ಗಣೇಶ ಹಬ್ಬಕ್ಕೆ ಮೈಕ್ ಅನುಮತಿ ಪಡೆಯುವುದಿಲ್ಲ: ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ ಪ್ರಮೋದ್ ಮುತಾಲಿಕ್
ಸುಪ್ರೀಂ ಕೋರ್ಟ್ ಆದೇಶ ನೀಡಿ 15 ವರ್ಷಗಳಾದರೂ ಮಸೀದಿಯಲ್ಲಿ ಮೈಕ್ ಬಳಸಲಾಗುತ್ತಿದೆ. ಆದರೆ ನಾವು ಹಬ್ಬದಲ್ಲಿ ಮೈಕ್ ಬಳಕೆ ಮಾಡಬೇಕಾದರೆ ಅನುಮತಿ ಪಡೆಯಬೇಕು, ಏಕೆ ಇಂತಹ ಧೋರಣೆ ಎಂದು ಪ್ರಶ್ನಿಸಿದ ಪ್ರಮೋದ್ ಮುತಾಲಿಕ್, ಮೈಕ್ಗೆ ಅನುಮತಿ ಪಡೆಯುವುದಿಲ್ಲ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಧಾರವಾಡ: ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರ ನಿರ್ಬಂಧಗಳನ್ನು ವಿಧಿಸುತ್ತಿರುವುದು ಸರಿಯಲ್ಲ, ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಮುಕ್ತವಾದ ಅವಕಾಶ ಕೊಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಜಾತಿ, ಭಾಷೆ, ಪಕ್ಷ ಭೇದವಿಲ್ಲದೆ ಆಚರಿಸಿಕೊಂಡು ಬರಲಾಗುತ್ತಿರುವ ಗಣೇಶ ಹಬ್ಬಕ್ಕೆ ನಿರ್ಬಂಧಗಳನ್ನು ವಿಧಿಸುವ ಮೂಲಕ ಸರಕಾರದಿಂದ ಯುವಕರ ಉತ್ಸಾಹವನ್ನು ಭಗ್ನ ಮಾಡಲಾಗುತ್ತಿದೆ. ಶಬ್ದ, ಪರಿಸರ ಮಾಲಿನ್ಯದ ಹೆಸರಲ್ಲಿ ಕಿರಿಕಿರಿ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದ್ ಮುತಾಲಿಕ್, ಗಣೇಶೋತ್ಸವ ನಮ್ಮ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಜಾತಿ, ಭಾಷೆ, ಪಕ್ಷ ಬೇಧವಿಲ್ಲದೆ ನೂರಾರು ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿದೆ. ಇದನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರಲ್ಲಿ ಧೈರ್ಯ ತುಂಬಿಸುವ ನಿಟ್ಟಿನಲ್ಲಿ ಬಾಲಗಂಗಾಧರ್ ತಿಲಕ್ ಅವರು ಆರಂಭಿಸಿದ್ದರು. ವರ್ಷಕ್ಕೊಮ್ಮೆ ಈ ಹಬ್ಬವನ್ನು ಯುವಕರು ಒಟ್ಟಾಗಿ ಆಚರಿಸುತ್ತಾರೆ. ಆದರೆ ಈ ಹಬ್ಬಕ್ಕೆ ನಿರ್ಬಂಧಗಳನ್ನು ವಿಧಿಸುವ ಮೂಲಕ ಸರ್ಕಾರದಿಂದ ಬಹಳ ಕಿರಿಕಿಯಾಗುತ್ತಿದೆ. ಸರಕಾರದಿಂದ ಯುವಕರ ಉತ್ಸಾಹ ಭಗ್ನ ಮಾಡಲಾಗುತ್ತಿದೆ. ಸರಕಾರ ಹಬ್ಬಕ್ಕೆ ಮುಕ್ತವಾದ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ಶಬ್ದ, ಪರಿಸರ ಮಾಲಿನ್ಯದ ಹೆಸರಿನಲ್ಲಿ ಸರ್ಕಾರ ಕಿರಿಕಿರಿ ಮಾಡುತ್ತಿದೆ. ಹಬ್ಬವನ್ನು ಆಚರಣೆ ಮಾಡಲು ಅನೇಕ ಕಡೆಯಲ್ಲಿ ಅನುಮತಿ ಪಡೆಯಬೇಕಿದೆ. ಧಾರ್ಮಿಕ ಪದ್ಧತಿಗೆ ಅನುಮತಿ ಏಕೆ ಬೇಕು? ನಮಗೆ ಸ್ವಾತಂತ್ರ್ಯವೇ ಇಲ್ಲವೇ? ಇಂತಹ ಷರತ್ತುಗಳು ಏಕೆ ಹಾಕಬೇಕು? ಸರ್ಕಾರದ ಈ ನೀತಿಗಳನ್ನು ನಾವು ಧಿಕ್ಕರಿಸುತ್ತೇವೆ. ನಿಮ್ಮ ವಿರುದ್ಧ ಹೋರಾಟ ಶುರು ಮಾಡುತ್ತೇವೆ. ಸಂಸ್ಕೃತಿ ಆಧಾರಿತ ಪಕ್ಷ ಅಂತಾ ಹೇಳುತ್ತೀರಿ. ಆದರೆ ನೀವು ಈಗ ಮಾಡುತ್ತಿರುವುದು ಏನು? ಕಾಂಗ್ರೆಸ್ನವರಿದ್ದಾಗ ವಿಪರೀತ ಕಿರಿಕಿರಿ ಮಾಡಿದರು. ನೀವು ಅದಕ್ಕಿಂತ ಹೆಚ್ಚು ಕಿರುಕುಳ ಕೊಡುತ್ತಿದ್ದೀರಿ. ಬಿಜೆಪಿಯವರು ಈ ಬಗ್ಗೆ ಗಮನಹರಿಸಬೇಕು. ಡಿಜೆ ಹಾಕಬೇಡಿ ಅನ್ನೋದನ್ನು ನಾವು ಒಪ್ಪಿಕೊಳ್ಳುತ್ತೇವೆ. ಮೈಕ್ ಅನುಮತಿ ತೆಗೆದುಕೊಳ್ಳೋದಿಲ್ಲ ಎಂದರು.
ಹಿಂದೂಗಳ ಹಬ್ಬಕ್ಕೆ ಅನುಮತಿ ಪಡೆಯಬೇಕು ಎಂದು ಹೇಳುವ ಸರ್ಕಾರ ಮೊದಲು ಮುಸ್ಲಿಂಮರ ಅವರ ಹಬ್ಬದ ಆಚರಣೆಗಾಗಿ ಸಲ್ಲಿಸಿದ ಅನುಮತಿ ಪತ್ರ ತೋರಿಸಬೇಕು. ಬಳಿಕ ನಾವು ಅನುಮತಿ ತೆಗೆದುಕೊಳ್ಳುತ್ತೇವೆ ಎಂದ ಮುತಾಲಿಕ್, ಯಾರೂ ಮೈಕ್ ಅನುಮತಿ ತೆಗೆದುಕೊಳ್ಳಬೇಡಿ. ಇದು ಸರಕಾರಕ್ಕೆ ನಮ್ಮ ಸವಾಲ್ ಎಂದರು. ಅಲ್ಲದೆ ಸುಪ್ರೀಂ ಕೋರ್ಟ್ ಆದೇಶ ನೀಡಿ 15 ವರ್ಷಗಳಾದರೂ ಮಸೀದಿಯಲ್ಲಿ ಮೈಕ್ ಬಳಸಲಾಗುತ್ತಿದೆ. ನಮಗೇಕೆ ಮೈಕ್ ಅನುಮತಿ ಬೇಕು? ಈ ಧೋರಣೆ ಬಗ್ಗೆ ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಗಣೇಶ ಮಂಡಳಿಗಳಿಗೂ ಎಚ್ಚರಿಗೆ ನೀಡಿದ ಮುತಾಲಿಕ್
ಯಾರೂ ಅನೈತಿಕ ಚಟುವಟಿಕೆ ಮಾಡಬೇಡದಂತೆ ಗಣೇಶ ಮಂಡಳಿಗಳಿಗೆ ಪ್ರಮೋದ್ ಮುತಾಲಿಕ್ ಎಚ್ಚರಿಗೆ ನೀಡಿದ್ದಾರೆ. ಗಣೇಶ ಪೆಂಡಾಲ್ನಲ್ಲಿ ಅನೈತಿಕ ಚಟುವಟಿಕೆ ಮಾಡಬೇಡಿ, ವ್ಯಾಪಾರ ವಿಚಾರದಲ್ಲಿ ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ಖರೀದಿ ಮಾಡಿ. ಒಂದು ಬಾರಿ ಹಿಂದೂಗಳ ಸರಣಿ ಹತ್ಯೆ ನೆನಪಿಸಿಕೊಳ್ಳಿ. ನಿಮ್ಮ ಮನೆಗೂ ಈ ಕೊಲೆ ಬರಬಾರದು ಅಂದರೆ ನೀವು ಯೋಚಿಸಿ ಎಂದರು. ಪಿಒಪಿ ಗಣೇಶ ವಿಗ್ರಹ ಮಾರಾಟ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಪಿಒಪಿ ಗಣಪತಿ ಬಂದ್ ಮಾಡಬೇಕು. ಇಂತಹ ಗಣಪತಿಗಳ ಮಾರಾಟವನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಯವರಿಗೆ ಆಗ್ರಹಿಸಿದರು.
ಹರಿದ ಧ್ವಜಗಳು ಮಾರುಕಟ್ಟೆಗೆ
ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಮಾತನಾಡಿದ ಮುತಾಲಿಕ್, ಕೋಟಿಗಟ್ಟಲೆ ಧ್ವಜ ಹಾರಿಬೇಕು ಅನ್ನೋ ಅಭಿಯಾನ ಸ್ವಾಗತಾರ್ಹ. ಆದರೆ ಪೂರ್ವ ಸಿದ್ಧತೆ ಇಲ್ಲದೇ ಮಾಡಿದ್ದು ತಪ್ಪು. ಈ ಹಿಂದೆ ಖಾದಿ ಬಿಟ್ಟು ಯಾವ ಬಟ್ಟೆ ಅನುಮತಿ ಇರಲಿಲ್ಲ. ಬಿಜೆಪಿಯವರೇ ಕೊಂಚ ಗಮನಿಸಿ. ಹರಿದ ಧ್ವಜಗಳು ಮಾರುಕಟ್ಟೆಗೆ ಬಂದಿವೆ. ನಿಮಗೆ ಮಾನ, ಮರ್ಯಾದೆ ಇದೆಯಾ? ಇದಕ್ಕೋಸ್ಕರ ದೇಶದ ಗೌರವ ಹಾಳು ಮಾಡುತ್ತೀರಾ? ಅಳತೆಯೇ ಇಲ್ಲದ ಧ್ವಜಗಳು ಬಂದಿವೆ. ಉತ್ತಮ ಗುಣಮಟ್ಟದ ಧ್ವಜಗಳೇ ಇಲ್ಲ. ದೇಶ ಭಕ್ತಿಯನ್ನು ಈ ರೀತಿ ತೋರಿಸಬೇಕಾ? ಇದರ ಅವಶ್ಯಕತೆ ಇದೆಯಾ? ಅಶೋಕ ಚಕ್ರ ಮೊಟ್ಟೆಯಾಕಾರದಲ್ಲಿದೆ. ಇದು ನೀವು ಧ್ವಜಕ್ಕೆ ಮಾಡುತ್ತಿರೋ ಅಪಮಾನ ಎಂದರು.