ಶಿವಮೊಗ್ಗ: ಕೋಮುಗಲಭೆಗೆ ಸಾಕ್ಷಿಯಾಗಿದ್ದ ರಾಗಿಗುಡ್ಡದಲ್ಲಿ ಭಾವೈಕ್ಯತೆ ಅಲೆ, ಮುಸ್ಲಿಮರಿಂದ ಗಣಪನಿಗೆ ಹೂವಿನ ಹಾರ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಾತಾವರಣ ಪ್ರಕ್ಷ್ಯಬ್ಧಗೊಂಡಿದೆ. ಬುಧವಾರ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕೋಮುಗಲಭೆ ಸಂಭವಿಸಿತ್ತು. ಈ ನಡುವೆ ಶಿವಮೊಗ್ಗದಲ್ಲಿ ಹಿಂದೂ, ಮುಸ್ಲಿಮರು ಒಂದಾಗಿ ಗಣೇಶ ವಿಸರ್ಜಣೆ ಮೆರವಣಿಗೆ ನಡೆಸಿದರು. ಶಿವಮೊಗ್ಗ ನಗರದಲ್ಲಿ ಭಾವೈಕ್ಯತೆ ಅಲೆ ಬೀಸಿದೆ.
ಶಿವಮೊಗ್ಗ, ಸೆಪ್ಟೆಂಬರ್ 13: ಕಳೆದ ವರ್ಷ ಈದ್ ಮಿಲಾದ್ ಸಮಯದಲ್ಲಿ ಕೋಮುಗಲಭೆಗೆ ಸಾಕ್ಷಿಯಾಗಿದ್ದ ರಾಗಿಗುಡ್ಡದಲ್ಲಿ (Ragi Gudda) ಭಾವೈಕ್ಯತೆಯ ಅಲೆ ಬೀಸಿದೆ. ಗುರುವಾರ ನಡೆದ ಗಣೇಶ ವಿಸರ್ಜನೆ ಮೆರವಣಿಗೆ (Ganesha Visarjan) ವೇಳೆ ಇಮಾಮ್ ಬಾಡ ಮಸೀದಿಯವರು ಗಣಪನಿಗೆ ಹೂವಿನ ಹಾರ ಹಾಕಿ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಇದರಿಂದ ಗಣಪತಿ ವಿಸರ್ಜನಾ ಮಂಡಳಿಯ ಯುವಕರಿಗೆ ಸಂತೋಷವಾಗಿದೆ. ಈ ಬಾರಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗಿಯಾಗುವುದಾಗಿ ನೂರುಲ್ಲಾರಿಗೆ ಹಿಂದೂ ಯುವಕರು ಆಶ್ವಾಸನೆ ನೀಡಿದ್ದಾರೆ.
ಮತ್ತೊಂದು ಕಡೆ ಮುರಾದ್ ನಗರದಲ್ಲಿರುವ ಅಹಮದ್ ಕಾಲೋನಿಯ ಸೆಕೆಂಡ್ ಕ್ರಾಸ್ನಲ್ಲಿ ಸ್ನೇಹಜ್ಯೋತಿ ಗೆಳೆಯರ ಬಳಗದವರು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಗುರುವಾರ ನಡೆದ ಗಣಪತಿ ವಿಸರ್ಜನೆ ಮೆರವಣಿಗೆ ಅಹಮದ್ ಕಾಲೋನಿಯ ಸೆಕೆಂಡ್ ಕ್ರಾಸ್ನಿಂದ ಕೆಜಿಎನ್ ಸರ್ಕಲ್, ಸಂದೇಶ್ ಮೋಟಾರ್ ಮೂಲಕ ಇಮಾಬಾಡ ಮಸೀದಿ ರಸ್ತೆಯ ಮೂಲಕ ಸೀಗೆಹಟ್ಟಿ ವೃತ್ತ ತಲುಪಿತ್ತು.
ಇದನ್ನೂ ಓದಿ: ಗಲಭೆ ಬಳಿಕ ಸಹಜ ಸ್ಥಿತಿಗೆ ಮರಳುತ್ತಿರುವ ಶಿವಮೊಗ್ಗದ ರಾಗಿಗುಡ್ಡ ಪ್ರದೇಶ; ಸೆಕ್ಷನ್ 144 ಮುಂದುವರಿಕೆ
ಇಮಾಮ್ ಬಾಡ ಮಸೀದಿ ರಸ್ತೆಗೆ ಮೆರವಣಿಗೆ ಬಂದಾಗ ಮಸೀದಿ ಕಮಿಟಿಯ ನೂರುಲ್ಲಾರ್ ಮತ್ತು ಅವರ ಸಹಚರರು ಗಣಪನಿಗೆ ಹೂವಿನ ಹಾರಹಾಕಿ ನಮಸ್ಕರಿಸಿ ಸೌಹಾರ್ದಯುತಕ್ಕೆ ಸಾಕ್ಷಿಯಾದರು. ಈ ಹಿಂದೆ ಎರಡು ಬಾರಿ ಇಮಾಮ್ ಬಾಡ ಮಸೀದಿ ರಸ್ತೆಗೆ ಮೆರವಣಿಗೆ ಬಂದಾಗ ಮಾತಿನ ಚಕಮಕಿ ನಡೆದಿತ್ತು. ಆದರೆ ಈ ಬಾರಿ ಭಾವೈಕ್ಯತೆಯಿಂದ ಗಣಪತಿಯನ್ನು ವಿಸರ್ಜಿಸಲಾಗಿದೆ.
ರಾಗಿಗುಡ್ಡದಲ್ಲಿ ಗಲಭೆ
ಕಳೆದ ವರ್ಷ ಈದ್ ಮಿಲಾದ್ ಹಬ್ಬದಾಚರಣೆ ವೇಳೆ ರಾಗಿಗುಡ್ಡದಲ್ಲಿ ಪ್ರಚೋದನಾಕಾರಿ ಫ್ಲೇಕ್ಸ್ ಮತ್ತು ಕಟೌಟ್ ವಿವಾದ ಶುರುಗಾಗಿತ್ತು. ಇದು ಬಳಿಕ ಎರಡು ಕೋಮಿನ ನಡುವೆ ಹಿಂಸಾರೂಪ ಪಡೆದುಕೊಂಡಿತ್ತು. 15 ದಿನಗಳ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಕೂಡ ಮಾಡಲಾಗಿತ್ತು. ಎಲ್ಲೆಂದರಲ್ಲಿ ಕಲ್ಲು ತೂರಾಟ, ಲಾಠಿ ಚಾರ್ಜ್, ಮನೆ ಮೇಲೆ ಕಲ್ಲುತೂರಾಟ ಸೇರಿದಂತೆ ಅನೇಕ ಹಿಂಸಾರೂಪದ ಘಟನೆಗಳು ನಡೆದಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:34 am, Fri, 13 September 24