AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜ್​ ಬಳಿ ಒಂಟಿ ಸಲಗ ಪ್ರತ್ಯಕ್ಷ: ಕಾರ್ಯಾಚರಣೆ ವೇಳೆ ಕಾಡಾನೆಗೆ ಗುಂಡೇಟು ತಗುಲಿರುವ ಶಂಕೆ

ಮಂಗಳೂರು ಉಜಿರೆಯ ಎಸ್​ಡಿಎಂ ಕಾಲೇಜು ಬಳಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿ ಎಲ್ಲರ ಆತಂಕ್ಕೆ ಕಾರಣವಾಗಿದೆ. ಇನ್ನು ಕಾಡಾನೆಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈ ವೇಳೆ ಕಾಡಾನೆಗೆ ಗುಂಡು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಹಿರಿಯ ಅಧಿಕಾರಿಗಳು ಈವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ.

ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜ್​ ಬಳಿ ಒಂಟಿ ಸಲಗ ಪ್ರತ್ಯಕ್ಷ: ಕಾರ್ಯಾಚರಣೆ ವೇಳೆ ಕಾಡಾನೆಗೆ ಗುಂಡೇಟು ತಗುಲಿರುವ ಶಂಕೆ
ಕಾಡಾನೆImage Credit source: tv9 kannada
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Sep 06, 2026 | 7:55 PM

Share

ಮಂಗಳೂರು, ಸೆಪ್ಟೆಂಬರ್​ 06: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ, ಎಸ್​​ಡಿಎಂ ಶಿಕ್ಷಣ ಸಂಸ್ಥೆಗಳಿರುವ ಎಜುಕೇಶನ್ ಹಬ್. ಇಲ್ಲಿ ನಿತ್ಯ ಸಾಕಷ್ಟು ವಿದ್ಯಾರ್ಥಿಗಳ ಓಡಾಡ ಇರುತ್ತೆ. ಆದರೆ ಇಂದು ಬೆಳಗ್ಗೆ ಇಲ್ಲಿನ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜು ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿ ಎಲ್ಲರ ಆತಂಕ್ಕೆ ಕಾರಣವಾಗಿದೆ. ಇನ್ನು ಕೂಡ ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಫೈರಿಂಗ್ ವೇಳೆ ಒಂಟಿ ಸಲಗಕ್ಕೆ 2 ಗುಂಡುಗಳು ತಾಗಿರುವ ಶಂಕೆ ವ್ಯಕ್ತವಾಗಿದೆ.

ನಡೆದಿದ್ದೇನು?

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ವ್ಯಾಪ್ತಿಗೆ ಲಗ್ಗೆಯಿಟ್ಟಿರುವ ಒಂಟಿ ಸಲಗವನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ವೇಳೆ ಕಾಡಾನೆಗೆ ಗುಂಡೇಟು ತಗುಲಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕಾಡಾನೆಯನ್ನು ಬೆದರಿಸಿ ಓಡಿಸಲು ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ್ದು, ಈ ಪೈಕಿ ಎರಡು ಬುಲೆಟ್‌ಗಳು ಕಾಡಾನೆ ತಗುಲಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಅಭಿಮಾನಿಗಳ ಒತ್ತಾಸೆಗೆ ಮಣಿದ ಸರ್ಕಾರ: ಮೈಸೂರು ದಸರಾಗೆ ನಿಶಾನೆ ಆನೆಯಾಗಿ ಅಭಿಮನ್ಯು ಆಯ್ಕೆ

ಗುಂಡು ಹಾರಿಸಿದ ಸ್ಥಳದ ಅಕ್ಕಪಕ್ಕದಲ್ಲೇ ಕಾಡಾನೆ ಅಡಗಿ ಕುಳಿತಿದ್ದು, ಮತ್ತೆ ಕಾರ್ಯಾಚರಣೆ ತೀವ್ರಗೊಳಿಸಿದರೆ ಅದು ಮತ್ತಷ್ಟು ಕೆರಳಿ ಬೇರೆಡೆಗೆ ನುಗ್ಗಿ ಜನವಸತಿ ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಬಹುದು ಎಂಬ ಕಾರಣಕ್ಕೆ ಸಿಬ್ಬಂದಿ ಸದ್ಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದಾರೆ. ವಾಹನಗಳಲ್ಲಿ ಮೈಕ್ ಮೂಲಕ ಸಾರ್ವಜನಿಕರು ಮನೆಯಿಂದ ಹೊರಬರದಂತೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.

LIVE TV

ಕಾಲೇಜಿಗೆ ರಜೆ ಹಿನ್ನೆಲೆ ತಪ್ಪಿದ ಅನಾಹುತ

ಕಾಡಾನೆ ಪ್ರತ್ಯಕ್ಷವಾದ ಜಾಗದ ಸಮೀಪದಲ್ಲೇ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿಗೆ ಇದ್ದು, ಇಂದು ಭಾನುವಾರ ಹಿನ್ನೆಲೆ ರಜೆ ಇದ್ದಿದ್ದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರವಿಲ್ಲದೆ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ರಾತ್ರಿ ವೇಳೆ ಆನೆ ತನ್ನಷ್ಟಕ್ಕೆ ತಾನೇ ಕಾಡಿನತ್ತ ತೆರಳದಿದ್ದರೆ, ಸೋಮವಾರ ಕಾಲೇಜು ಆರಂಭವಾಗುವುದರಿಂದ ನೂರಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಆಗಮಿಸುತ್ತಾರೆ. ಹೀಗಾಗಿ, ಬೆಳಗಾಗುವುದರೊಳಗೆ ಆನೆ ಸ್ಥಳ ಬಿಟ್ಟು ಕದಲದಿದ್ದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಮತ್ತು ಕಾರ್ಯಾಚರಣೆ ಹೇಗೆ ನಡೆಸಬೇಕು ಎಂಬುದು ಅರಣ್ಯ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ತೀವ್ರ ಗೊಂದಲಕ್ಕೂ ಕಾರಣವಾಗಿದೆ.

ಬೆಳಗ್ಗೆಯಿಂದಲೂ ಸ್ಥಳಕ್ಕೆ ಬಾರದ ಹಿರಿಯ ಅಧಿಕಾರಿಗಳು: ಮಾರ್ಗದರ್ಶನವಿಲ್ಲದೆ ಸಿಬ್ಬಂದಿ ಪರದಾಟ

ಬೆಳಗ್ಗೆ 8:30ರ ಸುಮಾರಿಗೆ ಕಾಡಾನೆ ಪ್ರತ್ಯಕ್ಷವಾಗಿದ್ದರೂ ಸ್ಥಳೀಯ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ  ಮಹೇಶ್ ದೇವಾಡಿಗ ಸೇರಿದಂತೆ ಯಾವುದೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಇಲಾಖೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ. ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸೂಕ್ತ ಮಾರ್ಗದರ್ಶನವಿಲ್ಲದೆ ಕೇವಲ ಕೆಳಹಂತದ ಸಿಬ್ಬಂದಿ ಮಾತ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ರಾತ್ರಿಯ ವೇಳೆ ಕಾಡಾನೆಯನ್ನು ನಿಯಂತ್ರಿಸುವುದು ಹೇಗೆ ಎಂದು ತಿಳಿಯದೆ ಸಿಬ್ಬಂದಿ ಅಕ್ಷರಶಃ ಪರದಾಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:52 pm, Sun, 6 September 26

Follow Us