ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಸಂಕಷ್ಟ ಹೆಚ್ಚಾಗುವ ಸಾಧ್ಯತೆ: ಪಿಎಂಎಲ್​ಎ ಅಡಿ ಕೇಸ್ ದಾಖಲಿಸಲು ಸಿದ್ಧತೆ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಇಡಿ ತನಿಖೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್​ಎ) ಅಡಿ ಮುಂದಿನ ಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದ್ದು, ಹವಾಲಾ ಹಣದ ವಹಿವಾಟಿನ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ.

ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಸಂಕಷ್ಟ ಹೆಚ್ಚಾಗುವ ಸಾಧ್ಯತೆ: ಪಿಎಂಎಲ್​ಎ ಅಡಿ ಕೇಸ್ ದಾಖಲಿಸಲು ಸಿದ್ಧತೆ
ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಸಂಕಷ್ಟ ಹೆಚ್ಚಾಗುವ ಸಾಧ್ಯತೆ
Image Credit source: tv9
Edited By:

Updated on: Sep 16, 2026 | 9:51 AM

ಮುಖ್ಯಾಂಶಗಳು

  • ಸತೀಶ್ ಜಾರಕಿಹೊಳಿ ವಿರುದ್ಧ ಪಿಎಂಎಲ್​ಎ ಕೇಸ್​ಗೆ ಇಡಿ ಸಿದ್ಧತೆ
  • ಹವಾಲಾ ವಹಿವಾಟಿನ ಬಗ್ಗೆ ಇಡಿಗೆ ಮಾಹಿತಿ
  • 13 ಪ್ರಮುಖ ಪ್ರಕರಣಗಳ ತನಿಖೆಗೆ ಸಿಗಲಿದೆ ವೇಗ

ಬೆಂಗಳೂರು, ಸೆಪ್ಟೆಂಬರ್ 16: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯದ ತನಿಖೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002ರ (PMLA) ಅಡಿಯಲ್ಲಿ ಪ್ರಕರಣ ದಾಖಲಿಸುವ ಕುರಿತು ಇಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹವಾಲಾ ಮೂಲಕ ದೊಡ್ಡ ಪ್ರಮಾಣದ ಹಣದ ವಹಿವಾಟು ನಡೆದಿರುವ ಮಾಹಿತಿ ಲಭ್ಯವಾಗಿದ್ದು, ತನಿಖೆಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಸತೀಶ್ ಜಾರಕಿಹೊಳಿ, ಅವರ ಕುಟುಂಬಸ್ಥರು ಹಾಗೂ ಆಪ್ತರಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು. ಬೆಂಗಳೂರು, ಬೆಳಗಾವಿ, ಗೋಕಾಕ್ ಮತ್ತು ಕೋಲ್ಕತ್ತಾದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ₹3.3 ಕೋಟಿ ನಗದು, ಸುಮಾರು ₹15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ಇಡಿ ತಿಳಿಸಿತ್ತು. ಈ ತನಿಖೆ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ವ್ಯವಹಾರಗಳು ಮತ್ತು ಹಣಕಾಸು ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದೆ.

ಕರ್ನಾಟಕ, ಗೋವಾ ಅಧಿಕಾರಿಗಳಿಗೆ ರಾಹುಲ್ ನವೀನ್ ಸೂಚನೆ ಏನು?

ಇಡಿ ನಿರ್ದೇಶಕ ರಾಹುಲ್ ನವೀನ್ ಅವರು ಕರ್ನಾಟಕ ಮತ್ತು ಗೋವಾ ಅಧಿಕಾರಿಗಳಿಗೆ ಪ್ರಕರಣಗಳ ತನಿಖೆಯನ್ನು ವೇಗಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇಷ್ಟೊಂದು ಮಾಹಿತಿ ಲಭ್ಯವಿದ್ದರೂ ತನಿಖೆಯಲ್ಲಿ ಪ್ರಗತಿ ಏಕೆ ಆಗುತ್ತಿಲ್ಲ ಎಂಬುದರ ಕುರಿತು ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

13 ಪ್ರಮುಖ ಪ್ರಕರಣಗಳ ಮೇಲೆ ಇಡಿ ಫೋಕಸ್

ED Raids On Satish Jarkiholi: ಸತೀಶ್ ಜಾರಕಿಹೊಳಿಗೆ ED ಸಂಕಷ್ಟ! ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೇಸ್​?
ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸುವ ಜವಾಬ್ದಾರಿಯನ್ನು ಇಡಿ ನಿರ್ದೇಶಕ ರಾಹುಲ್ ನವೀನ್ ಅವರಿಗೆ ನೀಡಲಾಗಿದೆ. ಅಪೆಕ್ಸ್ ಬ್ಯಾಂಕ್ ಪ್ರಕರಣದಲ್ಲಿ ಕೆ.ಎನ್. ರಾಜಣ್ಣ, ಬೆಟ್ಟಿಂಗ್ ಪ್ರಕರಣದಲ್ಲಿ ಕೆ.ಸಿ. ವೀರೇಂದ್ರ ಪಪ್ಪಿ, ಕೋಚಿಮುಲ್ ಪ್ರಕರಣದಲ್ಲಿ ಕೆ.ವೈ. ನಂಜೇಗೌಡ ವಿರುದ್ಧದ ಆರೋಪಗಳು, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ, ಮುಡಾ ಪ್ರಕರಣ ಹಾಗೂ ಕೆಪಿಎಸ್‌ಸಿ ಅಕ್ರಮ ಸೇರಿದಂತೆ ಒಟ್ಟು 13 ಪ್ರಮುಖ ಪ್ರಕರಣಗಳ ತನಿಖೆಗೆ ವೇಗ ನೀಡುವಂತೆ ಸೂಚನೆ ನೀಡಲಾಗಿದೆ.

ಈ ಪ್ರಕರಣಗಳಲ್ಲಿ ಕೆಲವು ಈಗಾಗಲೇ ಇಡಿ ತನಿಖೆಯಲ್ಲಿದ್ದು, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧದ ಆರೋಪಗಳು ತನಿಖೆಯ ಹಂತದಲ್ಲಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣ ಹಾಗೂ ಮುಡಾ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಇಡಿ ಹಿಂದೆಯೇ ತನಿಖೆ ನಡೆಸಿದೆ.

ಒಂದು ತಿಂಗಳಲ್ಲಿ ತನಿಖೆಗೆ ವೇಗ ನೀಡಲು ಸೂಚನೆ

ರಾಜ್ಯದ ಪ್ರಮುಖ 13 ಪ್ರಕರಣಗಳ ತನಿಖೆಯಲ್ಲಿ ಒಂದು ತಿಂಗಳೊಳಗೆ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಕರಣಗಳ ಪ್ರಸ್ತುತ ಸ್ಥಿತಿ, ಬಾಕಿ ಉಳಿದಿರುವ ತನಿಖಾ ಹಂತಗಳು ಹಾಗೂ ಮುಂದಿನ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 am, Wed, 16 September 26

Loading...
Unable to load recommendations.
Follow Us