ಧಾರವಾಡ ಜಿಪಂ CEO ವಿರುದ್ಧ ದೂರು: ಬಿಲ್ಗಳ ಜಾತ್ರೆ.. ಕಾಯುವವರೇ ಮೇಯೋಕೆ ನಿಂತಿದ್ದಾರಾ?
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮೂರು ವರ್ಷಗಳ ಹಿಂದೆ ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ವೈ.ಡಿ.ಕುನ್ನಿಬಾವಿರವರೇ ಇದೀಗ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು, ತಮ್ಮ ದೂರಿನಲ್ಲಿ ಇಲ್ಲಿ ನಡೆದಿರಬಹುದಾದ ಅನೇಕ ಅಂಶಗಳನ್ನು ಅವರು ಪ್ರಸ್ತಾಪಿಸಿದ್ದಾರೆ.

ಧಾರವಾಡ: ಜಿಲ್ಲಾ ಪಂಚಾಯತ್ ಎನ್ನುವುದು ಭ್ರಷ್ಟಾಚಾರದ ಕೂಪವಾಗಿದೆಯಾ ಎನ್ನುವ ಪ್ರಶ್ನೆ ಎದುರಾಗಿದೆ. ಏಕೆಂದರೆ ಇಲ್ಲಿ ನಡೆಯುತ್ತಿರುವ ಹಗರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಅದರಲ್ಲೂ ಅಮಾನತ್ತಾದ ಅಧಿಕಾರಿಯೊಬ್ಬರು ಮಾರ್ಚ್ ತಿಂಗಳಲ್ಲಿ ಬಿಲ್ಗಳ ಜಾತ್ರೆಯನ್ನೇ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಅವರ ಮೇಲೆ ಮತ್ತು ಜಿಲ್ಲಾ ಪಂಚಾಯತ್ ಸಿಇಒ ವಿರುದ್ಧ ಇದೇ ಕಾರಣಕ್ಕೆ ಲೋಕಾಯುಕ್ತದಲ್ಲಿ ದೂರು ಕೂಡ ದಾಖಲಾಗಿದೆ. ದೂರು ದಾಖಲು ಮಾಡಿದ್ದು ಬೇರೆ ಯಾರೂ ಅಲ್ಲ. ಅದೇ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು. ಧಾರವಾಡ ಜಿಲ್ಲಾ ಪಂಚಾಯತ್ನಲ್ಲಿ ಕೆಲಸಕ್ಕಿಂತ ಭ್ರಷ್ಟಾಚಾರವೇ ಹೆಚ್ಚು ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ನಲ್ಲಿ ಕೆಲಸಕ್ಕಿಂತ ಭ್ರಷ್ಟಾಚಾರವೇ ಹೆಚ್ಚು ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಹ ಪ್ರಕರಣವೊಂದು ಬಯಲಿಗೆ ಬಂದಿದೆ. ಜಿಲ್ಲಾ ಪಂಚಾಯತ್ ಇಲಾಖೆಯ ವ್ಯಾಪ್ತಿಯ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಮನೋಹರ ಮಂಡೋಲಿ ನವೆಂಬರ್ 2020 ರಲ್ಲಿ ಲೈಸೆನ್ಸ್ ನವೀಕರಿಸಲು ಗುತ್ತಿಗೆದಾರರೊಬ್ಬರಿಂದ 6 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದರು.
ಇತ್ತೀಚಿಗೆ ಇವರ ಮನೆ ಮೇಲೆ ಎಸಿಬಿ ದಾಳಿ ಕೂಡ ಮಾಡಿತ್ತು. ಈ ವೇಳೆ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿತ್ತು. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಈ ಅಧಿಕಾರಿಯನ್ನು ಸರ್ಕಾರ ಕೂಡಲೇ ಅಮಾನತು ಮಾಡಬೇಕಿತ್ತು. ಆದರೆ ಯಾವ ಕಾರಣದಿಂದಲೋ ಗೊತ್ತಿಲ್ಲ, ಫೆಬ್ರವರಿ 17 ರಂದು ಅಮಾನತ್ತಿಗೆ ಆದೇಶ ಮಾಡಿತು. ಆದರೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಒ ಡಾ.ಸುಶೀಲಾ ಅವರು ಮಾತ್ರ ಮನೋಹರ ಅವರನ್ನು ಬಿಡುಗಡೆ ಮಾಡಿದ್ದು ಬರೋಬ್ಬರಿ 17 ದಿನಗಳ ಬಳಿಕ. ಅಂದರೆ ಮಾರ್ಚ್ 6 ರಂದು ಅವರನ್ನು ಸಿಇಒ ಕೆಲಸದಿಂದ ಬಿಡುಗಡೆ ಮಾಡಿದ್ದಾರೆ. ಇದರ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿದೆ ಅಂತಾ ಜಿಲ್ಲಾ ಪಂಚಾಯತ್ ನಿವೃತ್ತ ಅಧಿಕಾರಿ ವೈ.ಡಿ.ಕುನ್ನಿಬಾವಿ ಎಂಬುವವರು ಇದೀಗ ಇವರೆಲ್ಲರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಮನೋಹರ ಮಂಡೋಲಿ
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮೂರು ವರ್ಷಗಳ ಹಿಂದೆ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ವೈ.ಡಿ.ಕುನ್ನಿಬಾವಿರವರೇ ಇದೀಗ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು, ತಮ್ಮ ದೂರಿನಲ್ಲಿ ಇಲ್ಲಿ ನಡೆದಿರಬಹುದಾದ ಅನೇಕ ಅಂಶಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಇದರಲ್ಲಿ ಮುಖ್ಯವಾಗಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಸುಶೀಲಾ ಅವರೂ ಸೇರಿದ್ದಾರೆ ಅಂತಾ ಆರೋಪಿಸಿದ್ದಾರೆ. ಅವರ ಹೆಸರನ್ನೇ ದೂರಿನಲ್ಲಿ ಮೊದಲಿಗೆ ಉಲ್ಲೇಖಿಸಲಾಗಿದೆ.
ಇನ್ನು ಸರಕಾರ ಅಮಾನತು ಮಾಡಿದ ದಿನದಿಂದ ಸಿಇಒ ಮನೋಹರ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ 17 ದಿನಗಳ ಈ ಅವಧಿಯಲ್ಲಿ ಸುಮಾರು 5 ರಿಂದ 6 ಕೋಟಿ ರೂಪಾಯಿ ಮೊತ್ತದ ಬಿಲ್ಗಳು ಪಾಸ್ ಆಗಿವೆ ಅಂತಾನೂ ಕುನ್ನಿಬಾವಿ ದೂರಿದ್ದಾರೆ. ಅಧಿಕಾರಿಯೊಬ್ಬರು ಅಮಾನತು ಆಗಿದ್ದರೂ ಸಿಇಒ ಅವರಿಗೆ ಮಾಹಿತಿಯೇ ಇರಲಿಲ್ಲವೆಂದರೆ ಹೇಗೆ ಎನ್ನುವ ಪ್ರಶ್ನೆ ಅವರದ್ದು. ಇನ್ನು ಸಿಇಒ ರವರಿಗೆ ಎಸಿಬಿ ಅಧಿಕಾರಿಗಳು ಬಂದು ಮಾಹಿತಿ ನೀಡಿದ ಬಳಿಕವಷ್ಟೇ ಅಮಾನತ್ತಾಗಿರುವುದು ತಿಳಿದು ಬಂದಿದೆಯಂತೆ. ಬಳಿಕವಷ್ಟೇ ಅವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆಯಂತೆ. ಇದೀಗ ಇವೆಲ್ಲ ಅನೇಕ ಅನುಮಾನಗಳಿಗೆ ಕಾರಣವಾಗಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಕುನ್ನಿಬಾವಿ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಿಇಒರವರ ಮತ್ತೊಂದು ಎಡವಟ್ಟು: ಕುನ್ನಿಬಾವಿ ಆರೋಪ ಯಾವಾಗ ದೂರು ನೀಡಿರುವುದು ಗೊತ್ತಾಯಿತೋ ಆಗ ಅದರಿಂದ ಆತಂಕಗೊಂಡ ಸಿಇಒ ಡಾ.ಸುಶೀಲಾ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಏಕೆಂದರೆ ಯಾವಾಗ ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್ರವರಿಗೆ ಈ ಲೋಕಾಯುಕ್ತ ದೂರಿನ ಬಗ್ಗೆ ಮಾಹಿತಿ ಗೊತ್ತಾಯಿತೋ ಕೂಡಲೇ ಅವರು ಸಿಇಒ ಅವರಿಗೆ ಪತ್ರ ಬರೆದು, ಮೂರು ದಿನಗಳೊಳಗಾಗಿ ವರದಿ ನೀಡುವಂತೆ ಸೂಚನೆ ನೀಡಿದರು. ಇದರಿಂದ ಮತ್ತಷ್ಟು ಆತಂಕಕ್ಕೆ ಒಳಗಾದ ಸಿಇಒ ಅವರು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಈ ಪ್ರಕರಣದ ಬಗ್ಗೆ ವಿಸ್ತ್ರತವಾಗಿ ತನಿಖೆ ನಡೆಸುವಂತೆ ತಮ್ಮ ಕೆಳಗಿನ ಅಧಿಕಾರಿಯೊಬ್ಬರಿಗೆ ಆದೇಶ ಮಾಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಪ್ರಕರಣದಲ್ಲಿ ತಾವೇ ಆರೋಪಿಯಾಗಿದ್ದು, ಈ ರೀತಿ ಆದೇಶ ಮಾಡಲು ಬರುವುದೇ ಇಲ್ಲ ಎನ್ನುವುದು ಕುನ್ನಿಬಾವಿಯವರ ವಾದ. ಜಿಲ್ಲಾ ಪಂಚಾಯತ್ನ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳರ್ ಅವರಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಆದರೆ ಅವರು ಇದೇ ಸಿಇಒ ಡಾ.ಸುಶೀಲಾ ಅವರ ಕೈಕೆಳಗೆ ಕೆಲಸ ಮಾಡುತ್ತಾರೆ. ಹೀಗಾಗಿ ಅವರು ಎಷ್ಟರಮಟ್ಟಿಗೆ ನಿಷ್ಪಕ್ಷವಾದ ವರದಿ ನೀಡಬಲ್ಲರು ಎನ್ನುವ ಪ್ರಶ್ನೆ ಎದುರಾಗಿದೆ.

ಜಿಲ್ಲಾ ಪಂಚಾಯತ್ ನಿವೃತ್ತ ಅಧಿಕಾರಿ ವೈ.ಡಿ.ಕುನ್ನಿಬಾವಿ
ನಿವೃತ್ತ ಹಿರಿಯ ಅಧಿಕಾರಿ ವೈ.ಡಿ.ಕುನ್ನಿಬಾವಿ ಅವರ ವಾದವೇನು? ಸರಕಾರದಿಂದ ಅಮಾನತ್ತು ಆದೇಶದ ಪ್ರತಿ ಇ-ಮೇಲ್ ಮೂಲಕ ಜಿಲ್ಲಾ ಪಂಚಾಯತ್ ಸಿಇಒ ಅವರಿಗೂ ಬಂದಿರುತ್ತದೆ. ಅವರು ಅದನ್ನು ಗಮನಿಸಿಲ್ಲ ಅಂದರೆ ಏನರ್ಥ? ಹಾಗಾದರೆ ಜಿಲ್ಲಾ ಪಂಚಾಯತ್ ನಲ್ಲಿ ಅದೆಂಥ ಅವ್ಯವಸ್ಥೆ ಇದೆ? ಅನ್ನುವ ವೈ.ಡಿ. ಕುನ್ನಿಬಾವಿ, ಈ ಪ್ರಕರಣದಲ್ಲಿ ಸಿಇಒ ಅವರ ಆಪ್ತ ಸಹಾಯಕ ಅಭಿನಂದನ್ ಅವರ ಕೈವಾಡವೂ ಇದೆ ಅಂತಾ ಆರೋಪಿಸುತ್ತಾರೆ. ಇನ್ನು ಇದೀಗ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿರೋ ಸಿಇಒ ಅವರ ಕ್ರಮವನ್ನು ಕೂಡ ಅವರು ಪ್ರಶ್ನಿಸುತ್ತಾರೆ. ಏಕೆಂದರೆ ಸಿಇಒ ಅವರೇ ತಾವು ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಮೊದಲ ಆರೋಪಿಯಾಗಿದ್ದಾರೆ. ಹೀಗಾಗಿ ಅವರಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲು ಯಾವುದೇ ಅಧಿಕಾರವೇ ಇಲ್ಲ ಅನ್ನೋದು ಅವರ ವಾದ.

ದೂರು ಪತ್ರ
ಯಾರ ಕರೆಗಳನ್ನೂ ಸ್ವೀಕರಿಸೋದೇ ಇಲ್ಲ ಪ್ರಕರಣದ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಡಾ.ಸುಶೀಲಾರವರನ್ನು ಸಂಪರ್ಕಿಸಲು ಎರಡು ದಿನ ಪ್ರಯತ್ನಿಸಿದರೂ ಕರೆಗಳನ್ನು ಸ್ವೀಕರಿಸಲೇ ಇಲ್ಲ. ಡಾ.ಸುಶೀಲಾ ಅಧಿಕಾರ ವಹಿಸಿಕೊಂಡ ದಿನದಿಂದಲೂ ಯಾರ ಕರೆಗಳನ್ನು ಸ್ವೀಕರಿಸೋದೇ ಇಲ್ಲ ಎನ್ನುವ ಆರೋಪ ಕೇಳಿ ಬರುತ್ತಲೇ ಇದೆ. ಟಿವಿ9 ಡಿಜಿಟಲ್ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಅಭಿಪ್ರಾಯ ಸಂಗ್ರಹಿಸಲು ಹಲವಾರು ಬಾರಿ ಫೋನ್ ಕರೆ ಮಾಡಿದರೂ ಅವರು ಸ್ವೀಕರಿಸಲೇ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ಸಾರ್ವಜನಿಕರ ಸಂಪರ್ಕಕ್ಕೆ ಬಾರದೇ, ಯಾವುದೇ ಕರೆಗಳನ್ನು ಸ್ವೀಕರಿಸಿದೇ ಇರೋದನ್ನು ನೋಡಿದರೆ, ಇವರಿಂದ ಜನಸಾಮಾನ್ಯರಿಗೆ ಅದೆಂಥಾ ಸೇವೆ ಲಭ್ಯವಾಗುತ್ತದೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಇದನ್ನೂ ಓದಿ
ನ್ಯಾಯ ಕಾಪಾಡಬೇಕಿದ್ದ ಇಲಾಖೆಯಲ್ಲೇ ಭ್ರಷ್ಟಚಾರ.. ಆರೋಪಿಯನ್ನ ಬಂಧಿಸದೆ ಪೊಲೀಸರ ನಿರ್ಲಕ್ಷ್ಯ
ಸೇನಾ ನೇಮಕಾತಿಯಲ್ಲಿ ಭ್ರಷ್ಟಾಚಾರ: 23 ಆರೋಪಿಗಳಲ್ಲಿ 7 ಮಂದಿ ಸೇನಾಧಿಕಾರಿಗಳು