ಆತುರ ಬೇಡ, ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳ ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್​​

ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ವಯ ಉಳಿದ ಬರಪೀಡಿತ ತಾಲೂಕುಗಳನ್ನು ಶೀಘ್ರವೇ ಅಧಿಕೃತವಾಗಿ ಘೋಷಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಎಷ್ಟೋ ಕಡೆ ಬೆಳೆ ನಾಶವಾಗಿದ್ದು, ಅಂತರ್ಜಲ ಕುಸಿದಿದೆ. ಅನೇಕ ಕಡೆ ಬೆಳೆ ಹಾಕಲು ಆಗಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಅಭಾವ ಹೆಚ್ಚಾಗುವ ಸಾಧ್ಯತೆಗಳಿವೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.

ಆತುರ ಬೇಡ, ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳ ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್​​
ಸಿಎಂ ಡಿ.ಕೆ. ಶಿವಕುಮಾರ್​​
Image Credit source: Tv9 Kannada

Updated on: Sep 14, 2026 | 4:09 PM

ರಾಮನಗರ, ಸೆಪ್ಟೆಂಬರ್​​ 14: ಈ ಬಾರಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಗೆ ಸಿಲುಕಿವೆ. ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ತಾನು ಅನೇಕ ಕಡೆ ಭೇಟಿ ನೀಡಿ ಬರ ಪರಿಶೀಲನೆ ಮಾಡಿದ್ದೇನೆ. ಈಗಾಗಲೇ 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಉಳಿದ ಕಡೆ ಪರಿಶೀಲನೆ ನಡೆಯುತ್ತಿದೆ. ಯಾರೂ ಆತುರ ಪಡುವುದು ಬೇಡ ಎಂದವರು ಹೇಳಿದ್ದಾರೆ.

ಎಷ್ಟೋ ಕಡೆ ಬೆಳೆ ನಾಶವಾಗಿದ್ದು, ಅಂತರ್ಜಲ ಕುಸಿದಿದೆ. ಅನೇಕ ಕಡೆ ಬೆಳೆ ಹಾಕಲು ಆಗಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಅಭಾವ ಹೆಚ್ಚಾಗುವ ಸಾಧ್ಯತೆಗಳಿವೆ. ಕಳೆದ ವಾರ 19,000ಕ್ಕೂ ಹೆಚ್ಚು ಮೆಗಾ ವ್ಯಾಟ್ ವಿದ್ಯುತ್ ಗೆ ಬೇಡಿಕೆ ಉಂಟಾಗಿತ್ತು. ರಾತ್ರಿ ವೇಳೆ ವಿದ್ಯುತ್ ಬಳಕೆ ಹೆಚ್ಚಾಗಿದೆ. ಈ ಸಂಬಂಧ ನೆರೆ ರಾಜ್ಯಗಳ ಜೊತೆ ಚರ್ಚೆ ಮಾಡಲು ಸಚಿವರಿಗೆ ಸೂಚಿಸಿರುವೆ. ನಾನು ಇಂಧನ ಸಚಿವನಾಗಿದ್ದಾಗ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿದ್ದೆವು. ಬಿಜೆಪಿ ಅವಧಿಯಲ್ಲಿ ಹೆಚ್ಚಳ ಮಾಡಿಲ್ಲ. ಜಾರ್ಜ್ ಅವರು ಸಚಿವರಾದ ಬಳಿಕ ಅನೇಕ ಯೋಜನೆ ರೂಪಿಸಿದ್ದು, ಕಲ್ಲಿದ್ದಲು ನಿಕ್ಷೇಪ ಇರುವ ಕಡೆಗಳಲ್ಲೇ ತುರ್ತಾಗಿ ಥರ್ಮಲ್ ಇಂಧನ ತಯಾರಿಕ ಘಟಕ ಸ್ಥಾಪಿಸಬೇಕು. ಒನ್ ನೇಷನ್ ಒನ್ ಗ್ರಿಡ್ ಮಾಡಲಾಗಿದ್ದು, ಎಲ್ಲೆ ವಿದ್ಯುತ್ ಉತ್ಪಾದನೆಯಾದರೂ ನಾವು ನಮ್ಮ ರಾಜ್ಯಕ್ಕೆ ತರಬಹುದು. ಇದಕ್ಕೆ ಸರಬರಾಜು ವೆಚ್ಚ ಬೀಳಲಿದೆ. ಈ ವಿಚಾರವಾಗಿ ಇಂಧನ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆ ಶಿವಕುಮಾರ್ ಸ್ಪಷ್ಟನೆ: ಅಂತೆ ಕಂತೆಗಳಿಗೆ ತೆರೆ

ಸೆ. 18ರಂದು ದಕ್ಷಿಣ ಕನ್ನಡದಲ್ಲಿ ಸಚಿವ ಸಂಪುಟ ಸಭೆ

ಸೆಪ್ಟೆಂಬರ್​​ 18ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಮಾಡುತ್ತಿದ್ದು, ಆ ಭಾಗದ ಶಾಸಕರು, ಮಂತ್ರಿಗಳು, ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಭಾಗದ ಜನ ಉದ್ಯೋಗಕ್ಕಾಗಿ ಹೊರಗೆ ಹೋಗುತ್ತಿರುವುದನ್ನು ತಪ್ಪಿಸಿ, ಅಲ್ಲಿನ ಪ್ರಾಕೃತಿಕ ಸಂಪತ್ತು ಬಳಸಿಕೊಂಡು ಅವರ ಬದುಕಿನಲ್ಲಿ ಬದಲಾವಣೆ ತರಲು ಅನೇಕ ಹೊಸ ಚಿಂತನೆಗಳನ್ನು ಘೋಷಣೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

‘ಕಾಂಗ್ರೆಸ್​​ ಶಾಸಕರ ಜೊತೆಗೆ ಬಿಜೆಪಿಗರಿಂದಲೂ ಬೇಸರ’

ಬಿಜೆಪಿಯವರಿಗೆ ರಾಜಕಾರಣವೇ ಹೆಚ್ಚಾಗಿದೆ. ರೈತರ ವಿಚಾರ ಚರ್ಚೆ ಹಾಗೂ ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡಲು 3 ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ನಮ್ಮ ಶಾಸಕರ ಜೊತೆಗೆ ಬಿಜೆಪಿ ಶಾಸಕರು ಕೂಡ ಬೇಸರ ವ್ಯಕ್ತಪಡಿಸಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಹೀಗಾಗಿ ಈ ವಿಚಾರ ಚರ್ಚೆಗೆ 21ರಿಂದ 23ರ ವರೆಗೆ ಅಧಿವೇಶನ ಕರೆಯಲಾಗಿದೆ. ಶಾಸಕರು ಗಾಬರಿ ಆಗುವುದು ಬೇಡ. ರಾಜಕಾರಣ ಮಾಡುವವರಿಗೆ ನಾವು ಏನೂ ಮಾಡಲು ಆಗುವುದಿಲ್ಲ. ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅನೇಕ ಕಂಪನಿಗಳು ಬರುತ್ತಿದ್ದು, ವಿದ್ಯುತ್, ನೀರು, ಭೂಮಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದೂ ಅವರು ಇದೇ ವೇಳೆ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us