
ಶಿವಮೊಗ್ಗ, (ಏಪ್ರಿಲ್ 21): ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ (shivamogga Trial blast case) ಸಂಬಂಧಿಸಿದಂತೆ ಅಪರಾಧಿ ಅರಾಫತ್ ಗೆ ಆರು ವರ್ಷ ಜೈಲು ಶಿಕ್ಷೆಯಾಗಿದೆ. ಟ್ರಯಲ್ ಬ್ಲಾಸ್ಟ್ ಕೇಸ್‌ನ 3ನೇ ಆರೋಪಿ ಅರಾಫತ್ ಅಲಿ ಆರೋಪ ಸಾಬೀತಾಗಿದ್ದು, ಈ ಸಂಬಂಧ ಇಂದು ಏಪ್ರಿಲ್ 21) ಅರಾಫತ್ ಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ಎನ್ ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಇದರೊಂದಿಗೆ ಪ್ರಕರಣ ಸಂಬಂಧ 12 ಜನ ಆರೋಪಿಗಳ ಪೈಕಿ ಮೂವರಿಗೆ ಶಿಕ್ಷೆಯಾಗಿದ್ದು, ಇನ್ನುಳಿದ 9 ಜನ ಆರೋಪಿಗಳ ವಿಚಾರಣೆ ಮುಂದುವರೆದಿದೆ.
2020ರಿಂದ ಅರಾಫತ್ ನಾಪತ್ತೆಯಾಗಿದ್ದ. ಕೀನ್ಯಾದಲ್ಲಿ ತಲೆಮರೆಸಿಕೊಂಡು ನಕಲಿ ದಾಖಲೆ ಬಳಸಿ ಮಹಿಳಾ ಅಧಿಕಾರಿಯನ್ನು ಮದುವೆಯಾಗಿದ್ದ. ಬಳಿಕ 2023ರ ಸೆಪ್ಟೆಂಬರ್ 14ರಂದು ಕೀನ್ಯಾದಿಂದ ಬರುವಾಗ ದೆಹಲಿ ಏರ್‌ಪೋರ್ಟ್‌ನಲ್ಲಿ ಅರಾಫತ್ ಎನ್‌ಐಎ ಬಲಿಗೆ ಬಿದ್ದಿದ್ದ.
2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ಸಮೀಪ ತುಂಗಾ ನದಿ ತೀರದಲ್ಲಿ ಬಾಂಬ್ ಸ್ಫೋಟದ ಪ್ರಯೋಗ (ಟ್ರಯಲ್ ಬ್ಲಾಸ್ಟ್) ನಡೆದಿತ್ತು. ಇದು ಐಸಿಸ್ ಪ್ರೇರಿತ ಯುವಕರು ತಯಾರಿಸಿದ ಐಇಡಿ (Improvised Explosive Device) ಬಾಂಬ್‌ಗಳನ್ನು ಪರೀಕ್ಷಿಸಲು ಮಾಡಿದ ಪ್ರಯೋಗವಾಗಿತ್ತು.
ಇನ್ನು ಈ ಪ್ರಕರಣ ಸಂಬಂಧ ಎನ್‌ಐಎ ಕೋರ್ಟ್ ಈಗಾಗಲೇ ಇಬ್ಬರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದೀಗ ಮೂರನೇ ಅಪರಾಧಿ ಅರಾಫತ್ ಗೂ ಸಹ ಎನ್‌ಐಎ ಕೋರ್ಟ್ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇನ್ನುಳಿದಂತೆ ಎನ್‌ಐಎ ಅಧಿಕಾರಿಗಳು 9 ಜನ ಆರೋಪಿಗಳ ವಿಚಾರಣೆ ಮುಂದುವರೆಸಿದೆ.
ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳು ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್, ಸಯ್ಯದ್ ಯಾಸೀನ್ ಮುಂತಾದವರು. ಅವರು ಐಸಿಸ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದು, ಡಾರ್ಕ್ ವೆಬ್ ಮೂಲಕ ಸ್ಫೋಟಕ ತಯಾರಿಕೆಯ ವೀಡಿಯೊಗಳು ಮತ್ತು ಮಾಹಿತಿ ಪಡೆದಿದ್ದರು. ಟ್ರಯಲ್ ಬ್ಲಾಸ್ಟ್ ನಂತರ ಅವರು ದೊಡ್ಡ ಮಟ್ಟದ ದಾಳಿಗಳಿಗೆ ಪ್ಲಾನ್ ಮಾಡಿದ್ದರು. ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯ ಟಾರ್ಗೆಟ್ ಮಾಡಿದ್ದರು ಎಂದು ತಿಳಿದುಬಂದಿತ್ತು.
ಇದೇ ಜಾಲವು 2022ರ ನವೆಂಬರ್‌ನಲ್ಲಿ ನಡೆದ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಮತ್ತು ಮಂಗಳೂರಿನಲ್ಲಿ ಐಸಿಸ್, ಲಷ್ಕರ್-ಎ-ತೈಬಾ, ತಾಲಿಬಾನ್ ಬೆಂಬಲದ ಗೋಡೆ ಬರಹಗಳ ಪ್ರಕರಣಗಳಿಗೂ ಲಿಂಕ್ ಇತ್ತು. ಈ ಎಲ್ಲಾ ಕೇಸ್‌ಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ (NIA) ಈ ಪ್ರಕರಣದ ತನಿಖೆ ನಡೆಸುತ್ತಿದೆ. ಎನ್‌ಐಎಯು ಇದುವರೆಗೆ ಹಲವು ಆರೋಪಪಟ್ಟಿಗಳನ್ನು ಸಲ್ಲಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 pm, Tue, 21 April 26