AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಶ್ರೀಮಂತ ಸಿಎಂಗಳು: ನಾಯ್ಡು ನಂ.1, ಸಿದ್ದರಾಮಯ್ಯ 3ನೇ ಸ್ಥಾನ, ಆಸ್ತಿ ಎಷ್ಟಿದೆ ಗೊತ್ತಾ?

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ಪ್ರಸ್ತುತ ಮುಖ್ಯಮಂತ್ರಿಗಳು ಸಲ್ಲಿಸಿರುವ ಪ್ರಮಾಣಪತ್ರಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿ ಈ ಮಾಹಿತಿಯನ್ನು ನೀಡಿದೆ. ಹಾಗಾದ್ರೆ, ಯಾವ ರಾಜ್ಯದ ಮುಖ್ಯಮಂತ್ರಿ ಎಷ್ಟು ಶ್ರೀಮಂತರು ಎನ್ನುವ ವಿವರ ಇಲ್ಲಿದೆ.

ದೇಶದ ಶ್ರೀಮಂತ ಸಿಎಂಗಳು: ನಾಯ್ಡು ನಂ.1, ಸಿದ್ದರಾಮಯ್ಯ 3ನೇ ಸ್ಥಾನ, ಆಸ್ತಿ ಎಷ್ಟಿದೆ ಗೊತ್ತಾ?
ಸಿದ್ದರಾಮಯ್ಯ, ನಾಯ್ಡು, ಮಮತಾ
ರಮೇಶ್ ಬಿ. ಜವಳಗೇರಾ
|

Updated on: Aug 24, 2025 | 10:30 AM

Share

ನವದೆಹಲಿ,(ಆಗಸ್ಟ್ 24): ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ  ಪಟ್ಟಿಯಲ್ಲಿ (richest Chief Minister List) ಕರ್ನಾಟಕದ ಸಿಎಂ ಸಿದ್ದರಾಮಯ್ಯ (Siddaramaiah) ಅವರು 3ನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms) ಒಟ್ಟು 30 ಸಿಎಂಗಳ ಪಟ್ಟಿ ಬಿಡುಗಡೆ ಮಾಡಿದ್ದು, 30 ಸಿಎಂಗಳ ಒಟ್ಟು ಆಸ್ತಿ 1,632 ಕೋಟಿ ರೂ.ಗಳಷ್ಟಿದ್ದು, ಆಂಧ್ರಪ್ರದೇಶದ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರು ಒಟ್ಟು 931 ಕೋಟಿ ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಅವರು 332 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 51 ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ ಆಧರಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌(ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಸಂಸ್ಥೆಯು ಭಾರತದ ಶ್ರೀಮಂತ ಮುಖ್ಯಮಂತ್ರಿಗಳ ಕುರಿತ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮಾಹಿತಿ ಇದೆ. ಜೊತೆಗೆ ದೇಶದ 30 ಮುಖ್ಯಮಂತ್ರಿಗಳು (ಮಣಿಪುರವನ್ನು ರಾಷ್ಟ್ರಪತಿ ಆಳ್ವಿಕೆ ಇದ್ದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ) ಒಟ್ಟಾರೆ 1,600 ಕೋಟಿ ರು. ಆಸ್ತಿ ಹೊಂದಿದ್ದಾರೆ. ವಿಶೇಷವೆಂದರೆ 30 ಮುಖ್ಯಮಂತ್ರಿಗಳ ಒಟ್ಟಾರೆ ಆಸ್ತಿಯಲ್ಲಿ ಅರ್ಧಕ್ಕೂ ಹೆಚ್ಚು ಆಂಧ್ರ ಮುಖ್ಯಮಂತ್ರಿ ಅವರ ಕೈಯಲ್ಲೇ ಇದೆ. ಅಲ್ಲದೆ, 30 ಸಿಎಂಗಳಲ್ಲಿ ಇಬ್ಬರು ಮುಖ್ಯಮಂತ್ರಿಗಳಷ್ಟೇ ಶತಕೋಟ್ಯಧಿಪತಿಗಳಿದ್ದಾರೆ.

ತೆಲುಗು ದೇಶಂ ಪಕ್ಷದ ಮುಖ್ಯಸ್ಥರೂ ಆಗಿರುವ ಚಂದ್ರಬಾಬು ನಾಯ್ಡು ಅವರು ಒಟ್ಟಾರೆ 931 ಕೋಟಿ ರು. ಆಸ್ತಿ ಹೊಂದಿದ್ದು, ಇದರಲ್ಲಿ 810 ಕೋಟಿ ರು. ಚರ ಮತ್ತು 121 ಕೋಟಿ ರು. ಸ್ಥಿರ ಆಸ್ತಿ ಆಗಿದೆ. ಇನ್ನು ಅರುಣಾಚಲ ಪ್ರದೇಶದ ಬಿಜೆಪಿ ಸಿಎಂ ಪೇಮ ಖಂಡು ಅವರು ಎರಡನೇ ಸ್ಥಾನದಲ್ಲಿದ್ದಾರೆ. ಇವರ ಒಟ್ಟಾರೆ ಆಸ್ತಿ 332 ಕೋಟಿ ರುಪಾಯಿ. ಖಂಡು ಅವರು 165 ಕೋಟಿ ರು. ಚರ ಹಾಗೂ 167 ಕೋಟಿ ರು.ಸ್ಥಿರ ಆಸ್ತಿ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದು, ಇವರ ಒಟ್ಟು ಆಸ್ತಿ 51 ಕೋಟಿ ರು. ಆಗಿದೆ. ಇದರಲ್ಲಿ 21 ಕೋಟಿ ರು. ಚರ ಆಸ್ತಿಯಾದರೆ, 30 ಕೋಟಿ ರೂ. ಸ್ಥಿರ ಆಸ್ತಿ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ 30 ಕೋಟಿ ರೂಪಾಯಿ ಆಸ್ತಿಯೊಂದಿಗೆ ಏಳನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (1.46 ಕೋಟಿ ರೂ.), ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (1.54 ಕೋಟಿ ರೂ.), ಬಿಹಾರದ ನಿತೀಶ್ ಕುಮಾರ್ (1.64 ಕೋಟಿ ರೂ.), ಪಂಜಾಬ್‌ನ ಭಗವಂತ್ ಮಾನ್ (1.97 ಕೋಟಿ ರೂ.), ಒಡಿಶಾದ ಮೋಹನ್ ಚರಣ್ ಮಾಝಿ (1.97 ಕೋಟಿ ರೂ.) ಮತ್ತು ಛತ್ತೀಸ್‌ಗಢದ ವಿಷ್ಣು ದೇವ್ ಸಾಯಿ (3.80 ಕೋಟಿ ರೂ.) ಕಡಿಮೆ ಆಸ್ತಿ ಹೊಂದಿರುವ ಇತರ ಸಿಎಂಗಳಾಗಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 1.18 ಕೋಟಿ ರೂ., ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 55.24 ಲಕ್ಷ ರೂ. ಗೂ ಹೆಚ್ಚು ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15.38 ಲಕ್ಷ ರೂ.ಗೂ ಹೆಚ್ಚು ಆಸ್ತಿ ಹೊಂದುವ ಮೂಲಕ ಅತಿ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳಾಗಿದ್ದಾರೆ.

ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಸಿಎಂ

ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆಯೂ ಆಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ಅತ್ಯಂತ ಬಡ ಸಿಎಂ. ಅವರ ಅವರ ಒಟ್ಟು ಘೋಷಿತ ಆಸ್ತಿ 15.38 ಲಕ್ಷ. ವಿಶೇಷವೆಂದರೆ ಅವರು ಯಾವುದೇ ಸ್ಥಿರ ಆಸ್ತಿ ಹೊಂದಿಲ್ಲ. ಇನ್ನು ಅತ್ಯಂತ ಕಡಿಮೆ ಆಸ್ತಿ ಹೊಂದಿರುವವರ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರೂ ಇದ್ದಾರೆ. ಅವರು ಒಟ್ಟಾರೆ 55.24 ಲಕ್ಷ ಚರ ಆಸ್ತಿ ಹೊಂದಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು 1.18 ಕೋಟಿ ರು. ಆಸ್ತಿ ಹೊಂದಿದ್ದಾರೆ.

ಹೆಚ್ಚಿನ ಸಾಲ ಹೊಂದಿದ ಸಿಎಂಗಳು

11 ಮುಖ್ಯಮಂತ್ರಿಗಳು 1 ಕೋಟಿಗೂ ಹೆಚ್ಚು ಸಾಲ ಘೋಷಿಸಿದ್ದಾರೆ. ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಹೆಸರಿನಲ್ಲಿ 180 ಕೋಟಿ ರು. ಸಾಲ ಇದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 23 ಕೋಟಿ ರೂ. ಸಾಲ ಮಾಡಿದ್ದರೆ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 10 ಕೋಟಿಗೂ ಹೆಚ್ಚು ಸಾಲ ಘೋಷಿಸಿದ್ದಾರೆ.