ರಾಮನಗರದಲ್ಲಿ ಮತ್ತೊಂದು ವಿವಾದ: ಪಡಿತರ ಚೀಟಿಯ ಹಿಂದೆ ಏಸುಕ್ರಿಸ್ತ, ಲಕ್ಷ್ಮೀ ಫೋಟೊ ಮುದ್ರಣ, ತನಿಖೆಗೆ ಆಗ್ರಹ
ದೊಡ್ಡ ಆಲಹಳ್ಳಿಯಲ್ಲಿ ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತ, ಲಕ್ಷ್ಮಿ ದೇವಿ ಫೋಟೋ ಮುದ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.

ರಾಮನಗರ: ರಾಜ್ಯದಲ್ಲಿ ನಡೆಯುತ್ತಿರುವ ಹಲಾಲ್, ಹಿಜಾಬ್ ಗಲಾಟೆ ನಡುವೆ ರಾಮನಗರ ಜಿಲ್ಲೆಯಲ್ಲಿ ಮತ್ತೊಂದು ವಿವಾದ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ವ ಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತ, ಲಕ್ಷ್ಮಿ ದೇವಿ ಫೋಟೋ ಮುದ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತನ ಫೋಟೋ ಮುದ್ರಿಸಲಾಗಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರ್ಕಾರದಿಂದ ನೀಡಲಾಗುವ ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತ, ಲಕ್ಷ್ಮಿ ದೇವಿ ಫೋಟೋ ಮುದ್ರಿಸಲಾಗಿದ್ದು ಈ ಬಗ್ಗೆ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಅಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಲು ಶ್ರೀರಾಮ ಸೇನೆ ಮುಂದಾಗಿದೆ. ಮತ್ತೊಂದೆಡೆ ವೈರಲ್ ಆಗಿರುವ ಫೋಟೋ ಬಗ್ಗೆ ತನಿಖೆ ನಡೆಸಲು ಕನಕಪುರ ತಹಶೀಲ್ದಾರ್ ಮುಂದಾಗಿದ್ದಾರೆ. ಪೊಲೀಸರ ಜೊತೆಗೂಡಿ ತಹಶೀಲ್ದಾರ್ ವಿಶ್ವನಾಥ್ ತನಿಖೆಗೆ ಮುಂದಾಗಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತನ ಫೋಟೋ ಹಾಕಲಾಗಿದ್ದು ಕೆಳಗೆ ನ್ಯೂ ಪುಷ್ಪ ಸ್ಟೂಡಿಯೋ ದೊಡ್ಡ ಆಲಹಳ್ಳಿ ಎಂದು ಮುದ್ರಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಡಲತಿಮ್ಮನಹಳ್ಳಿಯ ರಸ್ತೆಯಲ್ಲಿ ಹೊಂಡದಂಥ ಗುಂಡಿಗಳು, ಪ್ರತಿಭಟನೆಗಿಳಿದ ಗ್ರಾಮಸ್ಥರು
ಈ ಹಿಂದೆ ಪಡಿತರ ಪಡೆಯಲು ಜನ ಸಹಿ ಹಾಕಬೇಕಿತ್ತು. ಆದ್ರೆ ಈಗ ಎಲ್ಲವೂ ಡಿಜಿಟಲ್ ಆಗಿದ್ದು ಪಡಿತರ ಚೀಟಿ ತೋರಿಸಿ ಬೆರಳಚ್ಚು ನೀಡಿದರೆ ಸಾಕು. ಆದ್ರೆ ಈಗ ಪಡಿತರ ಚೀಟಿಯಲ್ಲಿ ಏಸು ಕ್ರಿಸ್ತನ ಫೋಟೋ ಮುದ್ರಿಸಲಾಗಿದ್ದು ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದು ಸತ್ಯ ಬಯಲಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:59 am, Wed, 19 October 22