ಗೌರಿ ಲಂಕೇಶ್ ಕೊಲೆ ಕೇಸ್ನ ಆರೋಪಿಯಿಂದ ನೂತನ ಕಮಿಷನರ್‌ಗೆ ಸನ್ಮಾನ: ರೌಡಿಶೀಟರ್‌ಗೆ ಪಿಎಸ್‌ಐರಿಂದ ವಿಐಪಿ ಆತಿಥ್ಯ
ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರಿ ಸ್ವೀಕರಿಸಿದ ಪೊಲೀಸ್ ಆಯುಕ್ತ ಭೂಷಣ್ ಬೋರಸೆಗೆ ಗಾಂಜಾ ಕೇಸ್ ಮತ್ತು ಕೊಲೆ ಆರೋಪಿಯಿಂದ ಸನ್ಮಾನ ಮಾಡಲಾಗಿದೆ. ಇನ್ನೊಂದೆಡೆ ಕಲಬುರಗಿಯ ಗಾಣಗಾಪುರ ಠಾಣೆ PSI ರೌಡಿಶೀಟರ್ರನ್ನು ಠಾಣೆಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಸದ್ಯ ಈ ಪ್ರಕರಣಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.

ಹುಬ್ಬಳಿ, ಸೆಪ್ಟೆಂಬರ್ 06: ಹುಬ್ಬಳ್ಳಿ-ಧಾರವಾಡದ ನೂತನ ಪೊಲೀಸ್ ಆಯುಕ್ತರಾಗಿ ಭೂಷಣ್ ಬೋರಸೆ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಹೀಗಾಗಿ ಕೊಲೆ ಹಾಗೂ ಗಾಂಜಾ ಪ್ರಕರಣದ ಆರೋಪಿಗಳು ಅವರಿಗೆ ಹೂಗುಚ್ಛ ನೀಡಿ ಸನ್ಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಾಗಿರುವ ಖೇತ್‌ಸಿಂಗ್ ರಾಜಪುರೋಹಿತ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮಿತ್ ಬದ್ದಿ ಆಯುಕ್ತರಿಗೆ ಸನ್ಮಾನಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆರೋಪಿಗಳಿಂದ ನೂತನ ಕಮಿಷನರ್‌ಗೆ ಸನ್ಮಾನ
ಈ ಮುಂಚೆ ಕಮಿಷನರ್ ಆಗಿದ್ದ ಎನ್ ಶಶಿಕುಮಾರ್ ಇತ್ತೀಚೆಗೆ ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಾನಕ್ಕೆ ಇದೀಗ ನೂತನ ಆಯುಕ್ತರಾಗಿ ಭೂಷಣ್ ಬೋರಸೆ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರ ಬೆನ್ನಲ್ಲೇ ಗಾಂಜಾ ಕೇಸ್ ಆರೋಪಿ ಮತ್ತು ಕೊಲೆ ಆರೋಪಿಯಿಂದ ಕಮಿಷನರ್‌ಗೆ ಸನ್ಮಾನ ಮಾಡಲಾಗಿದೆ.
ಇದನ್ನೂ ಓದಿ: ಚಿಕ್ಕಜಾಲ ರೌಡಿಶೀಟರ್ ‘ಕಿಂಗ್ ಮೇಕರ್ ದಾಸ’ನ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಭಾಗಿ
ಹೊಸದಾಗಿ ಅಧಿಕಾರ ವಹಿಸಿಕೊಂಡ ಪೊಲೀಸ್ ಆಯುಕ್ತರಿಗೆ ಇಂತಹ ವ್ಯಕ್ತಿಗಳ ಹಿನ್ನೆಲೆ ಬಗ್ಗೆ ಮುನ್ಸೂಚನೆ ಇರುವುದಿಲ್ಲವಾದರೂ, ಗಂಭೀರ ಅಪರಾಧ ಹಿನ್ನೆಲೆಯುಳ್ಳವರು ಆಯುಕ್ತರ ಕಚೇರಿಯೊಳಗೆ ನೇರವಾಗಿ ಪ್ರವೇಶಿಸಲು ಹೇಗೆ ಸಾಧ್ಯವಾಯಿತು ಮತ್ತು ಆಯುಕ್ತಾಲಯದ ಸಿಬ್ಬಂದಿ ಈ ವೇಳೆ ಕಣ್ಣು ಮುಚ್ಚಿ ಕುಳಿತಿದ್ದರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಣಗಾಪುರ ಠಾಣೆಯಲ್ಲೇ ರೌಡಿಶೀಟರ್‌ಗೆ ಪಿಎಸ್‌ಐ ಸಂಗೀತಾರಿಂದ ವಿಐಪಿ ಆತಿಥ್ಯ
ಕಲಬುರಗಿ ಜಿಲ್ಲೆಯ ಗಾಣಗಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಸಂಗೀತಾ ಅವರು ರೌಡಿಶೀಟರ್ ಮಾರುತಿಗೆ ಠಾಣೆಯಲ್ಲೇ ವಿಐಪಿ ಆತಿಥ್ಯ ನೀಡಿ ಸನ್ಮಾನಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರೌಡಿಶೀಟರ್‌ನನ್ನು ಖುದ್ದು ಠಾಣೆಗೆ ಕರೆಯಿಸಿ ಸನ್ಮಾನಿಸಿರುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಅಷ್ಟೇ ಅಲ್ಲದೆ ರೌಡಿಶೀಟರ್ರೊಂದಿಗೆ ಬರ್ತ್‌ಡೇ ಪಾರ್ಟಿಯಲ್ಲೂ ಪಿಎಸ್‌ಐ ಭಾಗಿಯಾಗಿದ್ದಾರೆ ಎನ್ನಲಾದ ಮಾಹಿತಿ ಬಹಿರಂಗಗೊಂಡಿದೆ.
ಇದನ್ನೂ ಓದಿ: ರೌಡಿಶೀಟರ್ ಜೊತೆ ಸೇರಿ ಕೊಲೆ ಕೇಸ್ ಮುಚ್ಚಿಹಾಕಲು ಇನ್ಸ್ಪೆಕ್ಟರ್ ಪ್ಲಾನ್! ಗಂಭೀರ ಆರೋಪ
ಇನ್ನು ಪೊಲೀಸರು ಆಯೋಜಿಸಿದ್ದ ಏಕತಾ ಓಟ ಕಾರ್ಯಕ್ರಮದಲ್ಲೂ ಈ ರೌಡಿಶೀಟರ್ ಭಾಗವಹಿಸಿದ್ದು, ಮಾರುತಿಗೆ ಖುದ್ದು ಖಾಕಿ ಇಲಾಖೆಯೇ ಇಷ್ಟೊಂದು ಗೌರವ ಮತ್ತು ಆತಿಥ್ಯ ನೀಡಿರುವುದರ ವಿರುದ್ಧ ಜನಸಾಮಾನ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:54 pm, Sun, 6 September 26




