ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಗುತ್ತಿಗೆ ಪಡೆಯಲು ನಕಲಿ ಪ್ರಮಾಣ ಪತ್ರ ನೀಡಿರುವುದು ಪತ್ತೆ

ರಾಯಚೂರು ಪಿಡಬ್ಲೂಡಿ ಇಲಾಖೆಯಲ್ಲಿ 3.48 ಕೋಟಿ ರೂ. ಕಾಮಗಾರಿಗೆ ಸಂಬಂಧಿಸಿ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಗುತ್ತಿಗೆದಾರರು ನಕಲಿ ವರ್ಕ್ ಡನ್ ಪ್ರಮಾಣಪತ್ರ ಸಲ್ಲಿಸಿದ್ದು, ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ ಮೊದಲು ದೃಢಪಡಿಸಿ, ನಂತರ ನಕಲಿ ಎಂದು ಉಲ್ಟಾ ಹೊಡೆದಿದೆ. ಪಿಡಬ್ಲೂಡಿ ಟೆಂಡರ್ ಸ್ಥಗಿತಗೊಳಿಸಿ ಗುತ್ತಿಗೆದಾರನನ್ನು ಬ್ಲಾಕ್‌ಲಿಸ್ಟ್​ಗೆ ಸೇರಿಸಲು ಮುಂದಾಗಿದೆ.

ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಗುತ್ತಿಗೆ ಪಡೆಯಲು ನಕಲಿ ಪ್ರಮಾಣ ಪತ್ರ ನೀಡಿರುವುದು ಪತ್ತೆ
PWD ಇಲಾಖೆಯಲ್ಲಿ ಭ್ರಷ್ಟಾಚಾರ
Image Credit source: tv9 kannada
Edited By:

Updated on: Jul 02, 2026 | 9:48 PM

ಮುಖ್ಯಾಂಶಗಳು

  • ಪಿಡಬ್ಲೂಡಿ ಇಲಾಖೆ ಭ್ರಷ್ಟಾಚಾರ ಕೇಸ್​ಗೆ ಟ್ವಿಸ್ಟ್
  • ಉಲ್ಟಾ ಹೊಡೆದ ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ
  • ಗುತ್ತಿಗೆದಾರ ನಕಲಿ ಪ್ರಮಾಣ ಪತ್ರ ನೀಡಿರುವುದು ಪತ್ತೆ

ರಾಯಚೂರು, ಜುಲೈ 02: ರಾಯಚೂರಿನ (raichur) ಪಿಡಬ್ಲೂಡಿ ಇಲಾಖೆಯಲ್ಲಿ (PWD Department) ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ಈ ಭ್ರಷ್ಟಾಚಾರದ ವಿರುದ್ಧ ಕೆಲ ಹೋರಾಟಗಾರರು ಹೋರಾಟ ಮಾಡಿದ್ದರು. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಇದೀಗ ಗುತ್ತಿಗೆದಾರ ನಕಲಿ ಪ್ರಮಾಣ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಮೊದಲು ತಾವೇ ಇದನ್ನ ಅಧಿಕೃತಗೊಳಿಸಿದ್ದ ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಉಲ್ಟಾ ಹೊಡೆದಿದೆ.

3 ಕೋಟಿ 48 ಲಕ್ಷ ರೂ ಟೆಂಡರ್ ಇದೀಗ ಭಾರೀ ವಿವಾದ

ರಾಯಚೂರು ಜಿಲ್ಲೆಯ ಲಿಂಗಸಗೂರು–ಮುದಗಲ್ ಕ್ರಾಸ್ ನಡುವಿನ ರಾಷ್ಟ್ರೀಯ ಹೆದ್ದಾರಿ-150(ಎ) ಕಾಮಗಾರಿಗೆ ಸಂಬಂಧಿಸಿದ 3 ಕೋಟಿ 48 ಲಕ್ಷ ರೂ ಟೆಂಡರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಗುತ್ತಿಗೆದಾರ ಭೀಮಾಶಂಕರ್ ಟೆಂಡರ್ ಪಡೆಯಲು ನಕಲಿ ವರ್ಕ್ ಡನ್ ಪ್ರಮಾಣ ಪತ್ರ ಸಲ್ಲಿಸಿರುವುದನ್ನ ಖುದ್ದು ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ ಖಚಿತಪಡಿಸಿದೆ. ಇದರ ದಾಖಲೆಗಳು ಟಿವಿ9ಗೆ ಲಭ್ಯವಾಗಿವೆ.

ಇದನ್ನೂ ಓದಿ: ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಕೋಟ್ಯಂತರ ರೂ ಲೂಟಿ

ಈ ಪ್ರಕರಣದ ಆರಂಭದಲ್ಲಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ ಪ್ರಮಾಣ ಪತ್ರವನ್ನು ತಾವೇ ನೀಡಿದ್ದೇವೆ ಎಂದು ರಾಯಚೂರು ಪಿಡಬ್ಲೂಡಿಗೆ ಪತ್ರ ನೀಡಲಾಗಿತ್ತು. ಆದರೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಇದೀಗ ಇಲಾಖೆ ಯೂ-ಟರ್ನ್ ಪಡೆದಿದ್ದು, ಅಂತಹ ಯಾವುದೇ ಪ್ರಮಾಣ ಪತ್ರವನ್ನು ನಾವು ನೀಡಿಲ್ಲ, ಅದು ನಕಲಿ ಎಂದು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಆ ಮೂಲಕ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಇತ್ತ ರಾಯಚೂರು ಪಿಡಬ್ಲೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್ ಗಲಗ, ಈ ಕಾಮಗಾರಿ ಮತ್ತು ಪ್ರಮಾಣ ಪತ್ರಕ್ಕೂ ನಮ್ಮ ಇಲಾಖೆಗೆ ಯಾವುದೇ ಸಂಬಂಧ ಇಲ್ಲ ಎಂದು ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ. ವಿಜಯಪುರ ವಿಭಾಗದ ದ್ವಂದ್ವ ನಿಲುವು ಹಾಗೂ ನಕಲಿ ದಾಖಲೆ ಆರೋಪದಿಂದ ಪಿಡಬ್ಲೂಡಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

ಯೂ-ಟರ್ನ್ ಹೊಡೆದ ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ

ಇನ್ನು ಈ ಪ್ರಕರಣದ ಇಂಚಿಂಚು ಮಾಹಿತಿಯೂ ಟಿವಿ9ಗೆ ದಾಖಲೆ ಸಮೇತ ಲಭ್ಯವಾಗಿದೆ. ಅಲ್ಲದೇ ಬರೀ ಪಿಡಬ್ಲೂಡಿ ಇಲಾಖೆಯಲ್ಲಿ ಮಾತ್ರವಲ್ಲ ಎಲ್ಲಾ ಇಲಾಖೆಯಲ್ಲಿ ಈ ರೀತಿ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ ಅನ್ನೋ ಸ್ಫೋಟಕ ಮಾಹಿತಿಯನ್ನ ಪಿಡಬ್ಲೂಡಿ ಇ.ಇ ಗಲಗ ಟಿವಿ9 ಎದುರು ಹೇಳಿದ್ದಾರೆ. ಗುತ್ತಿಗೆದಾರ ಭೀಮಾಶಂಕರ್ ಸಲ್ಲಿಸಿದ್ದ ವರ್ಕ್ ಡನ್ ಪ್ರಮಾಣ ಪತ್ರದ ಕುರಿತು ರಾಯಚೂರು ಪಿಡಬ್ಲೂಡಿ ಇಲಾಖೆ ಫೆಬ್ರವರಿ 12ರಂದು ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಅಧಿಕೃತವಾಗಿ ಪತ್ರ ಬರೆದು ಮಾಹಿತಿ ಕೋರಿತ್ತು.

ಹಲವು ಅನುಮಾನಗಳಿಗೆ ಎಡೆಮಾಡಿದ ವಿಜಯಪುರ ವಿಭಾಗ ಉತ್ತರ

ಫೆಬ್ರವರಿ 16ರಂದು ವಿಜಯಪುರ ವಿಭಾಗದಿಂದ ಅದೇ ವರ್ಕ್ ಡನ್ ಪ್ರಮಾಣ ಪತ್ರವನ್ನು ದೃಢೀಕರಿಸಿದ್ದಾಗಿ ಹೇಳಿತ್ತು. ಆದರೆ ಪ್ರಕರಣ ಮಾಧ್ಯಮಗಳಲ್ಲಿ ಬಹಿರಂಗವಾದ ಬಳಿಕ ಜೂನ್​​​ 29ರಂದು ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿದು, ನಾವು ಯಾವುದೇ ವರ್ಕ್ ಡನ್ ಪ್ರಮಾಣ ಪತ್ರ ನೀಡಿಲ್ಲ, ಸಲ್ಲಿಕೆಯಾಗಿರುವ ದಾಖಲೆ ನಕಲಿ ಎಂದು ಅಧಿಕೃತವಾಗಿ ತಿಳಿಸಿದೆ. ಒಂದೇ ಇಲಾಖೆಯಿಂದ ಬಂದಿರುವ ಎರಡೆರಡು ಉತ್ತರಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಶಾಲೆಗಳು! ಸರ್ಕಾರಿ ಶಾಲೆಗಳ ದುಸ್ಥಿತಿ ಕೇಳೋರಿಲ್ಲ

ಇದಷ್ಟೇ ಅಲ್ಲ, ಯಾವಾಗ ವಿಜಯಪುರ ವಿಭಾಗದಿಂದ ಗುತ್ತಿಗೆದಾರ ಭೀಮಾಶಂಕರ್ ಪ್ರಮಾಣ ಪತ್ರ ನೀಡಿಲ್ಲ ಅನ್ನೋ ಉತ್ತರ ಬಂತೋ ಆಗ ಅಲರ್ಟ್ ಆದ ರಾಯಚೂರು ಪಿಡಬ್ಲೂಡಿ, ಈ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿದೆ. ಅಲ್ಲದೇ, ಗುತ್ತಿಗೆದಾರನಿಗೆ ಈ ಬಗ್ಗೆ ಉತ್ತರ ನೀಡುವಂತೆ ಪತ್ರ ಬರೆದಿದೆ. ಅಲ್ಲದೇ ಗುತ್ತಿಗೆದಾರ ಭೀಮಾಶಂಕರ್​ರನ್ನ ಬ್ಲಾಕ್ ಲಿಸ್ಟ್​ಗೆ ಹಾಕುವ ಬಗ್ಗೆಯು ಪತ್ರ ಬರೆಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us