ರಾಮನಗರದಿಂದ ಮತ್ತೊಂದು ಪಾದಯಾತ್ರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನತ್ತ ದಿವ್ಯಾಂಗರ ದಂಡು

ರಾಮನಗರದಿಂದ ಬೆಂಗಳೂರಿಗೆ ವಿಶೇಷಚೇತನರ ಬೃಹತ್ ಪಾದಯಾತ್ರೆ ಆರಂಭವಾಗಿದೆ. ಐದು ತಿಂಗಳ ಪಿಂಚಣಿ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ. ಇವರ ಈ ಪಾದಯಾತ್ರೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರದಿಂದ ಮತ್ತೊಂದು ಪಾದಯಾತ್ರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನತ್ತ ದಿವ್ಯಾಂಗರ ದಂಡು
ವಿಶೇಷಚೇತನರ ಪಾದಯಾತ್ರೆ
Edited By:

Updated on: Oct 18, 2026 | 10:51 PM

ರಾಮನಗರ, ಅಕ್ಟೋಬರ್​​ 18: ಬಿಡದಿ ಟೌನ್‌ಶಿಪ್​ ವಿರೋಧಿಸಿ ರೈತರ ಪಾದಯಾತ್ರೆ ಬೆನ್ನಲ್ಲೇ ಇದೀಗ ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಮತ್ತೊಂದು ಪಾದಯಾತ್ರೆ ಶುರುವಾಗಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಶೇಷಚೇತನರು ರಾಮನಗರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದಾರೆ. ಈ ಪಾದಯಾತ್ರೆಗೆ ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಸಾಥ್​ ನೀಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಈ ಪಾದಯಾತ್ರೆ ಬೆಂಗಳೂರು ಪ್ರವೇಶಿಸದಂತೆ ಪೊಲೀಸರು ಕಣಮಿಣಿಕೆ ಬಳಿ ಬ್ಯಾರಿಕೇಡ್ ಹಾಕಿ ತಡೆದಿದ್ದರು. ಆದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎನ್ನುವ ದೃಷ್ಠಿಯಿಂದ ವಿಶೇಷಚೇತನರ ಬೆಂಗಳೂರು ಪಾದಯಾತ್ರೆಗೆ ಅವಕಾಶ ಮಾಡಿಕೊಡಲಾಗಿದೆ.

ವಿಶೇಷಚೇತನರ ಪಾದಯಾತ್ರೆ ತಡೆದಿದ್ದ ಪೊಲೀಸ್​​

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶೇಷಚೇತನರು ಬೆಂಗಳೂರಿನತ್ತ ಪಾದಯಾತ್ರೆ ಆರಂಭಿಸಿದ್ದಾರೆ. ರಾಮನಗರದ ಕಣಮಿಣಿಕೆಯಿಂದ ಬೆಂಗಳೂರಿನತ್ತ ಹೊರಟಿದ್ದ ವಿಶೇಷಚೇತನರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಬಳಿಕ ಪಾದಯಾತ್ರೆಗೆ ಅವಕಾಶ ನೀಡುವಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮನವಿ ಬೆನ್ನಲ್ಲೇ ಪೊಲೀಸರು ಪಾದಯಾತ್ರೆಗೆ ಅವಕಾಶ ಕಲ್ಪಿಸಿದರು.

Loading...

ರಾಹುಲ್, ಪ್ರಿಯಾಂಕಾ ಗಾಂಧಿಗೆ ಹಣ ಕೊಡ್ತಿದ್ದೀರಾ? ಅಶೋಕ್ ಕಿಡಿ 

ವಿಶೇಷಚೇತನರ ಪಾದಯಾತ್ರೆ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ‘ವಿಶೇಷ ಚೇತನರಿಗೆ ಐದು ತಿಂಗಳಿಂದ ಪಿಂಚಣಿ ಕೊಟ್ಟಿಲ್ಲ. ರಾಜ್ಯದಲ್ಲಿ ಇಂಥ ದುಸ್ಥಿತಿ ಬರುತ್ತೆ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಡವರ ಬೆನ್ನಿಗೆ ಚೂರಿ ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರ ಪಾಪಾರ್ ಗಿರಾಕಿಗಳು. ಪಿಂಚಣಿಗೆ ಹಣ ಇಲ್ಲ ಅಂದರೆ ಯಾರಿಗೆ ಹಣ ಕೊಡ್ತಿದ್ದೀರಿ? ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ ಕೊಡ್ತಿದ್ದೀರಾ’ ಎಂದು ಕಿಡಿಕಾರಿದರು.

ಇದನ್ನೂ ಓದಿ: ರಾಮನಗರದಲ್ಲಿ ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​

‘ಸರ್ಕಾರದ ಬಳಿ ದಿವ್ಯಾಂಗರಿಗೆ ಕೊಡುವುದಕ್ಕೆ ಹಣವಿಲ್ಲ. ದಿವ್ಯಾಂಗರನ್ನ ಬಂಧಿಸಲು 500 ಪೊಲೀಸರು ಬಂದಿದ್ದಾರೆ. ಟೆರೆರಿಸ್ಟ್ ಬಂದಿದ್ದಾರೆ ಅರೆಸ್ಟ್ ಮಾಡ್ರಿ ಅಂದ್ರೆ ಮಾಡಲ್ಲ, ದಿವ್ಯಾಂಗರನ್ನ ಅರೆಸ್ಟ್ ಮಾಡಲು ಬಂದಿರೋದು ಹೇಡಿತನ. ಹೃದಯವಿಲ್ಲದ ಡಿ.ಕೆ.ಶಿವಕುಮಾರ್. ಬೇಡಿಕೆ ಈಡೇರಿಸದಿದ್ರೆ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ಗೃಹ ಸಚಿವರ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ 

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಮಾತನಾಡಿ, ‘ವಿಶೇಷಚೇತನರ ನೋವು ಮತ್ತು ಸಮಸ್ಯೆಗಳು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲವಾ. ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದಲೇ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ವಿಕಲಚೇತನ ಹೆಣ್ಮಕ್ಕಳು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮಗೆ ಆರೋಗ್ಯದ ಬಗ್ಗೆ ಪಾಠ ಮಾಡುವ ಗೃಹ ಸಚಿವನಿಗೆ ಹೆಣ್ಮಕ್ಕಳ‌ ಸಮಸ್ಯೆ ಕಾಣಲ್ವಾ’ ಎಂದು ಪ್ರಶ್ನಿಸಿದ್ದಾರೆ.

ಐಪಿಎಸ್​ ಅಧಿಕಾರಿ ಸೌಮ್ಯಲತಾ ಹೇಳಿದ್ದಿಷ್ಟು 

ಬೆಂಗಳೂರಿನಲ್ಲಿ ಐಪಿಎಸ್​ ಅಧಿಕಾರಿ ಸೌಮ್ಯಲತಾ ಪ್ರತಿಕ್ರಿಯಿಸಿದ್ದು, ‘ಯಾರಿಗೂ ತೊಂದ್ರೆ ಕೊಡುವ ಉದ್ದೇಶ ನಮಗೆ ಇಲ್ಲ. ದಿವ್ಯಾಂಗರಿಗೆ ಊಟ ಉಪಚಾರದ ವ್ಯವಸ್ಥೆಯನ್ನ ಮಾಡಿದ್ದೇವೆ. ಅವರು ಫ್ರೀಡಂಪಾರ್ಕ್​ಗೆ ಹೋಗೋಕೆ ವ್ಯವಸ್ಥೆ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

Disabled PersonsProtest: ತೀವ್ರ ಸ್ವರೂಪ ಪಡೆದುಕೊಂಡ ವಿಕಲಚೇತನರ ಪಾದಯಾತ್ರೆ.. ಅಶೋಕ್ ಭಾಗಿ | #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:50 pm, Sun, 18 October 26

ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Loading...
Unable to load recommendations.
Follow Us