ಎಸ್‌ಐಟಿ ನೋಟಿಸ್: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್, ಎಷ್ಟು ದಿನ?
ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ನಡೆಸಿದ್ದು, ಈ ಸಂಬಂಧ ಎಸ್‌ಐಟಿ ನೀಡಿರುವ ನೊಟೀಸ್ಗೆ ಪ್ರಜ್ವಲ್ ರೇವಣ್ಣ ಸಮಯ ಕೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಪ್ರಜ್ವಲ್ ಪರ ವಕೀಲ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಪ್ರಜ್ವಲ್ ವಿದೇಶದಲ್ಲಿರುವುದರಿಂದ ಅವರ ಪರವಾಗಿ ನಾನು ಎಸ್ಐಟಿಗೆ ಕಾಲಾವಕಾಶ ಕೇಳಿದ್ದೇನೆ ಎಂದು ಹೇಳಿದ್ದಾರೆ.
ಹಾಸನ, ಮೇ 01: ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಎಸ್‌ಐಟಿ (SIT) ತನಿಖೆ ಚುರುಕುಗೊಂಡಿದೆ. ಇದರ ಬೆನ್ನಲ್ಲೇ ವಿಚಾರಣೆಗೆ ಹಾಜರಾಗಲು ಏಳು ದಿನ ಸಮಯ ಬೇಕು ಎಂದು ಪ್ರಜ್ವಲ್ ರೇವಣ್ಣ ಪರ ವಕೀಲ ಜಿ. ಅರುಣ್ ಮೂಲಕ ಎಸ್‌ಐಟಿ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಲಾಗಿದೆ. ಸಿಆರ್ಪಿಸಿ 41(a) ಅಡಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೊಟೀಸ್ ನೀಡಿತ್ತು. ಅವರು ಖುದ್ದು ಹಾಜರಾಗಿ ಹೇಳಿಕೆ ನೀಡಲು ಏಳು ದಿನ ಸಮಯಾವಕಾಶ ನೀಡಿ ಎಂದು ಪತ್ರದ ಮೂಲಕ ಮನವಿ ಮಾಡಲಾಗಿದೆ.
ಈ ವಿಚಾರವಾಗಿ ಟಿವಿ9 ಜೊತೆ ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲ ಜಿ.ಅರುಣ್ ಪ್ರತಿಕ್ರಿಯಿಸಿದ್ದು, ವಿಚಾರಣೆಗೆ ಹಾಜರಾಗಬೇಕೆಂದು ಎಸ್‌ಐಟಿ ನೋಟಿಸ್ ನೀಡಿದೆ. ಹೊಳೆನರಸೀಪುರದ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಪ್ರಜ್ವಲ್ ವಿದೇಶದಲ್ಲಿರುವುದರಿಂದ ಅವರ ಪರವಾಗಿ ನಾನು ಎಸ್ಐಟಿಗೆ ಕಾಲಾವಕಾಶ ಕೇಳಿದ್ದೇನೆ. ಇಂದು ಮಧ್ಯಾಹ್ನ ಸಿಐಡಿ ಕಚೇರಿಗೆ ತೆರಳಿ 7 ದಿನ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದೇನೆ. ತನಿಖಾಧಿಕಾರಿಗಳಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಸ್‌ಐಟಿ ಅಧಿಕಾರಿಗಳು 7 ದಿನ ಸಮಯ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಹೆಚ್.ಡಿ.ರೇವಣ್ಣ ಹೇಳಿದ್ದಿಷ್ಟು
ಎಸ್‌ಐಟಿ ನೋಟಿಸ್ ವಿಚಾರವಾಗಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಹೆಚ್.ಡಿ.ರೇವಣ್ಣ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಎಸ್‌ಐಟಿ ಅಧಿಕಾರಿಗಳು ನಮ್ಮ ಮನೆಗೆ ನೋಟಿಸ್ ಅಂಟಿಸಿದ್ದಾರೆ. ನೋಟಿಸ್ನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಎಲ್ಲವನ್ನೂ ಎದುರಿಸುತ್ತೇನೆ, ಎಲ್ಲಾ ಸರಿ ಹೋಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್: ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ, ಪತ್ರದಲ್ಲೇನಿದೆ?
SITಗೆ ಮಾಹಿತಿ ನೀಡಲು ಸಂತ್ರಸ್ತ ಮಹಿಳೆಯರ ಹಿಂದೇಟು ಹಾಕ್ತಿದ್ದಾರಂತೆ. ನಮಗೆ ತೊಂದ್ರೆ ಕೊಟ್ರೆ ಸೂಸೈಡ್ ಮಾಡಿಕೊಳ್ತೀವಿ ಅಂತಾ ತನಿಖೆಗೆ ಕರೆದ ಎಸ್ಐಟಿಗೆ ಹೇಳ್ತಿದ್ದಾರಂತೆ. ವಿಡಿಯೋದಲ್ಲಿರುವ ಸಂತ್ರಸ್ತೆಯರ ಸಂಪರ್ಕಕ್ಕೆ ಎಸ್‌ಐಟಿ ಯತ್ನಿಸ್ತಿದ್ದು, ಆದ್ರೆ ಏನೂ ಹೇಳಲ್ಲ, ಏನೂ ಕೇಳ್ಬೇಡಿ ಅಂತಾ ಸಂತ್ರಸ್ತೆಯರು ಹೇಳ್ತಿದ್ದಾರೆ. ಅಲ್ಲದೆ ನಾವು ದೂರು ಕೊಟ್ಟಿಲ್ಲ, ನಮ್ಮನ್ನೇಕೆ ಎಳೆದು ತರ್ತೀರಿ. ನಮ್ಮನ್ನ ನಮ್ಮ ಪಾಡಿಗೆ ಬಿಟ್ಟುಬಿಡಿ. ಏನಾದ್ರೂ ತೊಂದ್ರೆ ಕೊಟ್ರೆ ಸೂಸೈಡ್ ಮಾಡಿಕೊಳ್ತೀವಿ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:04 pm, Wed, 1 May 24