ರಾತ್ರೋರಾತ್ರಿ ಕೊಟ್ಟಿಗೆಗೆ ನುಗ್ಗಿ ಗೋವುಗಳ ಕಳತನ: ಹಿಡಿಯಲು ಹೋದ ಬಜರಂಗದಳ ಕಾರ್ಯಕರ್ತರ ಹತ್ಯೆಗೆ ಯತ್ನ

Bajrang Dal Workers Attack: ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದ ಬಜರಂಗದಳ ಕಾರ್ಯಕರ್ತನ ಮೇಲೆ ಗೋ ಕಳ್ಳರು ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಬಿಜೆಪಿ ದಾಳಿಯನ್ನು ಖಂಡಿಸಿದ್ದು, ಗೋ ಕಳ್ಳರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಸಂಘಟನೆಗಳು ಆಗ್ರಹಿಸಿವೆ.

ರಾತ್ರೋರಾತ್ರಿ ಕೊಟ್ಟಿಗೆಗೆ ನುಗ್ಗಿ ಗೋವುಗಳ ಕಳತನ: ಹಿಡಿಯಲು ಹೋದ ಬಜರಂಗದಳ ಕಾರ್ಯಕರ್ತರ ಹತ್ಯೆಗೆ ಯತ್ನ
ಬಜರಂಗದಳ ಕಾರ್ಯಕರ್ತರ ಮೇಲೆ‌ ಹಲ್ಲೆ
Image Credit source: tv9 kannada
Edited By:

Updated on: Aug 16, 2026 | 6:48 PM

ಶಿವಮೊಗ್ಗ, ಆಗಸ್ಟ್​​ 16: ಮಲೆನಾಡು ಭಾಗದಲ್ಲಿ ಅಕ್ರಮ ಗೋಕಳ್ಳರ (Cow Theft) ಅಟ್ಟಹಾಸ ಮಿತಿಮೀರಿದ್ದು, ರಾತ್ರೋರಾತ್ರಿ ಜಾನುವಾರುಗಳನ್ನು ರಕ್ಷಿಸಲು ಹೋದ ಗೋ ಸಂರಕ್ಷಕರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ (Attack) ನಡೆಸಿ, ಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗ (shivamogga) ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ನಡೆದಿದೆ. ಸದ್ಯ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ತಡರಾತ್ರಿ ಇಡಿ ಗ್ರಾಮ ನಿದ್ರೆಗೆ ಜಾರಿತ್ತು. ಈ ವೇಳೆ ಬಂದ ಗೋ ಕಳ್ಳರ ಗುಂಪು, ಬಜರಂಗದಳ ಕಾರ್ಯಕರ್ತನ ಹಸು ಕೊಟ್ಟಿಗೆಗೇ ಕನ್ನ ಹಾಕಿದೆ. ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ಬಲವಂತವಾಗಿ ತಮ್ಮ ವಾಹನಕ್ಕೆ ತುಂಬಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಸಾಕುಪ್ರಾಣಿಗಳ ಸದ್ದು ಕೇಳಿ ತಕ್ಷಣವೇ ಎಚ್ಚೆತ್ತ ಮನೆಯವರು ಹಾಗೂ ಬಜರಂಗದಳದ ಕಾರ್ಯಕರ್ತರು ಕಳ್ಳರ ಸಾಗಾಟವನ್ನು ತಡೆಯಲು ಮುಂದಾಗಿದ್ದಾರೆ. ಆದರೆ, ಸ್ಥಳೀಯರ ಕಣ್ಣು ತಪ್ಪಿಸಿ ವೇಗವಾಗಿ ವಾಹನ ಚಲಾಯಿಸಿಕೊಂಡು ಕಳ್ಳರು ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: ಅನುದಾನ ಕೊರತೆಯೋ, ಅಧಿಕಾರಿಗಳ ಬೇಜವಾಬ್ದಾರಿಯೋ? ಗದಗ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಖಾಲಿ ಖಾಲಿ

ಈ ಹಿಂದೆಯೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗೋವುಗಳ ಕಳವು ಪ್ರಕರಣಗಳು ವರದಿಯಾಗಿದ್ದು, ಇದೀಗ ನೇರವಾಗಿ ಕಾರ್ಯಕರ್ತರ ಮನೆಯ ಕೊಟ್ಟಿಗೆಗೆ ಕೈಹಾಕಿರುವುದು ಮಲೆನಾಡಿಗರಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸಿದೆ. ಗೋವುಗಳನ್ನು ಕೊಂಡೊಯ್ಯುತ್ತಿದ್ದ ಕಳ್ಳರನ್ನು ಸುಮ್ಮನೆ ಬಿಡದ ಬಜರಂಗದಳ ಕಾರ್ಯಕರ್ತರು, ತಮ್ಮ ಕಾರಿನಲ್ಲಿ ಕಳ್ಳರ ವಾಹನವನ್ನು ಹಿಂಬಾಲಿಸಿದ್ದು, ರೋಚಕ ರೀತಿಯಲ್ಲಿ ಚೇಸಿಂಗ್ ನಡೆದಿದೆ. ತಮ್ಮನ್ನು ಹಿಂಬಾಲಿಸುತ್ತಿರುವುದನ್ನು ಕಂಡು ಕಂಗಾಲಾದ ಕಳ್ಳರು, ಬಜರಂಗದಳ ಕಾರ್ಯಕರ್ತರ ಕಾರಿಗೆ ತಮ್ಮ ವಾಹನದಿಂದ ಬಲವಾಗಿ ಡಿಕ್ಕಿ ಹೊಡೆದಿದ್ದಾರೆ. ಈ ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಅಷ್ಟೇ ಅಲ್ಲದೆ ಕಿಡಿಗೇಡಿಗಳು, ಕಾರಿನಿಂದ ಇಳಿದ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.

ಬಜರಂಗದಳ ಕಾರ್ಯಕರ್ತನಿಗೆ ಗಂಭೀರ ಗಾಯ

ಭೀಕರ ದಾಳಿಯಲ್ಲಿ ಬಜರಂಗದಳ ಕಾರ್ಯಕರ್ತ ಚಂದ್ರಶೇಖರ್​​ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಜೊತೆಯಲ್ಲಿದ್ದ ಕಿರಣ್ ಮತ್ತು ಅಭಿಲಾಷ್​​ಗೆ ಗಾಯಗಳಾಗಿವೆ. ರಾಜ್ಯ ಸರ್ಕಾರದ ಮೃದು ಧೋರಣೆಯೇ ಈ ಅಕ್ರಮ ದಂಧೆಕೋರರಿಗೆ ಇಷ್ಟೊಂದು ಧೈರ್ಯ ತಂದಿದೆ ಎಂದು ಬಜರಂಗದಳ ಕಾರ್ಯಕರ್ತರು ನೇರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಹಲ್ಲೆ ನಡೆಸಿದ ಗೋ ಕಳ್ಳರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ಶಿವಮೊಗ್ಗ ಜಿಲ್ಲಾದ್ಯಂತ ಉಗ್ರ ಸ್ವರೂಪದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದ್ದಿಷ್ಟು 

ಗಾಯಾಳು ಆರೋಗ್ಯ ವಿಚಾರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ‘ಶಿವಮೊಗ್ಗದಲ್ಲಿ ಗೋ ರಕ್ಷಕರ ಮೇಲೆ ನಡೆದಿರುವ ಅಟ್ಯಾಕ್ ಖಂಡನೀಯ. ​ಅಕ್ರಮ ಗೋ ಸಾಗಾಣಿಕೆ ವಾಹನ ಬೆನ್ನಟ್ಟಿದ ಕಾರ್ಯಕರ್ತರ ಮೇಲೆ ದಾಳಿ ಆಗಿದೆ. ​ಮಚ್ಚು, ದೊಣ್ಣೆಯಿಂದ ಅಟ್ಯಾಕ್ ಆಗಿದೆ. ಕಾರ್ಯಕರ್ತನ ತಲೆ, ಬೆನ್ನು ಮತ್ತು ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ​ಫೋನ್ ಮಾಡಿ ಮುಂದಿನ ಊರಿನ ಗ್ಯಾಂಗ್ ಕರಾಯಿಸಿ ಪ್ಲ್ಯಾನ್ ಮಾಡಿ ಅಟ್ಯಾಕ್ ಮಾಡಿದ್ದಾರೆ’ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us