ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ ಆ್ಯಂಡ್ ರೆಸ್ಟೋರೆಂಟ್!
ದೇವರು ಅನ್ನೋ ಭಯ ಇಲ್ಲ. ಭಕ್ತಿನೂ ಇಲ್ಲ.. ನಂಬಿಕೆ ಬದಲು ಮೂಢನಂಬಿಕೆ ತಾಂಡವವಾಡಿದೆ. ದೇವಸ್ಥಾನ ಅಂದ್ರೆ ಪವಿತ್ರ ಸ್ಥಳ. ಅಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ವೆ. ಆದ್ರೆ ಈ ಜಾಗವನ್ನೇ ಕೆಲವರು ಸಟ್ಟು ಹಾಕಿದ್ದಾರೆ. ಮತ್ತೊಂದು ಚಾಮರಾಜನಗರದಲ್ಲಿ ದೇಗುಲವನ್ನ ಕುಡುಕರು ಎಣ್ಣೆ ಪಾರ್ಟಿಯ ಅಡ್ಡೆ ಮಾಡಿಕೊಂಡಿದ್ದಾರೆ. ಶಿವ ಲಿಂಗದ ಮೇಲೆಯೇ ಎಣ್ಣೆ ಬಾಟ್ಲು ಇಟ್ಟು ಕೇಕೆ ಹಾಕುತ್ತಾ ಮಜಾ ತೆಗೆದುಕೊಳ್ಳುತ್ತಾರೆ.

ಚಾಮರಾಜನಗರ, (ಫೆಬ್ರವರಿ 04) : ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ಶಿವನ ದೇವಾಲಯ ಪಾಳು ಬಿದ್ದಿದ್ದು, ಇದೀಗ ಈ ದೇವಸ್ಥಾನವನ್ನು ಕುಡುಕರು ಬಾರ್ ಆಗಿ ಮಾಡಿಕೊಂಡಿದ್ದಾರೆ. ಮೈಸೂರು ಮಹಾರಾಜರು ಕಟ್ಟಿಸಿದ್ದ ಈ ಪುರಾತನ ಶಿವನ ದೇಗುಲ ಯಾವುದೇ ಮೂಲಸೌಕರ್ಯಗಳಿಲ್ಲದೇ ಪಾಳು ಬಿದ್ದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕುಡುಕರು ದೇವರು ಎನ್ನದೇ ಶಿವಲಿಂಗದ ಮೇಲೆಯೇ ಎಣ್ಣೆ ಬಾಟಲಿ ಇಟ್ಟುಕೊಂಡು ಪಾರ್ಟಿ ಮಾಡುತ್ತಾರೆ.
ಈ ಪುರಾತನ ಶಿವ ದೇವಾಲಯವನ್ನು ಮೈಸೂರು ಮಹಾರಾಜರು ಕಟ್ಟಿಸಿದ್ದರು. ಆದ್ರೆ, ಯಾವುದೇ ಮೂಲಸೌಕರ್ಯಗಳಿಲ್ಲದೇ ದೇವಾಲಯ ಪಾಳು ಬಿದ್ದಿದೆ. ಹೀಗಾಗಿ ಇದನ್ನು ಪುಂಡ ಪೋಕರಿಗಳು ತಮ್ಮ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ.ಮೀಸೆ ಚಿಗುರುವ ಮುನ್ನವೇ ಮದ್ಯದ ದಾಸರಾಗಿರುವ ಪಡ್ಡೆ ಹುಡುಗರು ಪೊಲೀಸರ ಭಯವಿಲ್ಲದೇ, ಶಿವಲಿಂಗದ ಮೇಲೆ ಮದ್ಯವಿಟ್ಟು ಸೇವಿಸುತ್ತಿದ್ದಾರೆ. ಇದೀಗ ಮಟ ಮಟ ಮದ್ಯಾಹ್ನವೇ ಕಂಠಪೂರ್ತಿ ಕುಡಿದು ಬೀದಿಗಳಲ್ಲಿ ಅಲೆಯುತ್ತಿದ್ದಾರೆ.
ನಿಧಿ ಆಸೆಗೆ ದೇವಿಯ ವಿಗ್ರಹ ಸುಟ್ಟು ಕಿಡಿಗೇಡಿಗಳು
ಯಾದಗಿರಿ: ಇನ್ನೊಂದೆಡೆ ಯಾದಗಿರಿಯಲ್ಲಿ ನಿಧಿ ಆಸೆಗಾಗಿ ದುಷ್ಕರ್ಮಿಗಳು ದೇವಿಯ ವಿಗ್ರಹವನ್ನು ಸುಟ್ಟು ಹಾಕಿದ್ದಾರೆ. ಯಾದಗಿರಿ ಜಿಲ್ಲೆ ಶಹಾಪುರದ ತಾಲೂಕಿನ ಖಾನಾಪುರದಲ್ಲಿರೋ ಈ ದೇಗುಲ ಸುತ್ತಮುತ್ತಲಿನ ಭಕ್ತರಿಗೆ ಇಷ್ಟದ ದೇವರು. ಆದ್ರೀಗ, ಇದೇ ದೇವಿ ಮೂರ್ತಿಯನ್ನ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಗರ್ಭಗುಡಿಯಲ್ಲಿ ದೇವಿ ವಿಗ್ರಹಕ್ಕೆ ಧರಿಸಿದ್ದ ವಸ್ತ್ರಗಳನ್ನ ಸುಟ್ಟು ಅಟ್ಟಹಾಸ ಮೆರೆದಿದ್ದಾರೆ. ಅಷ್ಟೇ ಅಲ್ಲ ದೇವಿಯ ಹಲವು ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಡಗೇರಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 7:55 pm, Tue, 4 February 25