
ಶಿವಮೊಗ್ಗ, (ಏಪ್ರಿಲ್ 14): ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ (Tyavarekoppa Safari) ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ಹಂಸಿನಿ ಎಂಬ ನೀರಾನೆ ಸಾವನ್ನಪ್ಪಿದೆ. ಮಾರ್ಚ್ 19 ರಂದು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಹಂಸಿನಿ ನೀರಾನೆ ದಾಳಿ ನಡೆಸಿ ಕೊಂದಿತ್ತು. ಇದಾದ ಬಳಿಕ ಹಂಸಿಣಿಯ ಗರ್ಭದಲ್ಲಿದ್ದ ಮರಿ ಸಾವನ್ನಪ್ಪಿತ್ತು. ಇದೀಗ ತಾಯಿ ಹಂಸಿನಿ ಸಹ ಮೃತಟ್ಟಿದೆ. ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿದ್ದ 12 ವರ್ಷದ ಹಂಸಿನಿ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಇಂದು (ಏಪ್ರಿಲ್ 14) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದೆ.
ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣವಾದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಹಂಸಿನಿ ಬಲಿ ಪಡೆದಿತ್ತು. ಇದಾದ ಬಳಿಕ ಹಂಸಿನಿಯ ಗರ್ಭದಲ್ಲೇ ಮರಿ ಸಾವನ್ನಪ್ಪಿತ್ತು. ಹೊಟ್ಟೆಯಲ್ಲೇ ಮರಿ ಸಾವನ್ನಪ್ಪಿದ್ದರಿಂದ ಸೋಂಕು ತಗುಲಿ ಹಂಸಿನಿ ಅನಾರೋಗ್ಯಕ್ಕೀಡಾಗಿದ್ದು, ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮಧ್ಯಾಹ್ನ 3:08ಕ್ಕೆ ಹಂಸಿನಿ ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷನರ್ ಮಾಹಿತಿ ನೀಡಿದ್ದಾರೆ.
12 ವರ್ಷದ ಈ ಹಂಸಿನಿ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಆ ಎರಡೂ ಮರಿಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು. ಈ ಬಾರಿ ಹಂಸಿನಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಳು. ಹೀಗಾಗಿ ಈ ಬಾರಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಸಿನಿ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆದರೂ ಸಹ ಈ ಬಾರಿಯೂ ಮರಿ ಕಣ್ಣು ಬಿಡುವ ಮೊದಲೇ ಗರ್ಭದಲ್ಲಿ ಸಾವನ್ನಪ್ಪಿತ್ತು. ಇದೀಗ ಕೊನೆಗೆ ತಾಯಿ ಹಂಸಿನಿ ಸಹ ಮೃತಪಟ್ಟಿದೆ.
ಇದೇ ನೀರಾನೆ ಹಂಸಿನಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರನ್ನ ಬಲಿಪಡೆದಿತ್ತು. ಮಾರ್ಚ್ 19 ರಂದು ಮಧ್ಯರಾತ್ರಿ ಹಂಸಿಣಿಗೆ ಚಿಕಿತ್ಸೆ ನೀಡುವಾಗ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ಮಾಡಿತ್ತು. ಈ ಭೀಕರ ದಾಳಿಯಲ್ಲಿ ಡಾ. ಸಮೀಕ್ಷಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯ ನಂತರ ಅದೇನಾಯ್ತೋ ಏನೋ ಹಂಸಿನಿಯ ಗರ್ಭದಲ್ಲೇ ಮರಿ ಸಾವನ್ನಪ್ಪಿತ್ತು. ಬಳಿಕ ತಾಯಿ ಹಂಸಿನಿ ಆರೋಗ್ಯ ಸಹ ಹದಗೆಟ್ಟಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ