45ಕ್ಕೂ ಅಧಿಕ ಮಹಿಳೆಯರ ಅಶ್ಲೀಲ ವಿಡಿಯೋ; ಬೆಂಗಳೂರು ಪೊಲೀಸ್ ವಿಚಾರಣೆ ವೇಳೆ ಶಾಕಿಂಗ್ ವಿಷಯ ಬಯಲು
ಮಹಿಳೆ ಮತ್ತು ಯುವತಿಯರನ್ನು ಅಶ್ಲೀಲವಾಗಿ ಫೋಟೊ ಹಾಗೂ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬನಶಂಕರಿ ಪೊಲೀಸರ ವಿಚಾರಣೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಬೆಂಗಳೂರಿನ ಕೆ.ಆರ್. ಪುರಂ ನಿವಾಸಿ ಗುರುದೀಪ್ ಸಿಂಗ್ ಎಂಬ 26 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಯುವತಿಯ ದೂರಿನ ಆಧಾರದಲ್ಲಿ ಆತನ ಮೇಲೆ ಸುಮೋಟೋ ಕೇಸ್ ದಾಖಲಿಸಲಾಗಿತ್ತು.

ಬೆಂಗಳೂರು, ಜುಲೈ 12: ವ್ಯಕ್ತಿಯೊಬ್ಬ ಮಹಿಳೆ ಮತ್ತು ಯುವತಿಯರ ಅಶ್ಲೀಲ ಫೋಟೊ ಹಾಗೂ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಬೆಂಗಳೂರಿನ (Bengaluru) ಬನಶಂಕರಿ ಪೊಲೀಸರ ವಿಚಾರಣೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿದ್ದು, ಬರೋಬ್ಬರಿ 45ಕ್ಕೂ ಅಧಿಕ ಯುವತಿ ಹಾಗೂ ಮಹಿಳೆಯರನ್ನು ಅಶ್ಲೀಲವಾಗಿ ವಿಡಿಯೋ ಮಾಡಿದ್ದ ಆರೋಪಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಅಸಭ್ಯ ಫೋಟೋ, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ 26 ವರ್ಷದ ಗುರುದೀಪ್ ಸಿಂಗ್ (Guurdeep Singh) ಎಂಬ ವ್ಯಕ್ತಿಯನ್ನು 2 ದಿನಗಳ ಹಿಂದೆ ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ ಆತನ ಮೊಬೈಲಿನಲ್ಲಿ 45 ಇದೇ ರೀತಿಯ ಅಶ್ಲೀಲ ವಿಡಿಯೋಗಳು ಸಿಕ್ಕಿವೆ.
ಬರೋಬ್ಬರಿ 45ಕ್ಕೂ ಅಧಿಕ ಯುವತಿ ಹಾಗೂ ಮಹಿಳೆಯರನ್ನು ಅಶ್ಲೀಲವಾಗಿ ವಿಡಿಯೋ ಮಾಡಿದ್ದ ಆರೋಪಿ ಅವುಗಳಲ್ಲಿ ಕೇವಲ 12 ವಿಡಿಯೋಗಳು ಮಾತ್ರ ಉಳಿಸಿಕೊಂಡಿದ್ದ. ಉಳಿದ ಎಲ್ಲವನ್ನೂ ಡಿಲೀಟ್ ಮಾಡಿರುವ ಆರೋಪಿ ಗುರುದೀಪ್ ಸಿಂಗ್ ಹಲವು ಯುವತಿಯರ ಬಳಿ ಹಣ ಪಡೆದು ಡಿಲೀಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆ ವಿಡಿಯೋಗಳನ್ನು ಪೋಸ್ಟ್ ಮಾಡಿದ ನಂತರ ಹಲವು ಯುವತಿಯರು ಆರೋಪಿಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಈ ವೇಳೆ ಹಲವರ ಬಳಿ ಹಣ ಪಡೆದು ಡಿಲೀಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಅಸಭ್ಯವಾಗಿ ಕಾಣುವಂತೆ ಯುವತಿಯರ ಫೋಟೋ, ವಿಡಿಯೋ ಚಿತ್ರೀಕರಿಸಿ ಪೋಸ್ಟ್: ವ್ಯಕ್ತಿಯ ಬಂಧನ
ಯುವತಿಯರು ತಮ್ಮ ಗೆಳೆಯರೊಂದಿಗೆ ಹೋಗಿರುವ ವಿಡಿಯೋಗಳನ್ನು ಚಿತ್ರೀಕರಿಸಿರುವ ಆರೋಪಿ ಅದನ್ನು ತೋರಿಸಿ ಅವರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ. ಹೀಗಾಗಿ, ಕುಟುಂಬಸ್ಥರಿಗೆ ಗೊತ್ತಾಗುತ್ತದೆ ಎಂದು ಹಣ ಕೊಟ್ಟು ಕೆಲವು ಯುವತಿಯರು ಡಿಲೀಟ್ ಮಾಡಿಸಿದ್ದರು. ಇತ್ತೀಚೆಗೆ ರೆಡ್ಟಿಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿದ್ದ ಯುವತಿ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ಆ ಯುವತಿ ವಿಡಿಯೋ ಪೋಸ್ಟ್ ಮಾಡಿ ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಳು.
ಆ ಯುವತಿಯ ಜೀವನವನ್ನೇ ಹಾಳು ಮಾಡಿದ್ದ ಆರೋಪಿ ಆ ಯುವತಿಯನ್ನು ಚರ್ಚ್ ಸ್ಟ್ರೀಟ್ ನಲ್ಲಿ ಅಶ್ಲೀಲವಾಗಿ ವಿಡಿಯೋ ಮಾಡಿದ್ದ. ಆತ ಸ್ನೇಹಿತರೊಂದಿಗೆ ಚರ್ಚ್ ಸ್ಟ್ರೀಟ್ಗೆ ತೆರಳಿದ್ದ ವೇಳೆ ಆರೋಪಿ ವಿಡಿಯೋ ಮಾಡಿದ್ದ. ಇದಾದ ನಂತರ ಇಂಡಿಯನ್ ವಾಕ್ ಎಂ ಒನ್ ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದ. ಈ ವಿಡಿಯೋ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದುಕೊಂಡಿತ್ತು. ಈ ಯುವತಿಯ ವಿಡಿಯೋವನ್ನು ಕಂಡು ಹಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಅಷ್ಟೇ ಅಲ್ಲದೆ ಕೆಲವು ಕಿಡಿಗೇಡಿಗಳು ಆ ಯುವತಿಯ ಇನ್ಸ್ಟಾಗ್ರಾಮ್ ಖಾತೆಗೂ ಮೆಸೇಜ್ ಮಾಡುತ್ತಿದ್ದರು.
ಇದನ್ನೂ ಓದಿ: ಡಾಕ್ಟರೇ ಡ್ರಗ್ ಪೆಡ್ಲರ್! ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ, ಬೀದರ್ ಮೂಲದ ವೈದ್ಯನ ಬಂಧನ
ಇದನ್ನು ನೋಡಿದ್ದ ಆ ಯುವತಿಯ ಸ್ನೇಹಿತರು ಕುಟುಂಬಸ್ಥರು ಸಂಬಂಧಿಕರು ಬೈದಿದ್ದರು. ವಿಡಿಯೋ ಡಿಲೀಟ್ ಮಾಡಿಸುವಂತೆ ಹೇಳಿದ್ದರು. ಆ ಯುವತಿ ಇನ್ಸ್ಟಾಗ್ರಾಂ ಮೂಲಕ ಗುರುದೀಪ್ ಸಿಂಗ್ನನ್ನು ಸಂಪರ್ಕ ಮಾಡಿ ವಿಡಿಯೋ ಡಿಲೀಟ್ ಮಾಡುವಂತೆ ಕೇಳಿದ್ದಳು. ಈ ವೇಳೆ ಆರೋಪಿ ಗುರುದೀಪ್ ಸಿಂಗ್ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ತನ್ನ ಬಳಿ ಅಷ್ಟು ಹಣ ಇಲ್ಲದೆ ಕೊನೆಗೆ ಅನಿವಾರ್ಯವಾಗಿ ವಿಡಿಯೋ ಮಾಡಿ ತನ್ನ ಅಸಹಾಯಕತೆ ತೋಡಿಕೊಂಡಿದ್ದ ಯುವತಿ ಪೊಲೀಸರಿಗೆ ವಿಷಯ ತಿಳಿಸಿದ್ದಳು. ಇದರಿಂದ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಕಳೆದ ತಿಂಗಳೇ 16ನೇ ತಾರೀಕು ಬನಶಂಕರಿ ಪೊಲೀಸರು ಸುಮೊಟೊ ಕೇಸ್ ದಾಖಲಿಸಿದ್ದರು. ಆದರೆ, ಆತನನ್ನು ಬಂಧಿಸಿರಲಿಲ್ಲ. ಆ ಯುವತಿಯ ವಿಡಿಯೋ ನೋಡಿ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಲು ಸೂಚಿಸಿದ್ದರು. ಸುಮೊಟೊ ಪ್ರಕರಣದಲ್ಲೇ ಆರೋಪಿಯ ಬಂಧನವಾಗಿತ್ತು. ಸದ್ಯ ಹಲವು ಯುವತಿಯರ ಬಳಿ ಹಣ ಪಡೆದು ವಿಡಿಯೋ ಡಿಲೀಟ್ ಮಾಡಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Sat, 12 July 25



