ಶಿಕಾರಿಪುರ: ಆಸ್ಪತ್ರೆ ಆವರಣದ ನೀರಿನ ಸಂಪ್ಗೆ ಬಿದ್ದು 3 ವರ್ಷದ ಮಗು ಸಾವು, ನಿರ್ಲಕ್ಷ್ಯ ಆರೋಪ
ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ದುರಂತ ಘಟನೆ ನಡೆದಿದೆ. ಆಸ್ಪತ್ರೆ ಆವರಣದಲ್ಲಿರುವ ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾವನ್ನಪ್ಪಿದೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಮುಚ್ಚಳವಿಲ್ಲದ ತೊಟ್ಟಿಯೇ ಮಗುವಿನ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ, ನವೆಂಬರ್ 15: ಆಸ್ಪತ್ರೆ ಆವರಣದಲ್ಲಿ ನೀರಿನ ಸಂಪ್ಗೆ ಬಿದ್ದು 3 ವರ್ಷದ ಮಗು (baby) ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಕಾರಿಪುರ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಮೊಹಮ್ಮದ್ ಐಯಾನ್(3) ಮೃತ ಮಗು. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಇಮ್ರಾನ್ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಸಂಬಂಧಿಯ ಆರೋಗ್ಯ ವಿಚಾರಿಸಲು ಕುಟುಂಬ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆ ಒಳಗಡೆಯಿಂದ ಆಟವಾಡುತ್ತಾ ಮೊಹಮ್ಮದ್ ಹೊರಗೆ ಬಂದಿದ್ದು, ತುಂಬಿದ್ದ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಮುಚ್ಚಳ ಮುಚ್ಚದಿದ್ದಕ್ಕೆ ತೊಟ್ಟಿಗೆ ಬಿದ್ದು ಮಗು ಸಾವು ಎಂದು ಆರೋಪ ಮಾಡಲಾಗಿದೆ. ಮಗು ಮೃತಪಟ್ಟ ನಂತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ
ಸಾಗರ ತಾಲೂಕಿನ ಗೇರುಬೀಸು ಗ್ರಾಮದಲ್ಲಿ ಸಾಲಬಾಧೆಗೆ ಬೇಸತ್ತು ಮನೆ ಹಿಂಭಾಗದ ಮರಕ್ಕೆ ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ರಾಮು (48) ಮೃತ ರೈತ. ಮೃತ ರಾಮು ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಹಲವೆಡೆ ಲಕ್ಷಾಂತರ ರೂ. ಸಾಲಮಾಡಿದ್ದರು. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಬೈಕ್ ಸವಾರರು ಸಾವು
ನಗರದ ಹೊರವಲಯದ ತೀರ್ಥಹಳ್ಳಿ ರಸ್ತೆಯ ಹರಕೆರೆ ಸಮೀಪದ ಕಾನೇಹಳ್ಳದ ಬಳಿ ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ಮರ ಹಾಗೂ ಜಾಹಿರಾತು ಫಲಕ ಅಳವಡಿಸಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವಂತಹ ಘಟನೆ ನಡೆದಿದೆ.
ಇದನ್ನೂ ಓದಿ: ಎಚ್ಚರ…ಎಚ್ಚರ.. ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ ವಂಚನೆ
ನಗರದ ಆರ್. ಎಂಎಲ್ ನಗರದ ನಿಸಾರ್ (18) ಹಾಗೂ ಮಂಜುನಾಥ ಬಡಾವಣೆಯ ಯಶವಂತ್ (20) ಅಪಘಾತದಲ್ಲಿ ಮೃತರು. ಕೆಟಿಎಂ ಬೈಕ್ನಲ್ಲಿ ತೀರ್ಥಹಳ್ಳಿ ಮಾರ್ಗವಾಗಿ ಗಾಜನೂರು ಐಟಿಐ ಕಾಲೇಜಿಗೆ ಯುವಕರು ತೆರಳುತ್ತಿದ್ದರು. ಈ ವೇಳೆ ಅತಿಯಾದ ವೇಗದಿಂದ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.