ರೈಲ್ವೆ ಇಲಾಖೆ ಪರೀಕ್ಷೆಗೆ ಮಂಗಳಸೂತ್ರ, ಜನಿವಾರ ನಿರ್ಬಂಧ, ವಿವಾದಕ್ಕೆ ತೆರೆ ಎಳೆದ ಸೋಮಣ್ಣ
ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮಂಗಳಸೂತ್ರ ಮತ್ತು ಜನಿವಾರ ತೆಗೆಯಬೇಕು ಎಂದು ಸೂಚಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರವಾಗಿ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ದೆಹಲಿಯಿಂದ ಸುದ್ದಿಗೊಷ್ಠಿ ನಡೆಸಿ, ವಿವಾದಕ್ಕೆ ತೆರೆ ಎಳೆದಿದ್ದಾರೆ.
ಬೆಂಗಳೂರು, ಏಪ್ರಿಲ್ 28: ಇತ್ತೀಚಗಷ್ಟೆ ಸಿಇಟಿ ಪರೀಕ್ಷೆ (CET Exam) ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ (Janivar) ತೆಗೆಸಿದ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಸರ್ಕಾರದ ವಿರುದ್ಧ ಹಿಂದೂ ಪರ ಸಂಘಟನೆಗಳು ಮತ್ತು ಬ್ರಾಹ್ಮಣ ಮಹಾಸಂಘಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ರೇಲ್ವೆ ಇಲಾಖೆಯ (Railway Department) ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳಸೂತ್ರವನ್ನು ತೆಗೆದು ಬರಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ (V Somanna) ಸ್ಪಷ್ಟನೆ ನೀಡಿದ್ದಾರೆ. ಈ ವಿಷಯದ ಬಗ್ಗೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಗೊಂದಲ ನಿವಾರಿಸಲಾಗಿದೆ ಎಂದಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಏಪ್ರಿಲ್ 28, 29 ಮತ್ತು 30 ರಂದು ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆ ನಡೆಯುತ್ತದೆ. ಅಭ್ಯರ್ಥಿಗಳು ಜನಿವಾರ, ಮಂಗಳಸೂತ್ರ ತೆಗೆದು ಪರೀಕ್ಷೆ ಬರೆಯಬೇಕೆಂಬ ವಿಷಯವನ್ನು ನಿಯಮದಲ್ಲಿ ಉಲ್ಲೇಖಿಸಲಾಗಿದೆಯೆಂಬ ದೂರುಗಳು ಬಂದಿವೆ. ಈ ಬಗ್ಗೆ ಸರಿಪಡಿಸುವಂತೆ ಸಂಸದರು, ಶಾಸಕರು ಮನವಿ ಮಾಡಿರುತ್ತಾರೆ. ಬ್ರಾಹ್ಮಣ ಮಹಾಸಭಾ, ವಿವಿಧ ಸಂಘಟನೆಗಳು ಸಹ ನನ್ನ ಗಮನ ಸೆಳೆದಿವೆ ಎಂದು ತಿಳಿಸಿದರು.
ಹೀಗಾಗಿ, ಈ ಬಗ್ಗೆ ಅಶ್ವಿನಿ ವೈಷ್ಣವ್, ಅಧಿಕಾರಿಗಳ ಜತೆ ಚರ್ಚಿಸಿ ಗೊಂದಲ ನಿವಾರಿಸಲಾಗಿದೆ. ಜನಿವಾರ, ಮಂಗಳಸೂತ್ರ ಧರಿಸಿ ಪರೀಕ್ಷೆ ಬರೆಯಲು ಬಂದರೆ ತೊಂದರೆ ನೀಡಬಾರದೆಂದು ಸೂಚನೆ ನೀಡಲಾಗಿದೆ. ಇತರೆ ನಿಯಮ ಪಾಲಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳು ಸಹ ನಿಯಮಾನುಸಾರ ಪರೀಕ್ಷೆ ಬರೆಯಲು ಮನವಿ ಮಾಡುತ್ತೇನೆ. ಅಭ್ಯರ್ಥಿಗಳು ಗೊಂದಲಕ್ಕೀಡಾಗಬಾರದೆಂದು ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಟ್ವಿಟರ್ ಪೋಸ್ಟ್
ದಿನಾಂಕ 28, 29 ಮತ್ತು 30 ಏಪ್ರಿಲ್ 2025ರಂದು ರೈಲ್ವೆ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ.
ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂಬ ವಿಷಯವನ್ನು ಪರೀಕ್ಷಾ ನಿಯಮದಲ್ಲಿ ಉಲ್ಲೇಖಿಸಲಾಗಿದೆಯೆಂಬ ದೂರುಗಳು ನನಗೆ ಬಂದಿದೆ.
ಈ ಬಗ್ಗೆ, ಸಂಸದರು, ಶಾಸಕರು ಇದನ್ನು ಸರಿಪಡಿಸುವಂತೆ ಮನವಿ…
— V. Somanna (@VSOMANNA_BJP) April 28, 2025
ಇದನ್ನೂ ಓದಿ: ರೈಲ್ವೆ ಪರೀಕ್ಷೆಯಲ್ಲಿ ಜನಿವಾರ ಮಾತ್ರವಲ್ಲ, ಮಂಗಳಸೂತ್ರವೂ ನಿಷಿದ್ಧ! ವ್ಯಾಪಕ ಆಕ್ರೋಶ
ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು: ಸೋಮಣ್ಣ
ರೈಲ್ವೆ ಇಲಾಖೆಯ ಪರೀಕ್ಷೆಗೆ ಈ ನಿಬಂಧನೆಗಳು ಅನೇಕ ವರ್ಷಗಳಿಂದ ಇವೆ. ಇವತ್ತು ಬೆಳಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜನಿವಾರ ಮತ್ತು ಮಂಗಳಸೂತ್ರ ತೆಗೆಯದಂತೆ ಇಂದೇ ಆದೇಶ ಆಗಬೇಕು ಎಂದು ಮನವಿ ಮಾಡಿದೆ. ನನ್ನ ಮನವಿಗೆ ಸಮ್ಮತಿಸಿ, ಮಾಂಗಲ್ಯ ಮತ್ತು ಜನಿವಾರ ತೆಗೆಯುವ ಆದೇಶವನ್ನು ಹಿಂಪಡೆದಿದ್ದಾರೆ. ದೇಶಾದ್ಯಂತ ಈ ನಿಯಮ ಅನ್ವಯವಾಗಲಿದೆ. ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು. ಅಭ್ಯರ್ಥಿಗಳಿಗೆ ಇದ್ದ ಗೊಂದಲ ನಿವಾರಣೆಯಾಗಿದೆ. ಸುಮಾರು ವರ್ಷಗಳಿಂದ ಇದ್ದ ಕಟ್ಟುಪಾಡುಗಳನ್ನು ತೆಗದುಹಾಕಲಾಗಿದೆ. ಅಭ್ಯರ್ಥಿಗಳಿಗೆ ಅಪಚಾರ ಆಗಿದ್ದರೆ ಕ್ಷಮೆಕೇಳುತ್ತೇನೆ ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಹೇಳಿದರು.
ವಿದ್ಯಾರ್ಥಿಯ ಜನಿವಾರ ತೆಗೆಸಿದ್ದ ಸಿಬ್ಬಂದಿ
ಶಿವಮೊಗ್ಗ, ಧಾರವಾಡ ಮತ್ತು ಬೀದರ್ ಜಿಲ್ಲೆಗಳಲ್ಲಿ ಕರ್ನಾಟಕ ಸಿಇಟಿ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಸದ್ಯ ಕರ್ನಾಟಕ ಹೈಕೋರ್ಟ್ನಲ್ಲಿ ಪಿಎಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಕೂಡ ಸಲ್ಲಿಕೆಯಾಗಿದೆ. ಇಂಥ ಸಂದರ್ಭದಲ್ಲೇ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯ ಪ್ರವೇಶ ಪತ್ರ ಕೂಡ ವಿವಾದಕ್ಕೆ ಗುರಿಯಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Mon, 28 April 25







