ಪ್ರತ್ಯೇಕ ಘಟನೆ: ಬೆಳಗಾವಿಯಲ್ಲಿ ಸರಣಿ ಅಪಘಾತದಲ್ಲಿ ಇಬ್ಬರು ಸಾವು, ತುಮಕೂರಿನಲ್ಲಿ ಬೈಕ್ ಡಿಕ್ಕಿಯಾಗಿ ಇಬ್ಬರು ಮೃತ
8 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 6 ಜನರಿಗೆ ಗಾಯಗಳಾಗಿರುವಂತಹ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ನಲ್ಲಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಹೊರವಲಯದ ಜಡೆಗೊಂಡನಹಳ್ಳಿ ಬಳಿ ಎರಡು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಚಿಕ್ಕೋಡಿ, ಸೆಪ್ಟೆಂಬರ್ 15: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ಸ್ಥವನಿಧಿ ಘಾಟ್ ಬಳಿ 8 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ, ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, 6 ಜನರಿಗೆ ಗಾಯಗಳಾಗಿವೆ.
ಸದ್ಯ ಗಾಯಗೊಂಡಿರುವ 6 ಜನರಿಗೆ ನಿಪ್ಪಾಣಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಕಂಟೇನರ್ ಚಾಲಕನ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ. ನಿಪ್ಪಾಣಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
2 ಬೈಕ್ ಮುಖಾಮುಖಿ ಡಿಕ್ಕಿ: ಇಬ್ಬರು ವ್ಯಕ್ತಿಗಳು ಸಾವು
ತುಮಕೂರು: ಜಿಲ್ಲೆಯ ಮಧುಗಿರಿ ಹೊರವಲಯದ ಜಡೆಗೊಂಡನಹಳ್ಳಿ ಬಳಿ ಎರಡು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ವ್ಯಕ್ತಿಗಳ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ತೆರಿಯೂರಿನ ಗೌತಮ್(26) ಮತ್ತು ಬಂದರಹಳ್ಳಿಯ ಅನಿಲ್(26) ಮೃತರು. ಸ್ಥಳಕ್ಕೆ ಮಧುಗಿರಿ ಠಾಣೆ ಪಿಎಸ್ಐ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲೆಯ ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಡಿವೈಡರ್ಗೆ ಕಾರು ಡಿಕ್ಕಿ: ಏಳು ವರ್ಷದ ಬಾಲಕಿ ಸಾವು
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಡಿವೈಡರ್ಗೆ ಹುಂಡೈ ಕಾರು ಡಿಕ್ಕಿ ಹೊಡೆದ ಪರಿಣಾಮ ಏಳು ವರ್ಷದ ಬಾಲಕಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಶಾಲಿನಿ ಮೃತ ಬಾಲಕಿ. ಬಸವೇಶ್(16) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ದುರ್ಘಟನೆ: ತಂದೆ, ಮಗ ಸೇರಿ ಮೂವರು ಸಾವು
ಸಣ್ಣಪುಟ್ಟ ಗಾಯಗೊಂಡಿರುವ ಮಲ್ಲಿಕಾರ್ಜುನ್ಗೂ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮನೆಗೆ ನುಗ್ಗಿ ಕುಟುಂಬಸ್ಥರನ್ನ ಬೆದರಿಸಿ ದರೋಡೆ
ರಾಯಚೂರು: ಮೂವರು ದುಷ್ಕರ್ಮಿಗಳಿಂದ ಮನೆಗೆ ನುಗ್ಗಿ ಕುಟುಂಬಸ್ಥರನ್ನ ಬೆದರಿಸಿ ದರೋಡೆ ಮಾಡಿರುವಂತಹ ಘಟನೆ ನಗರದ ಲಕ್ಷ್ಮೀ ನರಸಿಂಹ ಕಾಲೋನಿಯಲ್ಲಿ ನಡೆದಿದೆ. ಬಸನಗೌಡ ಪಾಟೀಲ್ ಎಂಬುವರಿಗೆ ಸೇರಿದ ಮನೆಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಒನ್ ಡೇ ಟ್ರಿಪ್ ಮಾಡಿ ಕ್ಯಾಬ್ ಚಾಲಕನ ಬಳಿಯೇ ದರೋಡೆ: ಕಾರು ಸಮೇತ ಪರಾರಿಯಾಗಿದ್ದ ಆಸಾಮಿ ಅಂದರ್
ಮನೆಯಲ್ಲಿದ್ದವರಿಗೆ ಬೆದರಿಕೆ ಹಾಕಿ ಚಿನ್ನ, ಬೆಳ್ಳಿ ಆಭರಣ ಕಳ್ಳತನ ಮಾಡಲಾಗಿದೆ. ಒಂದು ಲಕ್ಷ ನಗದು, ಸುಮಾರು 180 ಗ್ರಾಂ ಚಿನ್ನಾಭರಣ, ಅರ್ಧ ಕೆಜಿಯಷ್ಟು ಬೆಳ್ಳಿ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ರಾಯಚೂರು ಎಸ್ಪಿ ಪುಟ್ಟಮಾದಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:05 pm, Sun, 15 September 24