ತೀವ್ರ ಸ್ವರೂಪ ಪಡೆದ ಬಿಡದಿ ರೈತರ ಹೋರಾಟ: ಸ್ಥಳಕ್ಕೆ ಧಾವಿಸಿದ ಹೆಚ್​ಡಿ ಕುಮಾರಸ್ವಾಮಿ; ಪೊಲೀಸರ ಸಸ್ಪೆಂಡ್​​ಗೆ ಆಗ್ರಹ ​

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿ ರೈತರ ಹೋರಾಟ ತೀವ್ರಗೊಂಡಿದೆ. ಪೊಲೀಸರು ಬೈರಮಂಗಲದಲ್ಲಿ ಪ್ರತಿಭಟನಾ ನಿರತ ರೈತರನ್ನು ಬಲವಂತವಾಗಿ ವಶಕ್ಕೆ ಪಡೆದಿದ್ದರು. ಇದರಿಂದ ಆಕ್ರೋಶಗೊಂಡ ರೈತರು ಉಪವಾಸ ಸತ್ಯಾಗ್ರಹ ಮುಂದುವರಿಸಿದರು. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಘಟನಾ ಸ್ಥಳಕ್ಕೆ ಧಾವಿಸಿ, ಪೊಲೀಸರ ದೌರ್ಜನ್ಯವನ್ನು ಖಂಡಿಸಿದ್ದು, ಅಧಿಕಾರಿಗಳ ಅಮಾನತುಗೊಳಿಸುವಂತೆ ಸೂಚನೆ ನೀಡಿದ್ದಾರೆ.

ತೀವ್ರ ಸ್ವರೂಪ ಪಡೆದ ಬಿಡದಿ ರೈತರ ಹೋರಾಟ: ಸ್ಥಳಕ್ಕೆ ಧಾವಿಸಿದ ಹೆಚ್​ಡಿ ಕುಮಾರಸ್ವಾಮಿ; ಪೊಲೀಸರ ಸಸ್ಪೆಂಡ್​​ಗೆ ಆಗ್ರಹ ​
ಹೆಚ್​ಡಿ ಕುಮಾರಸ್ವಾಮಿ
Image Credit source: x/hd_kumaraswamy
Edited By:

Updated on: Sep 26, 2026 | 10:21 PM

ರಾಮನಗರ, ಸೆಪ್ಟೆಂಬರ್​​ 26: ಬಿಡದಿ ಟೌನ್​​ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿನ್ನೆ ಬೈರಮಂಗಲದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಧರಣಿ ನಡೆಸುತ್ತಿದ್ದ ರೈತರು ಹಾಗೂ ಮಹಿಳೆಯರನ್ನ ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು, ಚನ್ನಪಟ್ಟಣದ ಪೊಲೀಸ್ ಭವನದಲ್ಲಿಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಹೀಗಾಗಿ ಸ್ಥಳಕ್ಕೆ ಧಾವಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಬಲವಂತವಾಗಿ ಕ್ರಮ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಕಳೆದ 18 ತಿಂಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಬೈರಮಂಗಲದ ರೈತರ ಪ್ರತಿಭಟನೆ ನಿನ್ನೆ ಹಠಾತ್ ಉದ್ವಿಗ್ನಗೊಂಡಿತ್ತು. ಚನ್ನಪಟ್ಟಣ ತಾಲೂಕಿನ ಸ್ಥಳೀಯ ರೈತರು ಪೊಲೀಸ್ ಭವನದ ಹೊರಭಾಗದಲ್ಲಿ ಹಾಗೂ ಗಾಂಧಿ ಸರ್ಕಲ್‌ನಲ್ಲಿ ಹಳೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಸಚಿವ ಬಾಲಕೃಷ್ಣ ಮತ್ತು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡಿಸಿದರು. ಈ ವೇಳೆ ಟ್ರಾಫಿಕ್ ಜಾಮ್ ಉಂಟು ಆಯಿತು.

ಕುಮಾರಸ್ವಾಮಿ ಎದುರು ಕಣ್ಣೀರು ಹಾಕಿದ ರೈತ ಮಹಿಳೆಯರು

ಇನ್ನು ​ರೈತರ ಬಂಧನದ ವಿಷಯ ತಿಳಿಯುತ್ತಿದ್ದಂತೆಯೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎ. ಮಂಜುನಾಥ್ ಚನ್ನಪಟ್ಟಣದ ಪೊಲೀಸ್ ಭವನಕ್ಕೆ ಧಾವಿಸಿದರು. ಈ ವೇಳೆ ಧರಣಿನಿರತ ರೈತ ಮಹಿಳೆಯರು ಕುಮಾರಸ್ವಾಮಿ ಎದುರು ಕಣ್ಣೀರಿಟ್ಟು ಪೊಲೀಸರ ದೌರ್ಜನ್ಯವನ್ನು ತೋಡಿಕೊಂಡರು. ‘ನಾವೇನು ಕೊಲೆ ಮಾಡಿದ್ದೇವಾ, ರೈತರ ಹೆಣ್ಣುಮಕ್ಕಳಿಗೆ ಬೆಲೆ‌ ಇಲ್ವಾ? ರೈತ ಹೆಣ್ಣುಮಕ್ಕಳನ್ನ ರಸ್ತೆಯಲ್ಲಿ ಎಳೆದಾಡಿ ಹಲ್ಲೆ ಮಾಡಿದ್ದಾರೆ. ನಾವು ಯಾವ ಹೋರಾಟಕ್ಕೂ ಸಿದ್ಧ, ಜೈಲಿಗೆ ಹೋಗಲೂ ಸಿದ್ಧ’ ಎಂದು ರೈತ ಮಹಿಳೆ ಕಣ್ಣೀರು ಹಾಕಿದ್ದಾರೆ.

ಪೊಲೀಸರನ್ನ ಸಸ್ಪೆಂಡ್​ ಮಾಡದಿದ್ರೆ ನಾನೇ ಬೀದಿಗಿಳಿಯುತ್ತೇನೆ: ಹೆಚ್‌ಡಿ ಕುಮಾರಸ್ವಾಮಿ

ತಕ್ಷಣ ಎಸ್.ಪಿ. ರೋಹನ್ ಜಗದೀಶ್​​ರನ್ನ ಸ್ಥಳಕ್ಕೆ ಕರೆಸಿಕೊಂಡ ಹೆಚ್‌ಡಿ ಕುಮಾರಸ್ವಾಮಿ, ಕೇಂದ್ರ ವಲಯ ಡಿಐಜಿಪಿ ಗಿರೀಶ್ ಅವರಿಗೂ ದೂರವಾಣಿ ಕರೆ ಮಾಡಿ ಖಡಕ್​ ಎಚ್ಚರಿಕೆ ನೀಡಿದರು. ಈ ವೇಳೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ‘ರೈತ ಮಹಿಳೆಯರನ್ನ ವಶಕ್ಕೆ ಪಡೆದವರನ್ನ ಸಸ್ಪೆಂಡ್ ಮಾಡಿ. ಪೊಲೀಸರನ್ನ ಸಸ್ಪೆಂಡ್​ ಮಾಡದಿದ್ರೆ ನಾನೇ ಬೀದಿಗಿಳಿಯುತ್ತೇನೆ. ನಾವೇ ರಸ್ತೆ ಮೇಲೆ ಕೂರ್ತೇವೆ, ನಮ್ಮನ್ನ ಬಂಧಿಸಿ ನೋಡೋಣ’ ಎಂದು ಎಸ್​ಪಿಗೆ ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ವಿವಾದ: ಧರಣಿ ನಡೆಸುತ್ತಿದ್ದ ರೈತರು ಸೇರಿದಂತೆ ಗಣೇಶ ಮೂರ್ತಿ ಹೊತ್ತೊಯ್ದ ಪೊಲೀಸ್ರು

‘18 ತಿಂಗಳಿಂದ ಶಾಂತಿಯುತವಾಗಿ ಹೋರಾಟ ಮಾಡಿದ್ದಾರೆ. ಹೋರಾಟಗಾರರಿಗೆ ಮನವಿ ಮಾಡಿದರೆ ತೊಂದರೆ ಕೊಡ್ತಿರಲಿಲ್ಲ. ಬೆಂಗಳೂರು ದಕ್ಷಿಣ ಡಿಸಿ ಇದುವರೆಗೂ ಸ್ಥಳಕ್ಕೆ ಹೋಗಿಲ್ಲ. ಮನವಿ ಕೊಡಲು ಬಂದಾಗ ಡಿಸಿ ಕಚೇರಿಗೆ ರೈತರನ್ನ ಬಿಟ್ಟಿಲ್ಲ. ರೈತರು ಜಮೀನು ಕೊಡಲ್ಲ ಎಂದು ಹೋರಾಟ ಮಾಡ್ತಿದ್ದಾರೆ. ರೈತ ಮಹಿಳೆಯರು ಇರೋದಕ್ಕೆ ಈ ಹೋರಾಟ ಉಳಿದಿದೆ. ನಾನೇ ಯೋಜನೆ ಆರಂಭಿಸಿದ್ದು, ಬೇಡ ಎಂದ್ಮೇಲೆ ನಿಲ್ಲಿಸಿದೆ’ ಎಂದಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ಭೇಟಿ ಬೆನ್ನಲ್ಲೇ ಸತ್ಯಾಗ್ರಹ ಅಂತ್ಯ

ಇನ್ನು ಇದಕ್ಕೂ ಮುನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಡಿಸಿ ಯಶವಂತ್ ವಿ. ಗುರುಕರ್ ಹಾಗೂ ಎಸ್.ಪಿ. ರೋಹನ್ ಜಗದೀಶ್​​ ರೈತರ ಮನವೊಲಿಸಲು ಯತ್ನಿಸಿದರೂ ಪಟ್ಟು ಸಡಿಲಿಸಿರಲಿಲ್ಲ. ಅಂತಿಮವಾಗಿ ಹೆಚ್.ಡಿ. ಕುಮಾರಸ್ವಾಮಿ ರೈತರಿಗೆ ಬಾಳೆಹಣ್ಣು ತಿನ್ನಿಸಿ, ಪೊಲೀಸ್ ಭವನದಲ್ಲಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.

ನಾಳೆಯಿಂದ ರೈತರು ಎಂದಿನಂತೆ ಬೈರಮಂಗಲದಲ್ಲೇ ತಮ್ಮ ಹೋರಾಟ ಮುಂದುವರಿಸಲಿದ್ದಾರೆ. ನಾಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೂಡ ರೈತರ ಹೋರಾಟಕ್ಕೆ ಸಾಥ್ ನೀಡಲಿದ್ದು, ಬಿಡದಿ ಟೌನ್‌ಶಿಪ್ ಜಟಾಪಟಿ ಈಗ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟವಾಗಿ ರೂಪುಗೊಳ್ಳುತ್ತಿದೆ.

ಇದನ್ನೂ ಓದಿ: ಪೊಲೀಸ್ ಭವನದಲ್ಲೇ ಬಿಡದಿ ರೈತರ ಉಪವಾಸ ಸತ್ಯಾಗ್ರಹ: ‘ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ’ ಎಂದು ಆಕ್ರೋಶ

​ಒಟ್ಟಿನಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಭೂಮಿ ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿದಿರುವ ರೈತರ ಹೋರಾಟಕ್ಕೆ ಈಗ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಹೆಚ್‌ಡಿ ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿದ್ದಾರೆ. ದೌರ್ಜನ್ಯ ಎಸಗಿದ ಪೊಲೀಸರ ಅಮಾನತಿಗೆ ನೀಡಿದ ಗಡುವು ಮುಗಿಯುತ್ತಿದ್ದು, ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ.

Bidadi Township Row: ಬಿಡದಿ ಪ್ರತಿಭಟನಾ ಸ್ಥಳಕ್ಕೆ ಹೆಚ್​ಡಿಕೆ ಭೇಟಿ ಮಹಿಳೆಯರ ಕಣ್ಣೀರು ಎಸ್​ಪಿ ಕರೆಸಿ ವಾರ್ನಿಂಗ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Loading...
Unable to load recommendations.
Follow Us