ಬೆಂಗಳೂರಿನಲ್ಲಿ ಕಿರಿಯ ರೇಸರ್ ಶ್ರೇಯಸ್ ಸ್ಮರಣಾರ್ಥ ಅಪರೂಪದ ಮ್ಯೂಸಿಯಂ: ಮಗನ ಅರ್ಧಕ್ಕೆ ನಿಂತ ‘ಮೋಟೋ ಜಿಪಿ’ ಕನಸಿಗೆ ಜೀವ ತುಂಬಿದ ತಂದೆ
ರೇಸಿಂಗ್ ಅಪಘಾತದಲ್ಲಿ ಅಕಾಲಿಕವಾಗಿ ಅಗಲಿದ 13ರ ಯುವ ರೇಸರ್ ಶ್ರೇಯಸ್ ಹರೀಶ್ ಸ್ಮರಣಾರ್ಥ ಬೆಂಗಳೂರಿನಲ್ಲಿ ವಿಶೇಷ ಮ್ಯೂಸಿಯಂ ನಿರ್ಮಿಸಲಾಗಿದೆ. ಆತನ ತಂದೆ ಹರೀಶ್, ಮಗನ ಸಾಧನೆಗಳು, ರೇಸಿಂಗ್ ಪರಿಕರಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ. ಶ್ರೇಯಸ್‌ನ MotoGP ಕನಸುಗಳನ್ನು ನನಸು ಮಾಡಲು 'ಶ್ರೇಯಸ್ ಟ್ರಸ್ಟ್' ಸಹ ಸ್ಥಾಪಿಸಲಾಗಿದೆ. ಇದು ಯುವ ಪ್ರತಿಭೆಗಳಿಗೆ ಬೆಂಬಲ ನೀಡಿ, ಭಾರತೀಯ ರೇಸಿಂಗ್ ಭವಿಷ್ಯವನ್ನು ಉಜ್ವಲಗೊಳಿಸುವ ಗುರಿ ಹೊಂದಿದೆ.

ಬೆಂಗಳೂರು, ಸೆ.16: ರಾಜಧಾನಿ ಬೆಂಗಳೂರಿನ ಆ ಮ್ಯೂಸಿಯಂನಲ್ಲಿ (Museum) ವಿಚಿತ್ರವಾದ ಮೌನ ಆವರಿಸಿದೆ. ರೇಸಿಂಗ್ ಜಗತ್ತಿನ ಸದ್ದನ್ನು ನೆನಪಿಸುವ ಮೋಟಾರ್ ಬೈಕ್‌ಗಳು, ರೇಸಿಂಗ್ ಸೂಟ್‌ಗಳು, ಹೆಲ್ಮೆಟ್‌ಗಳು, ಟ್ರೋಫಿಗಳು ಹಾಗೂ ಸಾಲು ಸಾಲು ಪದಕಗಳು ಅಲ್ಲಿವೆ. ಆದರೆ, ಇವೆಲ್ಲವೂ ಕೇವಲ 13ರ ಹರೆಯದಲ್ಲೇ ಇಹಲೋಕ ತ್ಯಜಿಸಿದ ಕಿರಿಯ ವಯಸ್ಸಿನ ಪ್ರತಿಭಾವಂತ ಬೈಕ್ ರೇಸರ್ ಶ್ರೇಯಸ್ ಹರೀಶ್ (Shreyash Hareesh) ಎಂಬ ಬಾಲಕನ ಪೂರ್ಣಗೊಳ್ಳದ ಕಥೆಯನ್ನು ಮೌನವಾಗಿಯೇ ಸಾರುತ್ತಿವೆ. ಈ ಬಗ್ಗೆ ಒಂದು ವಿಶೇಷ ವರದಿಯನ್ನು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿದೆ. 2023ರ ಆಗಸ್ಟ್ 5 ರಂದು ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆದ ‘ಎಮ್‌ಎಮ್‌ಎಸ್‌ಸಿ ಎಫ್‌ಎಮ್‌ಎಸ್‌ಸಿಐ’ ರಾಷ್ಟ್ರೀಯ ಮೋಟಾರ್ ಸೈಕಲ್ ರೇಸಿಂಗ್ ಸ್ಪರ್ಧೆಯ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಶ್ರೇಯಸ್ ಮೃತಪಟ್ಟಿದ್ದ.
“ನನಗೆ ವಿಶ್ವ ಚಾಂಪಿಯನ್ ಮಾರ್ಕ್ ಮಾರ್ಕ್ವೆಜ್ ಎಂದರೆ ಇಷ್ಟ, ಅವರಂತೆ ರೇಸ್ ಮಾಡಬೇಕೆಂಬುದು ನನ್ನ ಆಸೆ. ಮಾರ್ಕ್ ಅವರ ಬೈಕ್ ನಂಬರ್ 93, ಹೀಗಾಗಿ ನಾನು 39 ನಂಬರ್ ಆಯ್ಕೆ ಮಾಡಿಕೊಂಡಿದ್ದೇನೆ. ನನಗೆ ವೇಗವೆಂದರೆ ಭಯವಿಲ್ಲ” ಎಂದು ಶ್ರೇಯಸ್ ಹಿಂದೆ ಹೇಳಿಕೊಂಡಿದ್ದ.
ಸ್ಪೇನ್ ಮತ್ತು ಇಟಲಿಯಿಂದ ತರಿಸಿದ್ದ ದುಬಾರಿ ಮೋಟಾರ್ ಬೈಕ್‌ಗಳು, ಶ್ರೇಯಸ್ ದೇಹಕ್ಕೆ ಸರಿಹೊಂದುವಂತೆ ಸಿದ್ಧಪಡಿಸಲಾಗಿದ್ದ ಕಪ್ಪು ಬಣ್ಣದ ರೇಸಿಂಗ್ ಸೂಟ್‌ಗಳು ಹಾಗೂ ಆತ ಗೆದ್ದ ಟ್ರೋಫಿಗಳನ್ನು ಒಟ್ಟುಗೂಡಿಸಿ ಆತನ ತಂದೆ ಹರೀಶ್ ಪರಂದಾಮನ್ ಈ ಅಪರೂಪದ ಮ್ಯೂಸಿಯಂ ನಿರ್ಮಿಸಿದ್ದಾರೆ. “ಇದು ಮಗನ ಸಾವಿನ ದುಃಖಕ್ಕಿಂತ, ಆತ ಬದುಕಿದ ಅದ್ಭುತ ಜೀವನದ ಸಂಭ್ರಮಾಚರಣೆ” ಎನ್ನುತ್ತಾರೆ ತಂದೆ. ಭಾರತದಲ್ಲಿ ರೇಸಿಂಗ್ ಕ್ರೀಡೆಗೆ ಸೂಕ್ತ ಮೂಲಸೌಕರ್ಯ ಹಾಗೂ ತರಬೇತಿ ವ್ಯವಸ್ಥೆ ಇಲ್ಲದಿರುವುದನ್ನು ಕಂಡ ಹರೀಶ್, ಮಗನ ಕನಸಿಗೆ ಹೆಗಲು ಕೊಟ್ಟಿದ್ದರು.
ಮಗನ ರೇಸಿಂಗ್ ತರಬೇತಿ ಹಾಗೂ ವಿದೇಶಿ ಪ್ರವಾಸಕ್ಕಾಗಿ ತಂದೆ ತಮ್ಮ ಉದ್ಯೋಗ ತೊರೆದಿದ್ದರು, ವಾಹನಗಳನ್ನು ಮಾರಾಟ ಮಾಡಿದ್ದರು. ಶ್ರೇಯಸ್ ಶಿಕ್ಷಣಕ್ಕಾಗಿ ಎತ್ತಿಟ್ಟಿದ್ದ ಹಣವನ್ನೂ ರೇಸಿಂಗ್‌ಗೆ ಹೂಡಿಕೆ ಮಾಡಿದ್ದರು. ಶಾಲೆಯಲ್ಲಿ ರೇಸಿಂಗ್ ಕಪ್‌ಗಳನ್ನು ಪ್ರದರ್ಶಿಸುವಾಗ ಶ್ರೇಯಸ್ ಎಲ್ಲರ ಕಣ್ಣಲ್ಲಿ ಹೀರೋ ಆಗಿ ಮಿಂಚುತ್ತಿದ್ದ. ಸ್ಪೇನ್‌ನ ವೆಲೆನ್ಸಿಯಾದಲ್ಲಿ ಶ್ರೇಯಸ್ ಧರಿಸಿದ್ದ ಭಾರತದ ತ್ರಿವರ್ಣ ಧ್ವಜವಿದ್ದ ವಿಶೇಷ ಕಪ್ಪು ಬಣ್ಣದ ರೇಸಿಂಗ್ ಸೂಟ್ ಇಂದಿಗೂ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದೆ.
ಇದನ್ನೂ ಓದಿ: ಪ್ಲಾಸ್ಟಿಕ್ ಮುಕ್ತ ರಾಮನಗರಕ್ಕೆ ಮಾದರಿ ಹೆಜ್ಜೆ: ನಗರಸಭೆಯಿಂದ BVM ಯಂತ್ರ ಜಾರಿ; ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ
‘ಶ್ರೇಯಸ್ ಟ್ರಸ್ಟ್’ ಮೂಲಕ ಮುಂದಿನ ಪೀಳಿಗೆಗೆ ನೆರವು
ಮಗನ ಅಗಲಿಕೆಯ ನೋವಿನಲ್ಲೇ ಕಾಲ ಕಳೆಯದೆ, ಆತನ ಸ್ಮರಣಾರ್ಥ ಕುಟುಂಬವು ಟ್ರಸ್ಟ್ ಒಂದನ್ನು ಸ್ಥಾಪಿಸಿದೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗುತ್ತಿರುವ ಈ ಟ್ರಸ್ಟ್, ಭಾರತದ ಮುಂದಿನ ಯುವ ರೇಸರ್‌ಗಳಿಗೆ ಆರ್ಥಿಕ ಹಾಗೂ ಮೂಲಸೌಕರ್ಯ ಬೆಂಬಲ ನೀಡುವ ಗುರಿ ಹೊಂದಿದೆ. “ಶ್ರೇಯಸ್ ಅನುಭವಿಸಿದ ಸವಾಲುಗಳು ಹಾಗೂ ಕಷ್ಟಗಳನ್ನು ಮುಂದಿನ ಯುವ ಪ್ರತಿಭೆಗಳು ಎದುರಿಸಬಾರದು. ಭಾರತೀಯ ರೇಸರ್ ಒಬ್ಬರು ‘ಮೋಟೋ ಜಿಪಿ’ (MotoGP) ಪೋಡಿಯಂ ಏರಬೇಕೆಂಬುದು ಶ್ರೇಯಸ್‌ನ ಅರ್ಧಕ್ಕೆ ನಿಂತ ಕನಸಾಗಿತ್ತು. ಅದನ್ನು ನನಸು ಮಾಡುವುದೇ ನಮ್ಮ ಸತ್ಯಸಂಕಲ್ಪ” ಎಂದು ಭಾವುಕರಾಗಿ ನುಡಿಯುತ್ತಾರೆ ಹರೀಶ್.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 am, Wed, 16 September 26




