ಬಿಡದಿ ಟೌನ್‌ಶಿಪ್ ವಿವಾದ: ಧರಣಿ ನಡೆಸುತ್ತಿದ್ದ ರೈತರು ಸೇರಿದಂತೆ ಗಣೇಶ ಮೂರ್ತಿ ಹೊತ್ತೊಯ್ದ ಪೊಲೀಸ್ರು
ರಾಮನಗರದ ಬೈರಮಂಗಲ ಗ್ರಾಮದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರ ಉಪವಾಸ ಸತ್ಯಾಗ್ರಹ ಮುಂದುರೆದಿದೆ. ಪ್ರತಿಭಟನಾ ನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನು ಈ ವೇಳೆ ಮಹಿಳೆಯರು ರಸ್ತೆ ಮೇಲೆ ಮಲಗಿ ಪ್ರತಿಭಟಿಸಿದಲ್ಲದೆ, ಸ್ಥಳದಲ್ಲಿದ್ದ ಗಣೇಶ ಮೂರ್ತಿಯನ್ನೂ ಪೊಲೀಸರು ತೆರವುಗೊಳಿಸಿದರು. ಈ ವೇಳೆ ಹೈಡ್ರಾಮಾ ನಡೆದಿದೆ.

ರಾಮನಗರ, ಸೆಪ್ಟೆಂಬರ್ 25: ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬೈರಮಂಗಲ ಬಳಿ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಮತ್ತು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೈಡ್ರಾಮಾ ಸೃಷ್ಟಿಯಾಯಿತು.
ಕಳೆದ 5 ದಿನದಿಂದ ಉಪವಾಸ ಸತ್ಯಾಗ್ರಹ
ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ರೈತರು ಕಳೆದ ಐದು ದಿನಗಳಿಂದ ಬಿಡದಿ-ಹಾರೋಹಳ್ಳಿ ರಸ್ತೆ ತಡೆದು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಮತ್ತೊಂದೆಡೆ, ರಸ್ತೆ ತಡೆದು ಪ್ರತಿಭಟಿಸಿದಕ್ಕೆ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಯೋಜನೆ ಪರ ರೈತರು ಕೂಡ ಪ್ರತಿಭಟನೆ ನಡೆಸಿದ್ದು, ಪೊಲೀಸರು ಅವರನ್ನು ಸಹ ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾಕಾರರ ಆಕ್ರೋಶ: ಹೈಡ್ರಾಮಾ
ರಸ್ತೆ ಸಂಚಾರ ಸುಗಮಗೊಳಿಸಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮುಂದಾದಾಗ ಸ್ಥಳದಲ್ಲಿ ಹೈಡ್ರಾಮಾ ನಡೆಯಿತು. ರೈತ ಮಹಿಳೆಯರು ಬಾಯಿ ಬಡಿದುಕೊಳ್ಳುತ್ತಾ ರಸ್ತೆಯಲ್ಲೇ ಮಲಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಯನ್ನು ಅಲ್ಲಿಂದ ಎತ್ತಿಕೊಂಡು ಹೋದರು.
ರಸ್ತೆ ತೆರವು ಮತ್ತು ಅಂಗಡಿ ಮುಂಗಟ್ಟು ಬಂದ್
ಇನ್ನು ಪೊಲೀಸರು ಪ್ರತಿಭಟನಾನಿರತ ಮಹಿಳೆಯರು ಮತ್ತು ರೈತರನ್ನು ಚದುರಿಸಿ ರಸ್ತೆ ತೆರವುಗೊಳಿಸಿದರು. ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿದ್ದ ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳು ಹಾಗೂ ಕಟ್ಟಲಾಗಿದ್ದ ಸೀರೆ ಮತ್ತು ಗ್ರೀನ್‌ಮ್ಯಾಟ್‌ಗಳನ್ನು ತೆರವು ಮಾಡಿದ್ದಾರೆ.
ರಸ್ತೆಯಲ್ಲಿದ್ದ ಕಸವನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಲಾಯಿತು. ಬೈರಮಂಗಲ ಗ್ರಾಮದಲ್ಲಿ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಕಳುಹಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಎದರೇ ರೈತ ಮುಖಂಡರು ಆಕ್ರೋಶ
ಇಂದು ಹೋರಾಟದ ಸ್ಥಳಕ್ಕೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ ಅವರ ಎದುರೇ ರಾಜಕೀಯ ಪಕ್ಷಗಳ ವಿರುದ್ಧ ರೈತ ಮುಖಂಡರು ಆಕ್ರೋಶ ಹೊರಹಾಕಿದರು. ‘ನಮ್ಮದು ಬೂಟಾಟಿಕೆಯ ಹೋರಾಟವಲ್ಲ, ಯೋಜನೆ ಕೈಬಿಡುವವರೆಗೂ ವಿರಮಿಸಲ್ಲ’ ಎಂದರು.
ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ: ನಿಖಿಲ್ ಕುಮಾರಸ್ವಾಮಿ
ಇನ್ನು ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲ. ರಿಯಲ್ ಎಸ್ಟೇಟ್ ಕಂಪನಿಯ ಸಿಇಒ ರೀತಿ ಸಿಎಂ ಆಡುತ್ತಿದ್ದಾರೆ. 136 ಸೀಟು ಗೆದ್ದಿರುವ ಈ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ. ಹೆಚ್.ಸಿ.ಬಾಲಕೃಷ್ಣ ಯಾವ ಪುರುಷಾರ್ಥಕ್ಕೆ ಮಂತ್ರಿ ಆಗಿದ್ದಾರೆ. ಬಿಬಿಡಿಎ ಬಳಿ ರೈತರಿಗೆ ನೀಡಲು ಹಣ ಎಲ್ಲಿದೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಲಿ’ ಎಂದು ಸವಾಲು ಹಾಕಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




