ಶಕ್ತಿ ಯೋಜನೆಗೆ ನಾಳೆಗೆ ಒಂದು ವರ್ಷ; ನಾಲ್ಕು ನಿಗಮದ ಬಸ್ಸುಗಳಲ್ಲಿ 225 ಕೋಟಿ ಮಹಿಳೆಯರ ಉಚಿತ ಪ್ರಯಾಣ
ಶಕ್ತಿ ಯೋಜನೆಯ ವರ್ಷಾಚರಣೆ ಪ್ರಯುಕ್ತ ಈ ವಾರ ಅಥವಾ ಮುಂದಿನ ವಾರ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಸಂಭ್ರಮಿಸಲು ಚಿಂತನೆ ನಡೆಸಿದೆ. ಸದ್ಯದಲ್ಲೇ ದಿನಾಂಕ ಘೋಷಣೆ ಮಾಡಲಿದೆ. ಶಕ್ತಿ ಯೋಜನೆಯಡಿ ಎಷ್ಟು ಮಂದಿ ಈವರೆಗೆ ಉಚಿತ ಪ್ರಯಾಣ ಮಾಡಿದ್ದಾರೆ? ಎಷ್ಟು ಆದಾಯ ಸಂಗ್ರಹವಾಗಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಜೂನ್ 11: ಕರ್ನಾಟಕ ಕಾಂಗ್ರೆಸ್ ಸರ್ಕಾರದ (Congress Government) ಮಹಾತ್ವಕಾಂಕ್ಷೆಯ ಶಕ್ತಿ ಯೋಜನೆ (Shakti Scheme) ಆರಂಭವಾಗಿ ನಾಳೆಗೆ, ಅಂದರೆ ಬುಧವಾರಕ್ಕೆ ಒಂದು ವರ್ಷ ಆಗಲಿದೆ. ಈ ಅವಧಿಯಲ್ಲಿ 225 ಕೋಟಿ ಮಹಿಳೆಯರು ಉಚಿತವಾಗಿ (Free Bus Travel for Women) ನಾಲ್ಕು ನಿಗಮದ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದರಿಂದ ನಾಲ್ಕು ನಿಗಮಕ್ಕೆ ಬರೋಬ್ಬರಿ 5481 ಕೋಟಿ ರೂಪಾಯಿ ಆದಾಯ ಬಂದಿದೆ. ಕೆಎಸ್‌ಆರ್‌ಟಿಸಿ ಒಂದರಲ್ಲೇ 68 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದರೆ, ಬಿಎಂಟಿಸಿಯಲ್ಲಿ 71 ಕೋಟಿ, ಕೆಕೆಆರ್ಟಿಸಿ- ಎನ್ಡಬ್ಲ್ಯುಕೆಆರ್ಟಿಸಿಯಲ್ಲಿ 85 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರಿಂದ ನಾಲ್ಕು ನಿಗಮಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಆರ್ಥಿಕವಾಗಿ ನಷ್ಟದಲ್ಲಿದ್ದ ನಿಗಮಕ್ಕೆ ಶಕ್ತಿ ಯೋಜನೆಯಿಂದ ದೊಡ್ಡ ಮಟ್ಟದಲ್ಲಿ ಲಾಭವಾಗಿದೆ.
ಕೆಎಸ್ಆರ್ಟಿಸಿಗೆ 2070 ಕೋಟಿ ರೂಪಾಯಿ ಆದಾಯ ಬಂದಿದ್ದರೆ, ಬಿಎಂಟಿಸಿಗೆ 937 ಕೋಟಿ ರೂಪಾಯಿ, ಕೆಕೆಆರ್ಟಿಸಿ- ಎನ್ಡಬ್ಲ್ಯುಕೆಆರ್ಟಿಸಿಗೆ ಸೇರಿ ಒಟ್ಟು 2472 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಶಕ್ತಿ ಯೋಜನೆ ಆರಂಭದಿಂದ ಶಾಲಾ ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗಿದ್ದರೆ, ಇತ್ತ ರಾಜ್ಯದ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೆ ಸೇರಿ ಇತರೆಡೆಗೆ ನಿತ್ಯವೂ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಶಕ್ತಿ ಯೋಜನೆಯಿಂದಾಗಿ ಸಾವಿರಾರು ರೂಪಾಯಿ ಉಳಿತಾಯ ಆಯ್ತು. ಇದೇ ರೀತಿ ಇನ್ನಷ್ಟು ವರ್ಷ ಮುಂದುವರೆಯಲಿ ಎಂದು ಮಹಿಳೆಯರು, ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೆಎಸ್ಆರ್ಟಿಸಿಗೆ ಬಂತು ‘ಶಕ್ತಿ’, ದಾಖಲೆಯ 3,930 ಕೋಟಿ ರೂ. ಆದಾಯ
ಈ ವಾರ ಅಥವಾ ಮುಂದಿನ ವಾರ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಶಕ್ತಿ ಯೋಜನೆಯ ವರ್ಷಾಚರಣೆ ಸಂಭ್ರಮಿಸಲು ಚಿಂತನೆ ನಡೆಸಿದೆ. ಸದ್ಯದಲ್ಲೇ ದಿನಾಂಕ ಘೋಷಣೆ ಮಾಡಲಿದೆ.
‘ಶಕ್ತಿ’ ಯೋಜನೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆದಾಯ ದಾಖಲೆ ಪ್ರಮಾಣದಲ್ಲಿ ಹೆಚ್ಚಳಕ್ಕೆ ನೇರ ಹಾಗೂ ಪರೋಕ್ಷವಾಗಿ ನೆರವಾಗಿರುವ ಬಗ್ಗೆ ಸೋಮವಾರ ವರದಿಯಾಗಿತ್ತು. ಯೋಜನೆಯ ಪರಿಣಾಮವಾಗಿ 2023-24ನೇ ಸಾಲಿನಲ್ಲಿ 3,930 ಕೋಟಿ ರೂ. ಆದಾಯವನ್ನು ಕೆಎಸ್‌ಆರ್‌ಟಿಸಿ ಗಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ