AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ 8 ಘಂಟೆಗೆ ಒಬ್ಬಳೇ ಗೃಹ ಸಚಿವರನ್ನು ಭೇಟಿ ಆಗಲು ಹೋಗಿದ್ದೆ, ಅವರು ನನ್ನನ್ನು ಗದರಿಸಿ ಕಳಿಸಿದರು -ಶಿವಮೊಗ್ಗ ಹರ್ಷನ ಸಹೋದರಿ ಅಶ್ವಿನಿ ಬೇಸರ

ಗೃಹ ಸಚಿವರು ನಮ್ಮ ಮನೆಗೆ ಬಂದು ಕಣ್ಣೀರು ಹಾಕಿದ್ದರು. ಈಗ ಅವರನ್ನು ನಾನು ಹುಡುಕಿಕೊಂಡು ಹೋದ್ರೆ ಅವರು ನನಗೆ 10 ನಿಮಿಷ ಟೈಂ ಇಲ್ಲ ಅಂದಿದ್ದಾರೆ. ಅದಕ್ಕೆ ನನಗೆ ಏನು ಮಾಡಬೇಕು ಅಂತಾ ಗೊತ್ತಾಗಿಲ್ಲ.ಅದಕ್ಕೆ ನಾನು ಥ್ಯಾಂಕ್ಯೂ ಸೋ ಮಚ್ ಹೇಳಿ ಬಂದೆ. ಎಷ್ಟೇ ಆಗ್ಲಿ ಅವರು ದೊಡ್ಡವರು - ಹರ್ಷ ಸಹೋದರಿ ಅಶ್ವಿನಿ ಹೇಳಿಕೆ

ರಾತ್ರಿ 8 ಘಂಟೆಗೆ ಒಬ್ಬಳೇ ಗೃಹ ಸಚಿವರನ್ನು ಭೇಟಿ ಆಗಲು ಹೋಗಿದ್ದೆ, ಅವರು ನನ್ನನ್ನು ಗದರಿಸಿ ಕಳಿಸಿದರು -ಶಿವಮೊಗ್ಗ ಹರ್ಷನ ಸಹೋದರಿ ಅಶ್ವಿನಿ ಬೇಸರ
ಆರಗ ಜ್ಞಾನೇಂದ್ರ
TV9 Web
| Updated By: ಸಾಧು ಶ್ರೀನಾಥ್​|

Updated on:Jul 07, 2022 | 6:22 PM

Share

ಶಿವಮೊಗ್ಗ: ಶಿವಮೊಗ್ಗದಲ್ಲಿ(Shivamogga) ಕೊಲೆಯಾದ ಹರ್ಷ ಸಹೋದರಿ ಅಶ್ವಿನಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರನ್ನು ಭೇಟಿಯಾದ ಸಂದರ್ಭದಲ್ಲಿ ವಿವಾದಿತ ವಿಡಿಯೋವೊಂದು ಬಹಿರಂಗಗೊಂಡಿದ್ದು, ಅದು ವೈರಲ್ ಆಗಿದೆ. ಅದರ ಬಗ್ಗೆ ಹರ್ಷ ಸಹೋದರಿ ಅಶ್ವಿನಿ ಟಿವಿ9 ಜೊತೆ ಮಾತನಾಡಿ ಹೇಳಿದ್ದಿಷ್ಟು:

ಹರ್ಷ ಕೊಲೆಗೈದ ಆರೋಪಿಗಳು ಸೆಂಟ್ರಲ್ ಜೈಲ್ ನಿಂದ ವಿಡಿಯೋ ಕಾಲ್ ಮಾಡಿದ್ದರು. ಅದರಲ್ಲಿ ತಮಗೆ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಅದು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೊನ್ನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಗೃಹ ಸಚಿವರನ್ನು ಭೇಟಿಯಾಗಿ ಘಟನೆ ಕುರಿತು ಚರ್ಚೆಗೆ 10 ನಿಮಿಷ ಕಾಲಾವಕಾಶ ಕೇಳಿದೆ. ಸಚಿವರು ಸದ್ಯ ನಾನು ಬ್ಯುಸಿಯಾಗಿರುವೆ. ಟೈಂ ಇಲ್ಲ ಅಂತಾ ಹೇಳಿದರು. ಇವತ್ತೇ ಅಲ್ಲದಿದ್ದರೂ, ನಾಳೆಯಾದ್ರೂ 10 ನಿಮಿಷ ಟೈಂ ಕೊಡಿ ಎಂದು ಕೇಳಿದೆ. ನಾಳೆ ಕೂಡಾ ನಾನು ಬ್ಯುಸಿ ಇರುವುದಾಗಿ ಸಚಿವರು ತಿಳಿಸಿದರು. ಇದಿಷ್ಟು ನಡೆದಿದ್ದು ಎಂದು ಹರ್ಷ ಸಹೋದರಿ ಅಶ್ವಿನಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಹರ್ಷ ಸಹೋದರಿ ಅಶ್ವಿನಿ, ತನ್ನನ್ನು ಭೇಟಿ ಮಾಡಲು ಒಬ್ಬ ಬಾಧಿತ ಯುವತಿ ಬಂದಿದ್ದಾಳೆ ಎಂದು ಗೃಹ ಸಚಿವರು ಕುಳಿತುಕೊಂಡು ಮಾತನಾಡುವ ಸೌಜನ್ಯ ಕೂಡಾ ತೋರಿಲ್ಲ. ಈ ಮಧ್ಯೆ, ಸೆಂಟ್ರೆಲ್ ಜೈಲ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವರ್ಗಾವಣೆ ಅಂತಾ ಹೇಳುತ್ತಿದ್ದೀರಿ. ಆದರೆ ಸಚಿವರೇ ಅವರ ವರ್ಗಾವಣೆ ಬೇಡ.. ಅವರನ್ನ ನೀವು ಸಸ್ಪೆಂಡ್ ಮಾಡಬೇಕೆಂದು ಒತ್ತಾಯಿಸಿದೆ. ನಾನು ವರ್ಗಾವಣೆ ಮಾಡಿಲ್ಲ ಎನ್ನುವ ಉತ್ತರ ಸಚಿವರು ನೀಡಿದರು. ಮೊನ್ನೆ ತಾನೇ ಸಚಿವರು ಮಾಧ್ಯಮಕ್ಕೆ ಜೈಲ್ ನಿಂದ ಹರ್ಷ ಆರೋಪಿಗಳು ವಿಡಿಯೋ ಕಾಲ್ ಪ್ರಕರಣದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ನನ್ನ ಬಳಿ ಮಾತನಾಡುವಾಗ ವರ್ಗಾವಣೆ ಮಾಡಿಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಸಚಿವರ ಹೇಳಿಕೆಯಿಂದ ನನಗೆ ಗೊಂದಲ ಶುರುವಾಯ್ತು. ಕೇಸ್ ಕುರಿತು ಸಚಿವರು ಏನು ತಿಳಿದುಕೊಂಡಿದ್ದಾರೆಂದು ಗೊತ್ತಾಗಲಿಲ್ಲ.

ಬಳಿಕ ಸಚಿವರು ಹರ್ಷ ಕೂಡಾ ನನ್ನ ಸಹೋದರ ಇದ್ದಂಗೆ.. ನಾನು ನಿಮ್ಮ ಕುಟುಂಬದ ಪರವಾಗಿದ್ದೇನೆ. ಏನಮ್ಮಾ ನೀನು ಈ ತರ ಏಲ್ಲಾ ಮಾತನಾಡುತ್ತೀಯಾ.. ಎಂದು ಸಚಿವರು ನನ್ನನ್ನು ಜೋರಾಗಿ ಗದರಿಸಿದರು. ನನ್ನನ್ನು ಗದರಿಸುವ ಬದಲಿಗೆ ಸಚಿವರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರೆ.. ನಾನು ಸಚಿವರನ್ನು ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಜೈಲ್ ನಿಂದ ವಿಡಿಯೋ ಬಿಡುಗಡೆ ಆಗಿ ಒಂದು ವಾರ ಆದ್ರೂ ಇನ್ನೂ ಅವರು ನೋಡೋಣ.. ಮಾಡೋಣ ಅಂತಿದ್ದಾರೆ.. ಆರೋಪಿಗಳು ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿರುವ ದೃಶ್ಯವನ್ನು ನಾವು ಟಿವಿಯಲ್ಲಿ ನೋಡಬೇಕಾಗಿದೆ.

ಇದಕ್ಕೆ ನಾವು ಹೇಗೆ ಪ್ರತಿಕ್ರಿಯೆ ಮಾಡಬೇಕು… ನೀವೇ ಹೇಳಿ, ನನಗೆ ಗೊತ್ತಾಗುತ್ತಿಲ್ಲ ಎಂದು ಗೃಹ ಸಚಿವರ ವರ್ತನೆ ಬಗ್ಗೆ ಹರ್ಷ ಸಹೋದರಿ ಅಶ್ವಿನಿ ಬೇಸರ ವ್ಯಕ್ತಪಡಿಸಿದರು.

ಗೃಹ ಸಚಿವರು ನಮ್ಮ ಮನೆಗೆ ಬಂದು ಕಣ್ಣೀರು ಹಾಕಿದ್ದರು. ಈಗ ಅವರನ್ನು ನಾನು ಹುಡುಕಿಕೊಂಡು ಹೋದ್ರೆ ಅವರು ನನಗೆ 10 ನಿಮಿಷ ಟೈಂ ಇಲ್ಲ ಅಂದಿದ್ದಾರೆ. ಅದಕ್ಕೆ ನನಗೆ ಏನು ಮಾಡಬೇಕು ಅಂತಾ ಗೊತ್ತಾಗಿಲ್ಲ.ಅದಕ್ಕೆ ನಾನು ಥ್ಯಾಂಕ್ಯೂ ಸೋ ಮಚ್ ಹೇಳಿ ಬಂದೆ. ಎಷ್ಟೇ ಆಗ್ಲಿ ಅವರು ದೊಡ್ಡವರು… ರಾತ್ರಿ 8 ಘಂಟೆಗೆ ಒಬ್ಬಳೇ ಗೃಹ ಸಚಿವರನ್ನು ಭೇಟಿ ಆಗಲು ಹೋಗಿದ್ದೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಿಂದ ಒಬ್ಬಳೇ ವಾಪಸ್ ಬರಬೇಕೇಂದ್ರೆ ಎಷ್ಟು ನೋವು ಆಗುತ್ತದೆ. ಒಂದು ಕಡೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ.. ಆ ಕಡೆ ತಮ್ಮನ ಕಳೆದುಕೊಂಡು ತುಂಬಾ ನೋವು ಆಗಿದೆ. ಸಚಿವರು ಸ್ಪಂದಿಸುತ್ತಾರೆ ಎನ್ನುವ ನಂಬಿಕೆ ಮೇಲೆ ಅಲ್ಲಿಗೆ ಹೋಗಿದ್ದೆ.

ಯೋಗಿ ಆದಿತ್ಯನಾಥ, ಮೋದಿ ಅವರನ್ನು ನೋಡಿದಾಗ ಎಲ್ಲೋ ನಮ್ಮಲ್ಲೂ ಅದೇ ತರಾ ನಡೆಯುತ್ತದೆ.. ನಮಗೆ ನ್ಯಾಯ ಸಿಗುತ್ತದೆ ಅಲ್ವಾ ಎನ್ನುವ ನಂಬಿಕೆ ಬಂದುಬಿಡುತ್ತದೆ… ಪ್ರಕರಣ ಈಗಾಗಲೇ ಎನ್ ಐಎ ತನಿಖೆ ಮಾಡುತ್ತಿದೆ. ನಮ್ಮ ಸರಕಾರದ ಮೇಲೆ ತುಂಬಾ ನಂಬಿಕೆ ಇಟ್ಟಿದ್ದೇವೆ. ಹರ್ಷ ಕೊಲೆ ಪ್ರಕರಣದಲ್ಲಿ ನ್ಯಾಯ ಕೊಡಿಸುವಂತೆ ಒತ್ತಾಯ ಮಾಡುತ್ತೇವೆ ಎಂದು ಸರಕಾರಕ್ಕೆ ಹರ್ಷ ಸಹೋದರಿ ಆಶ್ವಿನಿ ಮನವಿ ಮಾಡಿದ್ದಾರೆ.

Published On - 6:17 pm, Thu, 7 July 22