೇ ಇದೀಗ ವಿಮಾನ ನಿಲ್ದಾಣದ (airport) ಕಾರ್ಯ ಭರದಿಂದ ಸಾಗಿದೆ. ಜನಪ್ರತಿನಿಧಿಗಳು ಕೊಂಚ ಆಸಕ್ತಿ ತೋರಿಸಿದ್ದರೇ, ಯಾವಾಗಲೋ ವಿಮಾನ ನಿಲ್ದಾಣ ತಲೆ ಎತ್ತುತ್ತಿತ್ತು. ಆದರೆ ಇದೀಗ ತಡವಾದರೂ ಹತ್ತಾರು ತೊಡಕುಗಳನ್ನ ಪರಿಹರಿಸಿಕೊಂಡು ವಿಮಾನ ನಿಲ್ದಾಣ ಸಿದ್ಧವಾಗುತ್ತಿದೆ.
343 ಎಕರೆ ಪ್ರದೇಶ: 218 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
ಗಡಿ ಜಿಲ್ಲೆ ರಾಯಚೂರಿನಲ್ಲಿ ವಿಮಾನ ನಿಲ್ದಾಣ ಆಗಬೇಕು ಎನ್ನುವುದು ಹಿಂದಿನಿಂದಲೂ ಈ ಭಾಗದ ಜನರ ಕನಸು. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದೇ ಇದ್ದಿದ್ದರಿಂದ ಈವರೆಗೆ ರಾಯಚೂರಿನಲ್ಲಿ ಏರ್‌ಪೋರ್ಟ್ ಆಗಿರಲಿಲ್ಲ. ಸರ್ಕಾರಗಳು ಬಂದು ಹೋದರೂ ರಾಯಚೂರಿನಲ್ಲಿ ಏರ್‌ಪೋರ್ಟ್ ನಿರ್ಮಾಣ ಕಾರ್ಯ ಕನಸಾಗಿಯೇ ಉಳಿದಿತ್ತು. ಆದರೆ ಇದೀಗ ಇದೇ ಏರ್‌ಪೋರ್ಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಾಯಚೂರು ಹೊರಭಾಗದಲ್ಲಿರುವ ಯರಮರಸ್ ಬಳಿ ಸುಮಾರು 343 ಎಕರೆ ಪ್ರದೇಶದಲ್ಲಿ 218 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.
ಇದನ್ನೂ ಓದಿ: ರಾಯಚೂರು ವಿದ್ಯುತ್ ಉತ್ಪಾದನಾ ಘಟಕದ ಕಲ್ಲಿದ್ದಲು ಖಾಸಗಿ ಫ್ಯಾಕ್ಟರಿಗಳಿಗೆ ಸಪ್ಲೈ: ಕೋಟ್ಯಂತರ ರೂ ಲೂಟಿ?
ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೆ ಪೂರ್ಣ ಪ್ರಮಾಣದ ಅನುದಾನ, ಸ್ಥಳ, ಎರಡು ಹಳ್ಳಿಗಳ ಮನೆಗಳನ್ನ ಸ್ವಾಧೀನ ಪ್ರಕ್ರಿಯೆ, ತಾಂತ್ರಿಕ ಸಮಸ್ಯೆ ಸೇರಿ ಅನೇಕ ಅಡೆತಡೆಗಳು, ವಿವಾದಗಳು ಎದುರಾಗಿದ್ದವು. ಅದರಲ್ಲೂ ಪ್ರಮುಖವಾಗಿ ಏರ್‌ಪೋರ್ಟ್ ಮೀಸಲು ಸ್ಥಳದಲ್ಲಿದ್ದ ಏಗನೂರು ಗ್ರಾಮದ 42 ಮನೆಗಳು ಹಾಗೂ ದಂಡು ಗ್ರಾಮದ 108 ಮನೆಗಳ ಭೂಸ್ವಾಧೀನ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಆ ವಿವಾದ ಕೂಡ ಮುಗಿದಿದ್ದು, ಕೊನೆ ಹಂತದ ಪರಿಹಾರ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದು 218 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಿದೆ.
ಈ ಕಾಮಗಾರಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮುನ್ನಲೆಗೆ ಬಂದಿತ್ತು. ಈಗ ರಾಯಚೂರಿನ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಹಾಗೂ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಕೂಡ ತ್ವರಿತಗತಿಯ ಕಾಮಗಾರಿಗಾಗಿ ಶ್ರಮಿಸುತ್ತಿದ್ದಾರೆ.
ಮಾಜಿ ಪ್ರಧಾನಿ ನೆಹರು ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿದ್ದು ಇಲ್ಲೇ
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ವಿಮಾನಗಳ ತಂಗುದಾಣಕ್ಕಾಗಿ ನಗರದ ಹೊರವಲಯದ ಯರಮರಸ್ ಬಳಿ ರಕ್ಷಣಾ ಇಲಾಖೆ ಸುಮಾರು 400 ಎಕರೆ ಜಮೀನು ಗುರುತಿಸಿ ಮೀಸಲಿಡಲಾಗಿತ್ತು. 1951ರಲ್ಲಿ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಕೇರಳದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಮಂಗಳೂರು ವಿಮಾನ ನಿಲ್ದಾಣದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ತೆರಳುತ್ತಿದ್ದರು.
ಈ ವೇಳೆ ರಾಯಚೂರು ಬಳಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆ ತಕ್ಷಣವೇ ರಕ್ಷಣಾ ಇಲಾಖೆ ಹಾಗೂ ವಿಮಾನಯಾನ ಇಲಾಖೆ ಅಧಿಕಾರಿಗಳ ಸಲಹೆ ಮೆರೆಗೆ ಇದೀಗ ನಿರ್ಮಾಣವಾಗುತ್ತಿರುವ ಯರಮರಸ್ ಮೀಸಲು ಪ್ರದೇಶದಲ್ಲೇ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಈಗ ಅದೇ ಜಾಗದಲ್ಲೇ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈ ನಿಯಮ ಪಾಲಿಸಲೇಬೇಕು, ಉಲ್ಲಂಘಿಸಿದ್ರೆ ದಂಡ ಖಂಡಿತ
ರಾಯಚೂರಿನ ಯರಮರಸ್ ಬಳಿ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕ ಇದೆ. ಇಲ್ಲಿ ಆಕಾಶದೆತ್ತರದಷ್ಟು ಚಿಮಣಿಗಳಿವೆ. ಇದರಿಂದ ವಿಮಾನ ಹಾರಾಟಕ್ಕೆ ತಾಂತ್ರಿಕ ತೊಂದರೆಯಾಗುವ ಸೂಚನೆಯೂ ಇತ್ತು. ಅದು ಕೂಡ ವಿಮಾನ ನಿಲ್ದಾಣ ಆರಂಭಕ್ಕೆ ವಿಘ್ನವಾಗಿತ್ತು. ಆದರೆ ಈ ಬಗ್ಗೆ ಏರ್‌ಪೋರ್ಟ್ ಆಥಾರಿಟಿ ಆಫ್ ಇಂಡಿಯಾದಿಂದ ಈಗ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.
ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಹೇಳಿದ್ದಿಷ್ಟು
1.7 ಕಿಮಿ ರನ್ ವೇ ಸಿದ್ಧವಾಗುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಅಲ್ಲದೇ ಏರ್ಪೋರ್ಟ್ಗೆ ಮುಖ್ಯವಾಗಿ ರನ್ ವೇ ಹಾಗೂ ಟವರ್ ಬೇಕು. ಹೀಗಾಗಿ ಈ ಎರಡು ಕಾಮಗಾರಿಗಳನ್ನ ತಜ್ಞರ ಸಲಹೆ ಮೇರೆಗೆ ತಾಂತ್ರಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ವಿಮಾನ ನಿಲ್ದಾಣಕ್ಕಿದ್ದ ತಾಂತ್ರಿಕ ಗೊಂದಲಗಳು ಕೂಡ ನಿವಾರಣೆಯಾಗಿದೆ. ಸದ್ಯ ರನ್ ವೇ ಕಾಮಗಾರಿ ಕಾರ್ಯ ಭರದಿಂದ ಸಾಗಿದ್ದು, ತಾಂತ್ರಿಕವಾಗಿ ಎಲ್ಲಾ ಆಯಾಮದಲ್ಲೂ ಅಧ್ಯಯನ ನಡೆಯುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಹೇಳಿದ್ದಾರೆ.
ಒಟ್ಟಿನಲ್ಲಿ ಸದ್ಯ ರಾಯಚೂರು ಏರ್‌ಪೋರ್ಟ್ ಕಾರ್ಯ ಭರದಿಂದ ಸಾಗಿದ್ದು, ಅಂದುಕೊಂಡಂತೆ ಆದರೆ 2027ರ ವೇಳೆಗೆ ರಾಯಚೂರಿನಲ್ಲಿ ವಿಮಾನ ಹಾರಾಟ ಆರಂಭವಾಗುತ್ತವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



