ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ: ತಂದೆ, ಮಗ ಸೇರಿ ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ರಾಮನಗರದ ಜಯಪುರಗೇಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ರಾಮನಗರ, ಜುಲೈ 13: ಬೆಂಗಳೂರು ಟು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ (accident) ಸಂಭವಿಸಿದ್ದು, ತಡೆಗೋಡೆಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮನಗರ (Ramanagara) ತಾಲೂಕಿನ ಜಯಪುರಗೇಟ್ ಬಳಿ ಬೆಳಗಿನ ಜಾವ ಘಟನೆ ನಡೆದಿದೆ. ಚಿಕ್ಕನಾಯಕಹಳ್ಳಿಯ ತಮ್ಮಣ್ಣಗೌಡ (56), ಪುತ್ರ ಮುತ್ತುರಾಜ್ (28) ಮತ್ತು ಹಾಸನ ಮೂಲದ ಚಾಲಕ ಸಚಿನ್ (27) ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಸಂಜು ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಹೀಗಾಗಿ ಮಡವಿನಕೊಡಿ ಗ್ರಾಮದಲ್ಲಿ ಕಾರ್ಯಕ್ರಮಕೊಂದಕ್ಕೆ ಹೋಗಿ ವಾಪಸ್ ಬೆಂಗಳೂರಿಗೆ ತೆರಳುವಾಗ ದುರಂತ ಸಂಭವಿಸಿದೆ. ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೈಕ್ಗೆ ಹಿಂಬಂದಿಯಿಂದ ಟ್ಯಾಂಕರ್ ಲಾರಿ ಡಿಕ್ಕಿ: ಸವಾರ ಸಾವು
ಬೀದರ್: ಚಲಿಸುತ್ತಿದ್ದ ಬೈಕ್ಗೆ ಹಿಂಬಂದಿಯಿಂದ ಬಂದು ಟ್ಯಾಂಕರ್ ಲಾರಿ ಗುದ್ದಿದ ಪರಿಣಾಮ ಸ್ಥಳದಲ್ಲೇ ಓರ್ವ ಬೈಕ್ ಸವಾರ ಮೃತಪಟ್ಟಿದ್ದು ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ನಡೆದಿದೆ.
ಇದನ್ನೂ ಓದಿ: 45ಕ್ಕೂ ಅಧಿಕ ಮಹಿಳೆಯರ ಅಶ್ಲೀಲ ವಿಡಿಯೋ; ಬೆಂಗಳೂರು ಪೊಲೀಸ್ ವಿಚಾರಣೆ ವೇಳೆ ಶಾಕಿಂಗ್ ವಿಷಯ ಬಯಲು
ಬಸವಕಲ್ಯಾಣ ತಾಲೂಕಿನ ತಡೋಳ ಗ್ರಾಮದ ಘಾಳೆಪ್ಪ ಖರ್ಗೆ (40) ಘಟನೆಯಲ್ಲಿ ಮೃತಪಟ್ಟಿದ್ದು, ವಿಶ್ವನಾಥ್ ಅಶೋಕ ಖರ್ಗೆ ಎನ್ನುವವರಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಾಳುವನ್ನು ಹುಮನಾಬಾದನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.
ಇನ್ನೂ ಈ ಘಟನೆ ವೇಳೆ ಇದೇ ಮಾರ್ಗವಾಗಿ ಕಲಬುರಗಿಗೆ ತೆರಳುತಿದ್ದ ಬಸವಕಲ್ಯಾಣ ಸಿಪಿಐ ಅಲಿಸಾಬ್ ಅವರು, ಗಾಯಾಳು ವ್ಯಕ್ತಿಗೆ ತಮ್ಮದೆ ಪೊಲೀಸ್ ಜೀಪ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಸುದ್ದಿ ತಿಳಿದ ಸಂಚಾರಿ ಠಾಣೆ ಪಿಎಸ್ಐ ಸಿದ್ದೇಶ್ವರ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆದಿದ್ದು, ಪ್ರಕರಣ ದಾಖಲಾಗಿದೆ.
ಲಾರಿ, ಬಸ್ ಮತ್ತು ಕಾರು ನಡುವೆ ಸರಣಿ ಅಪಘಾತ
ಲಾರಿ, ಬಸ್ ಮತ್ತು ಕಾರು ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ. ಸ್ವಲ್ಪದರಲ್ಲೇ ಅನಾಹುತ ತಪ್ಪಿದ ಘಟನೆ ಗದಗ ನಗರದ ಟಿಪ್ಪು ಸುಲ್ತಾನ್ ಸರ್ಕಲ್ನಲ್ಲಿ ನಡೆದಿತ್ತು. ಲಾರಿ ಚಾಲಕನ ಯಡವಟ್ಟಿನಿಂದ ಸರಣಿ ಅಪಘಾತ ನಡೆದಿದೆ ಎನ್ನಲಾಗಿತ್ತು.
ಇದನ್ನೂ ಓದಿ: ಜೈಲಿನಲ್ಲಿ ಮೊಬೈಲ್ ಮಾರಾಟ ಮಾಡಿ 70 ಲಕ್ಷ ರೂ. ಗಳಿಸಿದ್ದ ವೈದ್ಯ ನಾಗರಾಜ್! ಎನ್ಐಎ ತನಿಖೆಯಲ್ಲಿ ಬಹಿರಂಗ
ಸರಣಿ ಅಪಘಾತದಿಂದ ಬಸ್, ಕಾರು ಜಖಂ ಆಗಿತ್ತು. ಸಿಗ್ನಲ್ ಗಮನಿಸದೇ ಮುಂದೆ ನಿಂತಿದ್ದ ಬಸ್ಗೆ ಮೊದಲು ಲಾರಿ ಡಿಕ್ಕಿ ಹೊಡೆದಿದೆ. ಬಳಿಕ ಬಸ್, ಕಾರಗೆ ಡಿಕ್ಕಿ ಹೊಡೆದಿದ್ದು, ಎರಡು ವಾಹನಗಳು ಜಖಂ ಆಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:44 am, Sun, 13 July 25







